ನವದೆಹಲಿ: ಭಾರತದಲ್ಲಿ ಕೊರೋನಾ ಸೋಂಕು ಪತ್ತೆ ಪರೀಕ್ಷೆ ಸಂಖ್ಯೆ 10 ಕೋಟಿ ದಾಟಿದ್ದು, ಹದಿನೇಳು ದಿನಗಳಿಂದ ಪ್ರತಿ ನಿತ್ಯ 10 ಲಕ್ಷಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.
ಇಲ್ಲಿವರೆಗೆ ಪ್ರತಿ 10 ಲಕ್ಷ ಜನಸಂಖ್ಯೆಗೆ 74 ಸಾವಿರ ಮಂದಿಯಂತೆ ಪರೀಕ್ಷೆ ಮಾಡಲಾಗಿದೆ. ಹೀಗೆ ಕೇವಲ 45 ದಿನಗಳಲ್ಲಿ 5 ಕೋಟಿ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್ ವಿಜ್ಞಾನಿ ಮತ್ತು ಮಾಧ್ಯಮ ಸಮನ್ವಯಕಾರ ಲೋಕೇಶ್ ಶರ್ಮಾ ತಿಳಿಸಿದ್ದಾರೆ.
’ಸೆ.8ರ ವೇಳೆಗೆ ಭಾರತದಲ್ಲಿ 5 ಕೋಟಿ ಜನರನ್ನು ಪರೀಕ್ಷಿಸಲಾಗಿತ್ತು. ಅ. 22ರ ಹೊತ್ತಿಗೆ, ಈ ಸಂಖ್ಯೆ 10 ಕೋಟಿ ತಲುಪಿದೆ’ ಎಂದು ಶರ್ಮಾ ಹೇಳಿದರು.
’ದೇಶದಾದ್ಯಂತ ಪರೀಕ್ಷೆಗೆ ಬೇಕಾದ ಮೂಲಸೌಕರ್ಯ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಕೊರೊನಾ ಸೋಂಕು ಪತ್ತೆ ಪರೀಕ್ಷೆಯನ್ನು ತೀವ್ರಗೊಳಿಸಲಾಗಿದೆ. ತಂತ್ರಜ್ಞಾನ ಸದುಪಯೋಗಪಡಿಸಿಕೊಂಡು, ರೋಗ ಪತ್ತೆ ಮಾಡುವ ಕಿಟ್ಗಳನ್ನು ತಯಾರಿಸುವ ಸಂಶೋಧನೆಗಳಿಗೂ ಐಸಿಎಂಆರ್ ಪ್ರೋತ್ಸಾಹ ನೀಡುತ್ತಿದೆ’ ಎಂದು ತಿಳಿಸಿದರು.