ಕೊರೋನಾ ಪ್ರಕರಣಗಳ ಇಂದಿನ ವರದಿ ಹೊರಬಿದ್ದಿದ್ದು, ಸತತ ಐದನೇ ದಿನ ಬೆಂಗಳೂರಿನಲ್ಲಿ ಹೊಸ ಸೋಂಕಿತರ ಸಂಖ್ಯೆ ನೂರು ದಾಟಿದೆ. ಬೆಂಗಳೂರಿನ 113ನ್ನು ಸೇರಿದಂತೆ, ರಾಜ್ಯದಲ್ಲಿ ಒಟ್ಟು 442 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದ, ಒಟ್ಟು ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 3,716ಕ್ಕೆ ಏರಿದಂತಾಗಿದೆ. ಬೆಂಗಳೂರು ಹೊರತುಪಡಿಸಿ, ಇತರ ಯಾವುದೇ ಜಿಲ್ಲೆಯಲ್ಲೂ ಈಗ 500ಕ್ಕೂ ಅಧಿಕ ಸಕ್ರಿಯ ಪ್ರಕರಣಗಳು ಇಲ್ಲ.
ಇಂದಿನ ವರದಿಯಲ್ಲಿ ರಾಜ್ಯ ರಾಜಧಾನಿಯನ್ನು ಹೊರತುಪಡಿಸಿ, ಇತರ ಯಾವುದೇ ಜಿಲ್ಲೆಯಲ್ಲೂ, 40ಕ್ಕೂ ಅಧಿಕ ಸೋಂಕಿತರು ಪತ್ತೆ ಆಗಲಿಲ್ಲ. ಕಲಬುರ್ಗಿ(35) ಮತ್ತು ರಾಮನಗರ (33) ನಂತರದ ಸ್ಥಾನದಲ್ಲಿದೆ.
ಅದಲ್ಲದೆ, ಇಂದು ರಾಜ್ಯದಲ್ಲಿ ಒಟ್ಟು 519 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ಯಾದಗಿರಿಯಲ್ಲಿ ಗರಿಷ್ಠ 118 ಸೋಂಕಿತರು ಗುಣಮುಖರಾಗಿದ್ದಾರೆ. ದಕ್ಷಿಣ ಕನ್ನಡ(88) ಮತ್ತು ಬಳ್ಳಾರಿ (49) ನಂತರದ ಸ್ಥಾನದಲ್ಲಿದೆ. ರಾಜ್ಯದಲ್ಲಿ ಇದುವರೆಗೆ, ಒಟ್ಟು 6670 ಸೋಂಕಿತರು ಗುಣಮುಖರಾಗಿದ್ದಾರೆ. ಉಡುಪಿ ಜಿಲ್ಲೆಯೊಂದರಲ್ಲೇ ಒಟ್ಟು 1,011 ಮಂದಿ ಗುಣಮುಖ.
ಬೆಂಗಳೂರಿನ 3 ಸೋಂಕಿತರು ಸೇರಿದಂತೆ ರಾಜ್ಯಾದ್ಯಂತ ಒಟ್ಟು 6 ಮಂದಿ ಇಂದು ಕೊರೋನಾಗೆ ಬಲಿಯಾಗಿದ್ದಾರೆ.