ಕ್ರಾಂತಿಯ ಕಿಡಿ ಹಚ್ಚಿದ ರಾಜ್ಗುರು, ಬದುಕಿದ್ದು 22 ವರ್ಷ ಮಾತ್ರ!

0
300
Tap to know MORE!

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ದೇಶಕ್ಕಾಗಿ ಎಳೆಯ ವಯಸ್ಸಿನಲ್ಲಿಯೇ ತನ್ನ ಪ್ರಾಣವನ್ನೇ ಅರ್ಪಿಸಿದ ಇನ್ನೊಬ್ಬ ವೀರ ಶಿವರಾಮ್ ಹರಿರಾಜ್ ಗುರು. ಕ್ರಾಂತಿಕಾರಿಗಳ ಪಾಲಿನ ದ್ರೋಣಾಚಾರ್ಯರಂತಿದ್ದ ಲಾಲಾ ಲಜಪತ ರಾಯ್ ಅವರನ್ನು ಚೌರಿ ಚೌರಾ ಘಟನೆಯಲ್ಲಿ ಮಾರಕವಾಗಿ ಹೊಡೆದು ಅವರ ಸಾವಿಗೆ ಕಾರಣನಾದ ಬ್ರಿಟಿಷ್ ಪೊಲೀಸ್ ಅಧಿಕಾರಿಯನ್ನು ಕೊಲ್ಲುವಲ್ಲಿ ಭಗತ್ ಸಿಂಗ್ ಮತ್ತು ಸುಖ್ ದೇವ್ ಅವರೊಂದಿಗೆ ಶಾರ್ಪ್ ಶೂಟರ್ ರಾಜ್ಗುರು ಭಾಗಿಯಾಗಿದ್ದರು.

ಪುಣೆಯ ಭೀಮ ನದಿ ತೀರದ ಖೇಡ್ನಲ್ಲಿ ಪಾರ್ವತಿ ದೇವಿ- ಹರಿನಾರಾಯಣ್ ರಾಜ್ ಗುರು ದಂಪತಿಗೆ, 24 ನೇ ಆಗಸ್ಟ್ 1908 ರಂದು ಜನಿಸಿದ ರಾಜ್ ಗುರು ಕೇವಲ ಆರು ವರ್ಷದವರಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ನಂತರ ತನ್ನ ಹಿರಿಯಣ್ಣ ದಿನಕರ್ ಅವರ ಆಶ್ರಯದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಪುಣೆಯ ನ್ಯೂ ಇಂಗ್ಲಿಷ್ ಪ್ರೌಢಶಾಲೆಯಲ್ಲಿ ಅದ್ಯಯನ ಮಾಡಿದರು.

ಹಿಂದೂಸ್ತಾನ್ ಸಮಾಜವಾದಿ ರಿಪಬ್ಲಿಕನ್ ಅಸೋಸಿಯೇಷನ್ ಸದಸ್ಯರಾಗಿದ್ದ ರಾಜ್ ಗುರು, ಭಾರತವನ್ನು ಬ್ರಿಟಿಷರಿಂದ ಬಂಧಮುಕ್ತಗೊಳಿಸಲು ಸಶಸ್ತ್ರ ಹೋರಾಟವೇ ಸರಿ ಎಂದು ನಂಬಿದ್ದ ಕ್ರಾಂತಿಕಾರಿಗಳ ಜೊತೆ ಸೇರಿದರು. ಭಾರತದಲ್ಲಿ ಬ್ರಿಟಿಷರು ಹರಿಸಿದ್ದ ರಕ್ತಕ್ಕೆ ,ರಕ್ತವನ್ನೇ ಉತ್ತರವನ್ನಾಗಿ ಕೊಡಲು ನಿರ್ಧರಿಸಿ, ಬಂದೂಕನ್ನು ಪರಮಮಿತ್ರನನ್ನಾಗಿಸಿಕೊಂಡರು.

