ಕ್ರಾಂತಿಕಾರೀ ಪರಂಪರೆಗೆ ನಾಂದಿ ಹಾಡಿದ ಅಪ್ರತಿಮ ಸೇನಾನಿ ಧಿಂಗ್ರಾ

0
252
Tap to know MORE!

ಮದನ್ ಲಾಲ್ ಧಿಂಗ್ರಾ ಎಂಬ ಹೆಸರನ್ನು ಕೇಳುವಾಗಲೇ ಇಂದಿಗೂ ನಮ್ಮ ಧಮನಿಗಳಲ್ಲಿ ರಕ್ತ ಸಂಚಾರ ವೇಗಗೊಳ್ಳುತ್ತದೆ. ಅವರ ಧೈರ್ಯವನ್ನು ನೆನೆದು ಕಣ್ಣಂಚು ತೇವಗೊಳ್ಳುತ್ತದೆ. ಬ್ರಿಟಿಷ್ ನೆಲದಲ್ಲಿ ಗಲ್ಲಿಗೇರಿಸಲ್ಪಟ್ಟ ಮೊದಲ ಭಾರತೀಯ ಸ್ವತಂತ್ರ ಹೋರಾಟಗಾರ ಮದನ್ ಲಾಲ್ ಧಿಂಗ್ರಾ.

1883 ರ ಸೆಪ್ಟೆಂಬರ್ 18ರಂದು ಅಮೃತಸರದ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದ ಮದನ್ ಲಾಲ್ ರ ತಂದೆ ಬ್ರಿಟಿಷ್ ಸರಕಾರದ ಸಿವಿಲ್ ಸರ್ಜನ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರಿಗೆ ಬ್ರಿಟಿಷ್ ಸರ್ಕಾರವು “ರಾವ್ ಸಾಹೇಬ್” ಎಂಬ ಬಿರುದನ್ನು ನೀಡಿ ಗೌರವಿಸಿತ್ತು. ಧಿಂಗ್ರಾ ಅವರ ಮೂವರು ಸಹೋದರರು ತಜ್ಞ ವೈದ್ಯರಾಗಿದ್ದರೆ, ಉಳಿದ ಮೂವರು ಸಹೋದರರು ನ್ಯಾಯವಾದಿಗಳು. ಇಂತಹ ಕುಟುಂಬದಲ್ಲಿ ಜನಿಸಿದ ಧಿಂಗ್ರಾ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ನಿಂತದ್ದು ಆಶ್ಚರ್ಯವೇ ಸರಿ.

ಮದನ್ ಲಾಲ್ ಎಂಜಿನಿಯರಿಂಗ್ ಓದಲೆಂದು ಲಂಡನ್ಗೆ ಹೋಗಿದ್ದವನು. ಸ್ವಭಾವತಃ ಮದನ್ ಶೋಕಿಲಾಲ. ಮನೆಯವರೆಲ್ಲ ಬ್ರಿಟಿಷರ ಪರಮ ಭಕ್ತರು. ಇಂಗ್ಲೆಂಡ್ನ ವಿಲಾಸಿ ಸಂಸ್ಕೃತಿಗೆ ಮಾರುಹೋದ ಮದನ್ ಬೆಲೆಬಾಳುವ ಸೂಟುಬೂಟುಗಳನ್ನು ಹಾಕಿಕೊಂಡು ಶೋಕಿಲಾಲನಾಗಿ ಇಂಗ್ಲೆಂಡ್ನ ರಸ್ತೆಗಳಲ್ಲಿ ಹಾಡುತ್ತಾ ಕುಣಿಯುತ್ತಾ ಕಾಲ ಕಳೆಯತೊಡಗಿದ. ವರ್ಷವಿಡೀ ಹೊರಗೆ ಅಲೆದರೂ ಪರೀಕ್ಷೆಯಲ್ಲಿ ಮಾತ್ರ ಮೊದಲ ಸ್ಥಾನವನ್ನೇ ಗಳಿಸುತ್ತಿದ್ದ ಪ್ರತಿಭಾವಂತ ಆತ. ಅವನ ಬದುಕಿಗೆ ಮಹತ್ವದ ತಿರುವು ಸಿಕ್ಕಿದ್ದು ಸ್ವತಂತ್ರ್ಯ ವೀರ ವಿನಾಯಕ ಸಾವರ್ಕರ್ರ ಇಂಗ್ಲೆಂಡ್ ಭೇಟಿಯ ಮೂಲಕ.

