ಕೊಳುವೈಲು : ವಿದ್ಯಾವಿನಾಯಕ ಯುವಕ ಮಂಡಲದ ನೇತೃತ್ವದಲ್ಲಿ ಕೃಷಿಕರ ಅಂಗಳದಲ್ಲಿ ಕೃಷಿ ಮಾಹಿತಿ ಶಿಬಿರ

0
251
Tap to know MORE!

ಹಳೆಯಂಗಡಿ :- ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ನೇತೃತ್ವದಲ್ಲಿ “ಕೃಷಿಕರ ಅಂಗಳದಲ್ಲಿ ಕೃಷಿ ಮಾಹಿತಿ ಶಿಬಿರ” ಎರಡನೇ ಕಾರ್ಯಾಗಾರವು ಪಡುಪಣಂಬೂರು ವ್ಯವಸಾಯಿಕ ಸೇವಾ ಸಹಕಾರಿ ಸಂಘ ನಿಯಮಿತ ಹಳೆಯಂಗಡಿ ಇದರ ಅಧ್ಯಕ್ಷರಾದ ಎಸ್. ಎಸ್ . ಸತೀಶ್ ಭಟ್ ಕೊಳುವೈಲು ಇವರ ಮನೆಯ ವಠಾರದಲ್ಲಿ ನಡೆಯಿತು.

ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಸುವರ್ಣ ಮಹೋತ್ಸವದ ಅಂಗವಾಗಿ ನಡೆಸುತ್ತಿರುವ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಸಲುವಾಗಿ ಪಡುಪಣಂಬೂರು ವ್ಯವಸಾಯಿಕ ಸೇವಾ ಸಹಕಾರಿ ಸಂಘ ಹಳೆಯಂಗಡಿ ಇವರ ಸಹಯೋಗದೊಂದಿಗೆ ಅಕ್ಟೋಬರ್ 4 ರಂದು ಯಶಸ್ವಿಯಾಗಿ ನಡೆಯಿತು.

ಶ್ರೀ ವಿದ್ಯಾವಿನಾಯಕ ರಜತ ಸೇವಾ ಟ್ರಸ್ಟ್, ಮಂಡಲದ ಸುವರ್ಣ ಮಹೋತ್ಸವ ಸಮಿತಿ ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತ ಯುವತಿ ಮತ್ತು ಮಹಿಳಾ ಮಂಡಲದ ಸಹಕಾರದಲ್ಲಿ ಕಾರ್ಯಾಗಾರವು ಜರುಗಿತು.

ಕಾರ್ಯಕ್ರಮದ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ವಿನೋದ್ ಕುಮಾರ್ ಬೊಳ್ಳುರು, ಪಡುಪಣಂಬೂರು ವ್ಯವಸಾಯಿಕ ಸೇವಾ ಸಹಕಾರಿ ಸಂಘ ನಿಯಮಿತ ಹಳೆಯಂಗಡಿ ಇದರ ಅಧ್ಯಕ್ಷರಾದ ಶ್ರೀ ಎಸ್.ಎಸ್. ಸತೀಶ್ ಭಟ್ ಕೊಳುವೈಲು ಭಾಗವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಮೂಲ್ಕಿ ಹೋಬಳಿ ಇದರ ಕೃಷಿ ಅಧಿಕಾರಿ ಶ್ರೀ ಅಬ್ದುಲ್ ಬಶೀರ್ ಹಾಗೂ ಪಡುಪಣಂಬೂರು ವ್ಯವಸಾಯಿಕ ಸೇವಾ ಸಹಕಾರಿ ಸಂಘ ನಿಯಮಿತ ಹಳೆಯಂಗಡಿ ಇಲ್ಲಿನ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಹಿಮಕರ ಟಿ ಸುವರ್ಣ ಭಾಗವಹಿಸಿದ್ದರು.

ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ವಿನೋದ್ ಕುಮಾರ್ ಬೊಳ್ಳೂರು, “ಯುವಕರು ಒಟ್ಟಾಗಿ ಹಡಿಲು ಭೂಮಿಯನ್ನು ಕೃಷಿಕಾರ್ಯಕ್ಕೆ ಅನುಕೂಲವಾಗುವಂತೆ ಮಾಡಿ ದೇಶದ ಆಹಾರ ಉತ್ಪಾದನೆ ಅಭಿವೃದ್ಧಿ ಪಡಿಸುವಲ್ಲಿ ಗಮನ ನೀಡಬೇಕು ಹಾಗೂ ಆಧುನಿಕ ಕೃಷಿಯ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಬೇಕು” ಎಂದು ತಿಳಿಸಿದರು.

ಶ್ರೀ ಎಸ್.ಎಸ್. ಸತೀಶ್ ಭಟ್ ಕೊಳುವೈಲು ಇವರು ಮಾತನಾಡುತ್ತಾ, “ಕೃಷಿಕರ ಮನೆಯಂಗಳದಲ್ಲಿ ಕೃಷಿ ಮಾಹಿತಿ ಶಿಬಿರ ಒಂದು ಅತ್ಯುತ್ತಮ ಕಾರ್ಯಗಾರವಾಗಿದ್ದು ಕೃಷಿಕರಿಗೆ ಸರಕಾರ ಹಾಗೂ ಇಲಾಖೆಯ ಮುಖಾಂತರ ದೊರಕುವ ಸೌಲಭ್ಯಗಳ ಸಂಪೂರ್ಣ ಮಾಹಿತಿ ಮನೆ ಬಾಗಿಲಿಗೆ ದೊರಕುತ್ತಿದೆ. ಅದೇ ರೀತಿ ಸೊಸೈಟಿಯ ಮುಖಾಂತರ ನೀಡಲ್ಪಡುವ ವಿವಿಧ ಸವಲತ್ತುಗಳನ್ನು ಹೆಚ್ಚು ಹೆಚ್ಚು ಕೃಷಿಕರು ಪಡೆದು ಕೊಂಡು ಅದರ ಸದುಪಯೋಗ ಪಡೆಯುತ್ತಾ ಮುಂದಿನ ದಿನಗಳಲ್ಲಿ ಸೊಸೈಟಿಯಲ್ಲಿ ಇನ್ನೂ ಹೆಚ್ಚಿನ ಕೃಷಿ ಕ್ಷೇತ್ರದಲ್ಲಿ ಸಹಕಾರ ನೀಡಲಾಗುವುದು” ಎಂದು ತಿಳಿಸಿದರು.

