ದೆಹಲಿ (ಜೂನ್ 06); ಕೋವಿಡ್ -19 ರೋಗಿಗಳಿಗೆ ರಾಷ್ಟ್ರ ರಾಜಧಾನಿಯಲ್ಲಿ ಆಸ್ಪತ್ರೆ ಹಾಸಿಗೆಗಳ ಕೊರತೆಯಿಲ್ಲ. ರೋಗ ಲಕ್ಷಣ ಇರುವ ಯಾರನ್ನೂ ಖಾಸಗಿ ಆಸ್ಪತ್ರೆಗಳು ಅಲೆದಾಡಿಸುವಂತಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಹಾಸಿಗೆಗಳಲ್ಲಿ ಬ್ಲಾಕ್ ಮಾರ್ಕೆಟ್ನಲ್ಲಿ ಮಾರಿಕೊಳ್ಳುವ ಮೂಲಕ ಲಕ್ಷಾಂತರ ರೂ. ಹಣ ಕೀಳುವಂತಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಖಾಸಗಿ ಆಸ್ಪತ್ರೆಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ಕೆಲವು ಆಸ್ಪತ್ರೆಗಳು ಮಾಫಿಯಾ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇಂತಹ ಮಾಫಿಯಾವನ್ನು ಮುರಿಯಲು ಸಮಯಾವಕಾಶ ಬೇಕು. ಕೆಲವರಿಗೆ ರಾಜಕೀಯ ಮುಖಂಡರ ಪರಿಚಯವಿದೆ. ಇವರು ತಮ್ಮನ್ನು ಉಳಿಸಬಹುದು ಎಂಬ ಭ್ರಮೆಯಲ್ಲಿ ಈ ಮಾಫಿಯಾಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ, ಕಾನೂನಿನ ಕುಣಿಕೆಯಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಎಚ್ಚರಿಸಿದ್ದಾರೆ.