ರಾಜ್ಯದಲ್ಲಿ ಕೊರೋನಾ ರಣ ಅಟ್ಟಹಾಸ ಮಿತಿ ಮೀರಿದೆ. ಇಂದು ಬೆಂಗಳೂರಿನಲ್ಲಿ ದಾಖಲೆಯ 1,975 ಹೊಸ ಸೋಂಕಿತರ ವರದಿಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಮೊದಲ ಬಾರಿಗೆ 3 ಸಾವಿರಕ್ಕೂ ಅಧಿಕ ಸೋಂಕಿತರ ವರದಿಯಾಗಿದೆ. ಇಂದಿನ 3,176 ಸೇರಿ, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 47,253 ಗೆ ಏರಿಕೆಯಾಗಿದ್ದು, 27,853 ಸಕ್ರಿಯ ಪ್ರಕರಣಗಳಿವೆ.
ರಾಷ್ಟ್ರಕ್ಕೆ ಮಾದರಿ ನಗರವಾಗಿದ್ದ ಬೆಂಗಳೂರಿನಲ್ಲಿ ಪ್ರತಿದಿನ ಸಾವಿರಕ್ಕೂ ಅಧಿಕ ಸೋಂಕಿತರ ವರದಿಯಾಗುತ್ತಿದ್ದು, ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 17,051 ಗೆ ಏರಿದೆ. ದಕ್ಷಿಣ ಕನ್ನಡ (1,566) ಮತ್ತು ಬಳ್ಳಾರಿ (874) ಸಕ್ರಿಯ ಪ್ರಕರಣಗಳ ಲೆಕ್ಕಾಚಾರದಲ್ಲಿ ನಂತರದ ಸ್ಥಾನದಲ್ಲಿದೆ.
ಅದಲ್ಲದೆ ರಾಜ್ಯ ರಾಜಧಾನಿದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 22,000 ದಾಟಿದ್ದು, ಹಲವರ ಸೋಂಕಿನ ಮೂಲವೇ ಸಿಗದಿರುವುದು ಸರ್ಕಾರಕ್ಕೆ ತಲೆ ನೋವುಂಟುಮಾಡಿದೆ ಮತ್ತು ಜನತೆಯಲ್ಲಿ ಆತಂಕವನ್ನು ಹೆಚ್ಚಿಸಿದೆ.
ಇಂದಿನ ವರದಿಯಲ್ಲಿ ರಾಜ್ಯ ರಾಜಧಾನಿಯನ್ನು ಹೊರತುಪಡಿಸಿ, ಧಾರವಾಡ 139, ಬಳ್ಳಾರಿ 136, ಮೈಸೂರು 99 ಸೋಂಕಿತರ ಪತ್ತೆಯಾಗಿ ನಂತರದ ಸ್ಥಾನದಲ್ಲಿದೆ.
ರಾಜ್ಯದಲ್ಲಿ ಕೊರೋನಾ ರಣಕೇಕೆಯ ಮಧ್ಯದಲ್ಲಿ, ಇಂದು ಒಟ್ಟು 1,076 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ರಾಜ್ಯದಲ್ಲಿ ಇದುವರೆಗೆ, ಒಟ್ಟು 18,466 ಸೋಂಕಿತರು ಗುಣಮುಖರಾಗಿದ್ದಾರೆ.
ರಾಜ್ಯಾದ್ಯಂತ ಕೊರೋನಾ ತನ್ನ ಮರಣ ಮೃದಂಗವನ್ನು ಮುಂದುವರೆಸಿದ್ದು, ಇಂದು ದಾಖಲೆಯ 87 ಸೋಂಕಿತರನ್ನು ಬಲಿ ತೆಗೆದುಕೊಂಡಿದೆ. ಬೆಂಗಳೂರು ನಗರವೊಂದರಲ್ಲೇ ಇಂದು 60 ಸೋಂಕಿತರು ಕೊರೋನಾಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ 928 ಸೋಂಕಿತರು ಸಾವನ್ನಪ್ಪಿದ್ದಾರೆ.