ಬ್ರಿಟಿಷರಿಗೆ ಅವರ ನೆಲದಲ್ಲೇ ಭಾರತೀಯರನ್ನು ಸಂಘಟಿಸಿ ಉತ್ತರ ಕೊಡಬೇಕೆಂಬ ಸಂಕಲ್ಪದಿಂದ ಇಂಗ್ಲೆಂಡ್ಗೆ ಹೋಗಿದ್ದ ಸಾವರ್ಕರ್, ಅಲ್ಲಿದ್ದ ‘ಭಾರತ ಭವನ’ದ ಮೂಲಕ ಇಂಗ್ಲೆಂಡ್ಗೆ ಬಂದಿದ್ದ ಭಾರತೀಯ ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯನ್ನು ತುಂಬುತ್ತಿದ್ದರು. ಅವರ ಧೀಮಂತ ವ್ಯಕ್ತಿತ್ವ , ದೇಶಾಭಿಮಾನದ ಮಾತುಗಳನ್ನು ಕೇಳಿದ ಮದನ್ ಲಾಲ್ ಧಿಂಗ್ರಾಗೆ ಸಾವರ್ಕರ್ ಮೇಲೆ ಅಭಿಮಾನ ಉಂಟಾಯಿತು. ಶೋಕಿಲಾಲನಾಗಿದ್ದ ಮದನ್ ದೇಶಪ್ರೇಮಿಯಾಗಿ ಬದಲಾದ. ಈತನಂತೆ ಹಲವು ಕ್ರಾಂತಿಕಾರಿಗಳ ಆಕ್ರೋಶಕ್ಕೆ ಕಾರಣವಾಗಿದ್ದ 1905 ರ ಬಂಗಾಳ ವಿಭಜನೆಯ ರೂವಾರಿ ಬ್ರಿಟಿಷ್ ಅಧಿಕಾರಿ ಲಾರ್ಡ್ ಕರ್ಜನ್ ವಾಲಿ ಆಗಷ್ಟೇ ಇಂಗ್ಲೆಂಡ್ಗೆ ಮರಳಿದ್ದ.

ಭಾರತದಿಂದ ಬಂದ ವಿದ್ಯಾರ್ಥಿಗಳನ್ನು ಬ್ರಿಟಿಷರಿಗೆ ‌ ನಿಷ್ಠರನ್ನಾಗಿ ಮಾಡುವುದು ನ್ಯಾಷನಲ್ ಇಂಡಿಯನ್ ಅಸೋಸಿಯೇಶನ್ ಎಂಬ ಸಂಸ್ಥೆಯ ಮುಖ್ಯ ಗುರಿಯಾಗಿತ್ತು. ವಿಲಿಯಂ ಕರ್ಜನ್ ವಾಲಿ ಅದರ ಮುಖ್ಯಸ್ಥನಾಗಿದ್ದ. ಇದು ಕ್ರಾಂತಿಕಾರಿಗಳ ಸಿಟ್ಟು ಅವನೆಡೆಗೆ ತಿರುಗುವಂತೆ ಮಾಡಿತ್ತು. ತನ್ನ ತಂದೆಯ ಮೂಲಕ ಅವನ ಪರಿಚಯ ಮಾಡಿಕೊಂಡ ಮದನ್, ಲಂಡನ್ನಿನ ಜಹಾಂಗೀರ್ ಹಾಲ್ನಲ್ಲಿ ತುಂಬಿದ ಸಭೆಯ ನಡುವೆ ಕರ್ಜನ್ ವಾಲಿಯನ್ನು ಗುಂಡಿಟ್ಟು ಕೊಂದು ಬ್ರಿಟಿಷರ ನೆಲದಲ್ಲೇ ಅವರನ್ನು ಬೆಚ್ಚಿಬೀಳಿಸಿದ್ದ. ಕ್ರಾಂತಿಯ ಜ್ವಾಲೆ ಬ್ರಿಟಿಷ್ ನೆಲದಲ್ಲಿ ಧಗಧಗಿಸಿತು. ಘಟನೆಯ ನಂತರ ಧಿಂಗ್ರಾ ಓಡಿಹೋಗದೆ ತಾನೆ ಪೊಲೀಸರಿಗೆ ಶರಣಾದ. ನ್ಯಾಯಾಲಯದಲ್ಲಿ ತನ್ನ ಪರವಾಗಿ ತಾನೆ ವಾದ ಮಂಡಿಸಿ ತನ್ನ ಕೆಲಸ ಸರಿ ಎಂದು ಸಮರ್ಥಿಸಿಕೊಂಡ. ನ್ಯಾಯಾಲಯದಲ್ಲಿನ ಆತನ ವಾದ ಕ್ರಾಂತಿಕಾರಿಗಳ ಪಾಲಿನ ಮಹಾಕಾವ್ಯ. ತಾನು ಇದನ್ನು ಮಾಡಿರುವುದಕ್ಕೆ ಹೆಮ್ಮೆ ಪಡುವುದಾಗಿಯೂ ತನಗೆ ಮರಣದಂಡನೆಯೇ ಸೂಕ್ತ ಎಂದು ಧಿಂಗ್ರಾ ಹೆಮ್ಮೆಯಿಂದ ಹೇಳಿದ.

