ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮಿತಿ ಮೀರಿದೆ. ಇತ್ತೀಚೆಗೆ ಪ್ರತಿದಿನ 5 ಸಾವಿರಕ್ಕೂ ಅಧಿಕ ಹೊಸ ಸೋಂಕಿತರ ವರದಿಯಾಗುತ್ತಿದೆ. ರಾಜ್ಯದಲ್ಲಿಂದು 5,483 ಸೋಂಕಿತರು ವರದಿಯಾಗಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 1,24,115 ಗೆ ಏರಿಕೆಯಾಗಿದ್ದು, 72,005 ಪ್ರಕರಣಗಳು ಸಕ್ರಿಯವಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದಿನ 2,220 ಸೇರಿದಂತೆ, ಒಟ್ಟು ಸೋಂಕಿತರ ಸಂಖ್ಯೆ 55,544 ಗೆ ಏರಿದ್ದು, 36,523 ಪ್ರಕರಣಗಳು ಸಕ್ರಿಯವಾಗಿವೆ. ಬಳ್ಳಾರಿ (3,619) ಮತ್ತು ದಕ್ಷಿಣ ಕನ್ನಡ (2,940) ಸಕ್ರಿಯ ಪ್ರಕರಣಗಳ ಲೆಕ್ಕಾಚಾರದಲ್ಲಿ ನಂತರದ ಸ್ಥಾನದಲ್ಲಿದೆ.
ಇಂದಿನ ವರದಿಯಲ್ಲಿ ರಾಜ್ಯ ರಾಜಧಾನಿಯನ್ನು ಹೊರತುಪಡಿಸಿ, 5 ಜಿಲ್ಲೆಗಳಲ್ಲಿ 200ಕ್ಕೂ ಅಧಿಕ ಮತ್ತು 9 ಇತರ ಜಿಲ್ಲೆಗಳಲ್ಲಿ 100ಕ್ಕೂ ಅಧಿಕ ಸೋಂಕಿತರ ವರದಿಯಾಗಿದೆ. ಮೈಸೂರು 430, ಬಳ್ಳಾರಿ 340, ಬೆಳಗಾವಿ 217, ಉಡುಪಿ 213, ದಕ್ಷಿಣ ಕನ್ನಡ ಮತ್ತು ಮೈಸೂರು ತಲಾ 204, ಧಾರವಾಡ 180, ಶಿವಮೊಗ್ಗ 158, ಕಲಬುರ್ಗಿ 144, ದಾವಣಗೆರೆ 122, ರಾಯಚೂರು 119, ವಿಜಯಪುರ 118, ಬೆಂಗಳೂರು ಗ್ರಾಮಾಂತರ 105, ಬೀದರ್ 104, ಹಾಸನ 100 ಹೊಸ ಸೋಂಕಿತರ ವರದಿಯಾಗಿದೆ.
ರಾಜ್ಯದಲ್ಲಿ ಕೊರೋನಾ ರಣಕೇಕೆಯ ಮಧ್ಯದಲ್ಲಿ, ಇಂದು ಒಟ್ಟು ಒಟ್ಟು 3,130 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ಇದುವರೆಗೆ, ಒಟ್ಟು 49,788 ಸೋಂಕಿತರು ಗುಣಮುಖರಾಗಿದ್ದಾರೆ.
ರಾಜ್ಯಾದ್ಯಂತ ಕೊರೋನಾ ತನ್ನ ಮರಣ ಮೃದಂಗವನ್ನು ಮುಂದುವರೆಸಿದ್ದು, ಇಂದು 84 ಸೋಂಕಿತರನ್ನು ಬಲಿ ತೆಗೆದುಕೊಂಡಿದೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 2,314 ಗೆ ಏರಿದೆ.