ವೇದಿಕೆಯಲ್ಲಿ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಯತೀಶ್ ಕೋಟ್ಯಾನ್, ಸುವರ್ಣ ಮಹೋತ್ಸವ ಸಮಿತಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಕಾರ್ಯಾಧ್ಯಕ್ಷರಾದ ಶ್ರೀ ಸುಧಾಕರ ಆರ್ ಅಮೀನ್, ಸಲಹಾ ಸಮಿತಿಯ ಅಧ್ಯಕ್ಷರಾದ ಶ್ರೀ ಸದಾಶಿವ ಅಂಚನ್ ಚೀಲಿಂಬಿ, ಯುವತಿ ಮಂಡಲದ ಅಧ್ಯಕ್ಷರಾದ ಕುಮಾರಿ ದಿವ್ಯಶ್ರೀ ರಮೇಶ್ ಕೋಟ್ಯಾನ್, ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ರೇಷ್ಮಾ ಅಶ್ರಫ್, ಸುವರ್ಣ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಮದಾಸ್ ಪಾವಂಜೆ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಮೂಲ್ಕಿ ಹೋಬಳಿ ಇದರ ಕೃಷಿ ಅಧಿಕಾರಿ ಶ್ರೀ ಅಬ್ದುಲ್ ಬಶೀರ್ ಇವರು ಕೃಷಿ ಇಲಾಖೆಯಿಂದ ಕೃಷಿಕರಿಗೆ ದೊರಕುವ ವಿವಿಧ ಸವಲತ್ತುಗಳು, ಕೃಷಿ ವಿಮೆ, ಆಧುನಿಕ ಕೃಷಿಯ ಬಗ್ಗೆ ಮಾಹಿತಿ, ವಿವಿಧ ಬಿತ್ತನೆ ಬೀಜಗಳ ಬಗ್ಗೆ ಮಾಹಿತಿ ಹಾಗೂ ನೂತನ ಕೃಷಿ ಸಲಕರಣೆಗಳ ಬಳಕೆ ಮತ್ತು ಅದರ ಸದುಪಯೋಗದ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.

ಪಡುಪಣಂಬೂರು ವ್ಯವಸಾಯಿಕ ಸೇವಾ ಸಹಕಾರಿ ಸಂಘ ನಿಯಮಿತ ಹಳೆಯಂಗಡಿ ಇಲ್ಲಿನ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಹಿಮಕರ ಟಿ ಸುವರ್ಣ ಇವರು ಬ್ಯಾಂಕಿನಿಂದ ಕೃಷಿಕರಿಗೆ ನೀಡಲ್ಪಡುವ ವಿವಿಧ ಸವಲತ್ತುಗಳು, ಬಡ್ಡಿ ರಹಿತ ಸಾಲ ಸೌಲಭ್ಯಗಳು, ಕೋಳಿ ಸಾಕಣೆ, ದನ ಸಾಕಣೆ, ಅಡಿಕೆ, ತೆಂಗು ಹಾಗೂ ಇನ್ನಿತರ ಉದ್ದಿಮೆಗಳನ್ನು ಮಾಡುವರೇ ಸಹಕಾರ ಹಾಗೂ ಸಾಲ ಸೌಲಭ್ಯಗಳು, ಸಬ್ಸಿಡಿ ದರದಲ್ಲಿ ಕೃಷಿಕರಿಗೆ ದೊರಕುವ ರಸಗೊಬ್ಬರಗಳ ಬಗ್ಗೆ ವಿಶೇಷವಾಗಿ ಸೂಕ್ತ ಸಲಹೆಗಳನ್ನು ನೀಡಿ ಸಹಕರಿಸಿದರು.

ಇದೇ ಸಂದರ್ಭದಲ್ಲಿ ಮೂಲ್ಕಿ ಹೋಬಳಿ ಇದರ ಕೃಷಿ ಅಧಿಕಾರಿ ಶ್ರೀ ಅಬ್ದುಲ್ ಬಶೀರ್ ಇವರು ಮಣ್ಣಿನ ಪರೀಕ್ಷೆಯ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಕೊಳುವೈಲು ವ್ಯಾಪ್ತಿಯ ಅನೇಕ ಕೃಷಿಕರು ಈ ಕಾರ್ಯಕ್ರಮದ ಸಂಪೂರ್ಣ ಸದುಪಯೋಗವನ್ನು ಪಡೆದುಕೊಂಡರು. ಜಂಟಿ ಸಂಸ್ಥೆಗಳ ಹೆಚ್ಚಿನ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸುವರ್ಣ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಮದಾಸ್ ಪಾವಂಜೆ ನಿರೂಪಿಸಿದರು.

LEAVE A REPLY

Please enter your comment!
Please enter your name here