“ತಾಯಿ ಭಾರತಿಯ ಸೇವೆಯೆಂದರೆ ಪ್ರಭು ಶ್ರೀರಾಮನ ಸೇವೆ. ಆ ತಾಯಿಗೆ ಅಪಮಾನವಾದರೆ ಶ್ರೀರಾಮ‌ನಿಗೆ ಅಪಮಾನವಾದಂತೆ. ಆ ದೊಡ್ಡ ತಾಯಿಗೆ ಈ ದಡ್ಡಮಗ ತನ್ನ ರಕ್ತವನ್ನಲ್ಲದೆ ಇನ್ನೇನು ತಾನೆ ಕೊಡಲು ಸಾಧ್ಯ…ಆದ್ದರಿಂದ ನಾನು ಹೆಮ್ಮೆಯಿಂದ ಪ್ರಾಣಬಿಡುತ್ತೇನೆ. ನನ್ನ ತಾಯಿನಾಡು ಸ್ವತಂತ್ರವಾಗುವವರೆಗೂ ಇದೇ ತಾಯಿಯ ಹೊಟ್ಟೆಯಲ್ಲಿ ಮತ್ತೆ ಮತ್ತೆ ಹುಟ್ಟಬೇಕು. ಇದೊಂದೆ ನಾನು ದೇವರಲ್ಲಿ ಮಾಡುವ ಪ್ರಾರ್ಥನೆ”, ಎಂದು ಬಲಿದಾನಕ್ಕೂ ಮೊದಲು ನುಡಿದಿದ್ದ ಧಿಂಗ್ರಾ. 1909 ಆಗಸ್ಟ್ 17ರಂದು ಈ ಅಪ್ರತಿಮ ಕ್ರಾಂತಿಕಾರಿಗೆ ಮರಣದಂಡನೆ ಶಿಕ್ಷೆ ನೀಡಲಾಯಿತು. ಆಗ ಅವರ ವಯಸ್ಸು ಕೇವಲ 26.

ವಿದೇಶಿ ನೆಲದಲ್ಲಿ ಮೊದಲ ಬಲಿದಾನ ಮಾಡಿದ ಧಿಂಗ್ರಾನ ಅಪ್ರತಿಮ ಶೌರ್ಯ, ಮುಂದೆ ಭಾರತದಲ್ಲಿ ದೊಡ್ಡ ಕ್ರಾಂತಿಕಾರಿ ಪರಂಪರೆಗೆ ನಾಂದಿಯಾಯಿತು. ದೇಶಕ್ಕಾಗಿ ತಂದೆ, ಕುಟುಂಬವನ್ನೂ ತೊರೆದ ಧಿಂಗ್ರಾರನ್ನು ಬಲಿದಾನದ ಬಳಿಕವೂ ಅವರ ಕುಟುಂಬ ಸ್ವೀಕರಿಸಲಿಲ್ಲ. ಆದರೆ ನಾವು ಅಂತಹ ತಪ್ಪು ಮಾಡದಿರೋಣ…

ಸುರೇಶ್ ರಾಜ್
ವಿವಿ ಕಾಲೇಜು, ಮಂಗಳೂರು

LEAVE A REPLY

Please enter your comment!
Please enter your name here