ಮಂಗಳೂರು : ವಿವಿ ಕಾಲೇಜಿನಲ್ಲಿ “ಕೊಳಲು” ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ

0
159
Tap to know MORE!

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಿದ್ಧರಾಜುರವರ ‘ಕೊಳಲು’ ಎಂಬ ಕವನ ಸಂಕಲನದ ಬಿಡುಗಡೆ ಸಮಾರಂಭ ಬುಧವಾರ ನಡೆಯಿತು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ ಕುಲಪತಿ ಪ್ರೊ. ಪಿ. ಎಸ್. ಯಡಪಡಿತ್ತಾಯ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು. “ಕವನ ಸಂಕಲನದಲ್ಲಿರುವ 77 ಕವಿತಗಳಲ್ಲಿ ಒಂದಕ್ಕೊಂದು ವಿಭಿನ್ನವಾಗಿವೆ. ಕೃಷ್ಣನ ಪ್ರೀತಿ, ತುಂಟತನ, ರಾಧೆಯ ಅನುರಾಗ, ಆತಂಕಗಳಿಗೆ ಅಕ್ಷರಗಳನ್ನು ತುಂಬುತ್ತಾ ಈಗಿನ ಯುವಜನಾಂಗದ ಭಾವನೆಗಳಿಗೆ ಪದರೂಪ ಕೊಟ್ಟಿದ್ದಾರೆ. ಹಾಗೆಯೇ ಭೂಮಿ, ಭಾನು, ನದಿ-ಸಾಗರ, ಹಣತೆ, ರಂಗೋಲಿ, ಬುದ್ಧ, ಯಶೋಧರೆ, ಕರೋನ, ಎಲ್ಲದಕ್ಕೂ ಜೀವ ತುಂಬಿ ಸಾಮಾಜಿಕ ಸಮಸ್ಯೆಗಳು, ಜೀವನ ಪ್ರೀತಿ, ಮನಸಿನ ಗೊಂದಲಗಳು ಹೀಗೆ ಹಲವು ವಿಷಯಗಳ ಬಗ್ಗೆ ತಮ್ಮದೇ ನಿಲುವುಗಳನ್ನು ಪ್ರಸ್ತಾಪಿಸಿದ್ದಾರೆ,” ಎಂದರು.

ಇದನ್ನೂ ಓದಿ: ವಿವಿ ಕಾಲೇಜು: ಗ್ಯಾಟ್‌- ಬಿ ಪರೀಕ್ಷೆಯಲ್ಲಿ 68ನೇ ರ‍್ಯಾಂಕ್ ಪಡೆದ ಮರಿಯಂ ರಝಾನಾ

“ಲೇಖಕರು ವಿವಿ ಕಾಲೇಜಿನ ಇನ್ನೋವೇಶನ್ ಕ್ಲಬ್ ಉಪ ನಿರ್ದೆಶಕರಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ರೋವರ್ಸ್ ಮತ್ತು ರೇಂಜರ್ಸ್ ನೋಡಲ್ ಅಧಿಕಾರಿಯಾಗಿ ವಿವಿಧ ಆಯಾಮಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಬಿಡುವಿನ ವೇಳೆಯಲ್ಲಿ ಚಿತ್ರಕಲೆ, ಸಾಹಿತ್ಯ, ಬರಹದಂತ ಉತ್ತಮ ಹವ್ಯಾಸವನ್ನು ಹೊಂದಿರುವ ಇವರು ಉತ್ತಮ ಕ್ರೀಡಾಪಟುವು ಹೌದು. ಅವರೇ ಹೇಳಿಕೊಂಡಂತೆ ಬಾಲ್ಯದಿಂದ ಶುರುವಾದ ಅವರ ಕವಿ ಪಯಣ ಇಂದು ಪುಸ್ತಕ ರೂಪ ಪಡೆದಿದೆ. ಪ್ರತಿ ಕವನಗಳ ಅರ್ಥವನ್ನು ಇಮ್ಮಡಿಗೊಳಿಸೋ ಚಿತ್ರಗಳು ಇವರ ಪುಸ್ತಕದ ವಿಶೇಷ”, ಎಂದರು.

ಕಾರ‍್ಯಕ್ರಮದಲ್ಲಿ ಪ್ರೊ. ಪ್ರಶಾಂತ ನಾಯ್ಕ, ಸಹ ಪ್ರಾಧ್ಯಾಪಕ ಡಿ.ಪಿ. ಅಂಗಡಿ ಮತ್ತು ಡಾ. ಅನಿತ ಉಪಸ್ಥಿತರಿದ್ದರು. ಡಾ. ಸಿದ್ಧರಾಜು ರವರು ಪುಸ್ತಕ ಪರಿಚಯಿಸಿದರು.

LEAVE A REPLY

Please enter your comment!
Please enter your name here