ರಾಜ್ ಗುರು, ಭಗತ್ ಸಿಂಗ್ ಮತ್ತು ಸುಖ್ ದೇವ್ ಅವರೊಂದಿಗೆ ಸೇರಿ 1928 ರಲ್ಲಿ ಬ್ರಿಟಿಷ್ ಪೊಲೀಸ್ ಅಧಿಕಾರಿಯ ಹತ್ಯೆ ಮಾಡಿದರು. ಅಸಲಿಗೆ ಅದು ಲಾಲಾ ಲಜಪತ್ ರಾಯ್ ಅವರ ಸಾವಿನ ಪ್ರತೀಕಾರದ ಜ್ವಾಲೆಯಾಗಿತ್ತು. ಕ್ರಾಂತಿಕಾರಿ ಚಟುವಟಿಕೆಯಲ್ಲಿ ಭಗತ್ ಸಿಂಗ್ ಮತ್ತು ಸುಖ್ ದೇವ್ ಅವರೊಂದಿಗೆ ಸೇರಿ ಬ್ರಿಟಿಷರನ್ನು ಕ್ಷಣಕ್ಷಣಕ್ಕೂ ಕಾಡಿದ ರಾಜ್ ಗುರುವಿಗೆ ಬ್ರಿಟಿಷ್ ಕೋರ್ಟ್ ಮರಣದಂಡನೆ ವಿಧಿಸಿತು. ಅದರಂತೆ ಭಗತ್ ಸಿಂಗ್, ರಾಜ್ ಗುರು, ಮತ್ತು ಸುಖ್ ದೇವ್ ಮೂವರನ್ನು 23 ಮಾರ್ಚ್ 1931ರಂದು ಒಂದೇ ದಿನ ಹಿಂದೆ ಗಲ್ಲಿಗೇರಿಸಿದರು. ಆಗ ರಾಜ್ ಗುರು ವಯಸ್ಸು ಬರೀ 22 ವರ್ಷ!

ತಮ್ಮನ್ನು ಗಲ್ಲಿಗೇರಿಸುವ ದಿನ ಈ ಮೂವರು ಹೆದರದೆ ನೇಣುಗಂಬದ ಬಳಿಗೆ ಹಾಡುತ್ತಾ ಬಂದಿದ್ದರು. ಕೊನೆಯ ಬಾರಿಗೆ ‘ಇಂಕ್ವಿಲಾಬ್ ಜಿಂದಾಬಾದ್’ (ಕ್ರಾಂತಿ ಚಿರಾಯುವಾಗಲಿ) ಘೋಷಣೆಯನ್ನು ಕೂಗಿ ಉರುಳಿಗೆ ಚುಂಬಿಸಿ ಕೊರಳು ನೀಡಿದ್ದರು. ಕೆಲವೇ ಕ್ಷಣದಲ್ಲಿ ಭಾರತದ ಯುವಕ್ರಾಂತಿಕಾರಿಗಳ ಪ್ರಾಣಪಕ್ಷಿ ಹಾರಿಹೋಗಿ ದೇಶಕ್ಕಾಗಿ ಪ್ರಾಣ ತೆತ್ತ ದಿವ್ಯ ಆತ್ಮಗಳ ಜೊತೆ ಸೇರಿತು. ಪಂಜಾಬ್ನ ಸಟ್ಲೇಜ್ ನದಿ ತೀರದಲ್ಲಿ ಅವರ ದೇಹವನ್ನು ರಹಸ್ಯವಾಗಿ ದಹಿಸಲಾಯಿತು. ವಿಷಯ ತಿಳಿದು ಸಾವಿರಾರು ಜನ ಬಂದರೂ ಅವರಿಗೆ ಸಿಕ್ಕಿದ್ದು ಕ್ರಾಂತಿಕಾರಿಗಳ ಬೂದಿ ಮಾತ್ರ.

ಇನ್ನು ಈ ಅನ್ಯಾಯದ ಮರಣದಂಡನೆ ಬಗ್ಗೆ ಪತ್ರಿಕೆಗಳು ವ್ಯಾಪಕವಾಗಿ ವರದಿ ಮಾಡಿದವು. ವಿಶೇಷವಾಗಿ “ದಿ ನೂಯಾರ್ಕ್ ಟೈಮ್ಸ್” ವರದಿ ಮಾಡಿ ಬ್ರಿಟಿಷರ ವಿರುದ್ದ ಜನಜಾಗೃತಿ ಮೂಡಿಸಿತು. ಹುಸೈನ್ವಾಲಾದಲ್ಲಿ ಇವರ ಸ್ಮಾರಕವನ್ನು ಸ್ಥಾಪಿಸಲಾಗಿದೆ. ರಾಜ್ ಗುರು ಅವರ ಗೌರವಾರ್ಥವಾಗಿ ಅವರ ಹುಟ್ಟೂರಿಗೆ ʼರಾಜ್ ಗುರು ನಗರʼ ಎಂದು ಮರುನಾಮಕರಣ ಮಾಡಲಾಗಿದೆ. ಎಳೆವಯಸ್ಸಿನಲ್ಲೇ ಮರೆಯಲಾಗದ ತ್ಯಾಗ ಮಾಡಿದ ರಾಜ್ ಗುರು ಕ್ರಾಂತಿಕಾರಿಗಳ ಪೈಕಿ ಅಗ್ರ ಪಂಕ್ತಿಯಲ್ಲಿ ಕಾಣಿಸಿಕೊಳ್ಳುತ್ತಾರೆ.

ಸುರೇಶ್ ರಾಜ್,
ವಿವಿ ಕಾಲೇಜು, ಮಂಗಳೂರು

LEAVE A REPLY

Please enter your comment!
Please enter your name here