ಕೊರೋನಾ : ರಾಜ್ಯದಲ್ಲಿ ಸತತ ಎರಡನೇ ದಿನ 5 ಸಾವಿರಕ್ಕೂ ಅಧಿಕ ಸೋಂಕಿತರ ವರದಿ!

0
39

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮಿತಿ ಮೀರಿದೆ. ಅದರಲ್ಲೂ ರಾಜ್ಯ ರಾಜಧಾನಿಯಲ್ಲಿ ಪ್ರತಿದಿನವೂ ಸಹಸ್ರಾರು ಸಂಖ್ಯೆಯಲ್ಲಿ ಸೋಂಕಿತರ ವರದಿಯಾಗುತ್ತಿದೆ. ಬೆಂಗಳೂರು ನಗರದಲ್ಲಿ ಇಂದು, 2,267 ಹೊಸ ಸೋಂಕಿತರ ವರದಿಯಾಗಿದೆ. ಇದನ್ನೂ ಸೇರಿದಂತೆ, ರಾಜ್ಯದಲ್ಲಿಂದು 5,007 ಸೋಂಕಿತರು ದಾಖಲಾಗಿದ್ದಾರೆ. ರಾಜ್ಯದಲ್ಲಿ ಸತತ ಎರಡನೇ ದಿನ 24 ಗಂಟೆಯಲ್ಲಿ 5 ಸಾವಿರಕ್ಕೂ ಅಧಿಕ ಸೋಂಕಿತರ ಪತ್ತೆಯಾಗಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 85,870 ಕ್ಕೆ ಏರಿಕೆಯಾಗಿದ್ದು, 52,791 ಪ್ರಕರಣಗಳು ಸಕ್ರಿಯವಾಗಿದೆ.

ರಾಷ್ಟ್ರಕ್ಕೆ ಮಾದರಿ ನಗರವಾಗಿದ್ದ ಬೆಂಗಳೂರಿನಲ್ಲಿ ಇಂದಿನ 2,267 ಸೇರಿದಂತೆ, ಸಕ್ರಿಯ ಪ್ರಕರಣಗಳ ಸಂಖ್ಯೆ 30,561 ಗೆ ಏರಿದೆ. ದಕ್ಷಿಣ ಕನ್ನಡ (2,527) ಮತ್ತು ಧಾರವಾಡ (1,784) ಸಕ್ರಿಯ ಪ್ರಕರಣಗಳ ಲೆಕ್ಕಾಚಾರದಲ್ಲಿ ನಂತರದ ಸ್ಥಾನದಲ್ಲಿದೆ.

ಇಂದಿನ ವರದಿಯಲ್ಲಿ ರಾಜ್ಯ ರಾಜಧಾನಿಯನ್ನು ಹೊರತುಪಡಿಸಿ, 1 ಜಿಲ್ಲೆಯಲ್ಲಿ 200ಕ್ಕೂ ಅಧಿಕ ಮತ್ತು 11 ಇತರ ಜಿಲ್ಲೆಗಳಲ್ಲಿ 100ಕ್ಕೂ ಅಧಿಕ ಸೋಂಕಿತರ ವರದಿಯಾಗಿದೆ. ಮೈಸೂರು 281, ಉಡುಪಿ 190, ಬಾಗಲಕೋಟೆ 184, ದಕ್ಷಿಣ ಕನ್ನಡ 180, ಧಾರವಾಡ 174, ಕಲಬುರ್ಗಿ 159, ವಿಜಯಪುರ 158, ಬಳ್ಳಾರಿ 136, ಹಾಸನ 118, ಬೆಳಗಾವಿ 116, ಗದಗ 108, ರಾಯಚೂರು 107 ಹೊಸ ಸೋಂಕಿತರ ಪತ್ತೆಯಾಗಿದೆ.

ರಾಜ್ಯದಲ್ಲಿ ಕೊರೋನಾ ರಣಕೇಕೆಯ ಮಧ್ಯದಲ್ಲಿ, ಇಂದು ಒಟ್ಟು ದಾಖಲೆಯ 2,037 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ಇದುವರೆಗೆ, ಒಟ್ಟು 31,347 ಸೋಂಕಿತರು ಗುಣಮುಖರಾಗಿದ್ದಾರೆ.

ರಾಜ್ಯಾದ್ಯಂತ ಕೊರೋನಾ ತನ್ನ ಮರಣ ಮೃದಂಗವನ್ನು ಮುಂದುವರೆಸಿದ್ದು, ಇಂದು 110 ಸೋಂಕಿತರನ್ನು ಬಲಿ ತೆಗೆದುಕೊಂಡಿದೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 1,724 ಗೆ ಏರಿದೆ.

LEAVE A REPLY

Please enter your comment!
Please enter your name here