ಕೋವಿಡ್-19 : ರಾಜ್ಯದಲ್ಲಿಂದು 1,498 ಸೋಂಕಿತರ ವರದಿ

0
58

ರಾಜ್ಯದಲ್ಲಿ ಕೊರೋನಾ ಆರ್ಭಟ ಮುಂದುವರಿದಿದ್ದು, ಬೆಂಗಳೂರಿನ 800 ಸೇರಿದಂತೆ, ರಾಜ್ಯದಲ್ಲಿ ಇಂದು ಒಟ್ಟು 1,498 ಸೋಂಕಿತರ ವರದಿಯಾಗಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 26,815 ಗೆ ಏರಿಕೆಯಾಗಿದ್ದು, 15,297 ಸಕ್ರಿಯ ಪ್ರಕರಣಗಳಿವೆ.

ರಾಷ್ಟ್ರಕ್ಕೆ ಮಾದರಿ ನಗರವಾಗಿದ್ದ ಬೆಂಗಳೂರಿನಲ್ಲಿ 800 ಸೋಂಕಿತರ ವರದಿಯಾಗಿದೆ. ರಾಜಧಾನಿಯಲ್ಲಿ ಹೆಚ್ಚುತ್ತಿರುವ ಸೋಂಕಿನ ಭೀತಿಯಿಂದ, ಹಲವಾರು ವಲಸೆ ಕಾರ್ಮಿಕರು ಬೆಂಗಳೂರು ಬಿಟ್ಟು ಮರಳಿ ತಮ್ಮ ಗ್ರಾಮಕ್ಕೆ ಮರಳುತ್ತಿದ್ದಾರೆ. ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 9395 ಗೆ ಏರಿದೆ. ಬಳ್ಳಾರಿ (755) ಮತ್ತು ದಕ್ಷಿಣ ಕನ್ನಡ (677) ಸಕ್ರಿಯ ಪ್ರಕರಣಗಳ ಲೆಕ್ಕಾಚಾರದಲ್ಲಿ ನಂತರದ ಸ್ಥಾನದಲ್ಲಿದೆ. ಇತರ ಯಾವುದೇ ಜಿಲ್ಲೆಗಳಲ್ಲೂ 400ಕ್ಕೂ ಅಧಿಕ ಪ್ರಕರಣಗಳು ಸಕ್ರಿಯವಾಗಿಲ್ಲ.

ಅದಲ್ಲದೆ ರಾಜ್ಯ ರಾಜಧಾನಿದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 11,000 ದಾಟಿದ್ದು, ಹಲವರ ಸೋಂಕಿನ ಮೂಲವೇ ಸಿಗದಿರುವುದು ಸರ್ಕಾರಕ್ಕೆ ತಲೆ ನೋವುಂಟುಮಾಡಿದೆ.

ರಾಜ್ಯದಲ್ಲಿ ಕೊರೋನಾ ರಣಕೇಕೆಯ ಮಧ್ಯದಲ್ಲಿ, ಇಂದು ಒಟ್ಟು 571 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ಬೆಂಗಳೂರು ನಗರವೊಂದರಲ್ಲೇ 265 ಸೋಂಕಿತರು ಗುಣಮುಖರಾಗಿರುತ್ತಾರೆ. ರಾಜ್ಯದಲ್ಲಿ ಇದುವರೆಗೆ, ಒಟ್ಟು 11,098 ಸೋಂಕಿತರು ಗುಣಮುಖರಾಗಿದ್ದಾರೆ.

ಇಂದಿನ ವರದಿಯಲ್ಲಿ ರಾಜ್ಯ ರಾಜಧಾನಿಯನ್ನು ಹೊರತುಪಡಿಸಿ, ದಕ್ಷಿಣ ಕನ್ನಡದಲ್ಲಿ 83 ಮತ್ತು ಧಾರವಾಡದಲ್ಲಿ 53 ಸೋಂಕಿತರ ಪತ್ತೆಯಾಗಿ ನಂತರದ ಸ್ಥಾನದಲ್ಲಿದೆ.

ರಾಜ್ಯಾದ್ಯಂತ ಕೊರೋನಾ ತನ್ನ ಮರಣ ಮೃದಂಗವನ್ನೂ ಮುಂದುವರೆಸಿದ್ದು, ಇಂದು 15 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಇದುವರೆಗೆ 416 ಸೋಂಕಿತರು ಸಾವನ್ನಪ್ಪಿದ್ದಾರೆ.ಇಂದು ಬೀದರ್ ಮತ್ತು ಮೈಸೂರಿನಲ್ಲಿ ತಲಾ 4, ಕಲಬುರ್ಗಿ 2, ಧಾರವಾಡ, ಹಾಸನ, ದಾವಣಗೆರೆ, ಬಾಗಲಕೋಟೆ ಮತ್ತು ಬೆಳಗಾವಿಯಲ್ಲಿ ತಲಾ 1 ಸೋಂಕಿತರು ಸಾವನ್ನಪ್ಪಿದ್ದಾರೆ.

LEAVE A REPLY

Please enter your comment!
Please enter your name here