ಖಾಕಿ ನಂಟಿನ ನೆನಪು

0
213
Tap to know MORE!

ಸುಮಾರು ಒಂಭತ್ತು ವರ್ಷ ಹಿಂದಿನ ಘಟನೆ. ನಮ್ಮ ಶಾಲೆಯಲ್ಲೂ ಎನ್‍ಸಿಸಿ ಪ್ರಾರಂಭವಾಗಿತ್ತು. ಅದೇ ಮೊದಲ ಬ್ಯಾಚ್ ಆದ ಕಾರಣವೋ ಏನೋ, ಚೆಲ್ಲಾಪಿಲ್ಲಿ ಸಮವಸ್ತ್ರ ಧರಿಸಿದ್ದರೂ, ಮುಖದಲ್ಲಿ ಹೊಸ ಕಳೆ ಹೊತ್ತುಕೊಂಡ ಸುಮಾರು 40 ಕೆಡೆಟ್‍ಗಳು ಮಧ್ಯಾಹ್ನ ಎರಡು ಗಂಟೆಗೆ ಶಾಲಾ ಮೈದಾನದತ್ತ ಓಡುತ್ತಿದ್ದರು. ಇವರನ್ನು ಕಂಡು “ಅಲಂಬೇ! ವಾಚ್‍ಮ್ಯಾನ್ ನಕ್ಲೆನ್ ತೂಲ…” ಎಂದು ಪರಿಹಾಸ್ಯ ಮಾಡುತ್ತಿದ್ದವರೇ ಜಾಸ್ತಿ, ಅವರುಗಳ ಮಧ್ಯ ನಾನು ಬೆರಗಾಗಿ ನಿಂತಿದ್ದ ನೆನಪು. ಪರೇಡ್ ಗ್ರೌಂಡ್‍ನ “ಎಕ್… ದೋ… ಎಕ್…” ಎಲ್ಲರಿಗೂ ಕರ್ಕಶವಾದಾಗ, ನಾನೊಬ್ಬಳೇ ಮುದಗೊಂಡ ನೆನಪು.

ನಂತರ ಎನ್‍ಸಿಸಿ ಸೇರಿ, ಮೊದಲ ಬಾರಿ ಯುನಿಫಾರಂ ಧರಿಸಿದ ನೆನಪು. ಕಂಠಪಾಠ ಮಾಡಿದ ಎನ್‍ಸಿಸಿ ಗೀತೆ “ಹಮ್ ಸಬ್ ಭಾರತೀಯ್ ಹೈ” ಮೊದಲ ಬಾರಿ ಹಾಡಿದಾಗ ರೋಮಾಚನಗೊಂಡ ನೆನಪು. ಪರೇಡ್‍ಗೆ ಲೇಟಾಗಿದ್ದಕ್ಕೆ ಪನಿಶ್‍ಮೆಂಟ್ ಎಂದು ಶಾಲಾ ಮೈದಾನಕ್ಕೆ ಎರಡು ಸುತ್ತು ಓಡಿದ ನೆನಪು. ಯಾರೋ ರೇಗಿಸುತ್ತಾ “ವಾಚ್‍ಮ್ಯಾನ್” ಅಂದಾಗ, “ದೇಶ್ ಕಾ ವಾಚ್‍ಮ್ಯಾನ್” ಎಂದು ಅವರನ್ನು ಮೂಕರನ್ನಾಗಿಸಿ ಹಿರಿಹಿರಿ ಹಿಗ್ಗಿದ ನೆನಪು. ಮೊದಲ ಕ್ಯಾಂಪ್‍ಗೆ ಹೋದಾಗ ತಟ್ಟೆ ಮರೆತು, ಹತ್ತು ದಿನ ಚಡಪಡಿಸಿದ ನೆನಪು. ಫೈರಿಂಗ್‍ನಲ್ಲಿ ಐದು ಬುಲೆಟ್ ಕೊಟ್ಟಾಗ, “ಅಯ್ಯೋ, ಇಷ್ಟು ಬೇಗ ಮುಗೀತಾ!” ಅಂತ ಮುಖ ಸಣ್ಣದಾಗಿಸಿಕೊಂಡ ನೆನಪು. ಮೊದಲ ಬಾರಿ ಪರೇಡ್ ಕಮಾಂಡ್ ಮಾಡಿದ ನೆನಪು. ರ್ಯಾಲಿಯಲ್ಲಿ ನಮ್ಮ ಕಂಪೆನಿಯನ್ನು ಯಾರೋ ಹಂಗಿಸಿದಾಗ, ರೊಚ್ಚಿಗೆದ್ದು “ಜೋóರ್ ಸೆ ಬೋಲೋ, ಪ್ಯಾರ್ ಸೆ ಬೋಲೋ….” ಎಂದು ಕಂಠ ಹರಿಯುವಷ್ಟು ಜೋರಾಗಿ ಕಿರುಚಿ, ಇಡೀ ರ್ಯಾಲಿಯನ್ನೇ ಮುನ್ನಡೆಸಿದ ನೆನಪು. ದೇಹ ದಣಿದಿದ್ದರೂ, ಸೀನಿಯರ್ “ಜೋಶ್ ಹೈ?” ಎಂದು ಕೇಳಿದಾಗ, “ಯೆಸ್ ಸೀನಿಯರ್” ಎಂದ ನೆನಪು. ಹೈಸ್ಕೂಲಿನಲ್ಲಿ ಎರಡು ವರ್ಷದ ಎನ್‍ಸಿಸಿ ಮುಗಿಸಿ, ಶಾಲಾ ವಾರ್ಷಿಕೋತ್ಸವದಲ್ಲಿ ಬೆಸ್ಟ್ ಸಾರ್ಜೆಂಟ್' ಟ್ರೋಫಿ ಪಡೆದ ನೆನಪು. ಇಂತಹ ನೆನಪುಗಳಿನ್ನೂ ಹಸಿಯಾಗಿದ್ದಾಗ ಕಾಲೇಜಿನಲ್ಲಿ ಎನ್‍ಸಿಸಿ ಸೆಲೆಕ್ಷನ್ ಆಗಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ನೆನಪು. ಇನ್ನೇನು ಎನ್‍ಸಿಸಿ ಸೇರೋದು ಕನಸಾಗಿಯೇ ಉಳಿದುಬಿಡುತ್ತೆ ಅನ್ನುವಷ್ಟರಲ್ಲಿ ಆ ಭಾಗ್ಯ ಒಲಿದು ಬಂದು ಕನಸು ಮತ್ತೊಮ್ಮೆ ಗರಿಗೆದರಿದ ನೆನಪು. ಮತ್ತೆ ಕ್ಯಾಂಪ್‍ಗಳು, ಇನ್ನೊಂದಷ್ಟು ಬುಲೆಟ್‍ಗಳು, ಕಸರತ್ತು-ಕರಾಮತ್ತುಗಳು. ಮತ್ತದೇ ಸುಡು ಬಿಸಿಲಿನಲ್ಲಿ "ಎಕ್... ದೋ... ಎಕ್..." ಜಪ. ಪರೇಡ್‍ಗಾಗಿ ಕಾಯುತ್ತಿದ್ದ ನೆನಪು. 30,000 ಮಂದಿ ಸೇರಿದ್ದ ಕಾಲೇಜಿನ ರಿಪಬ್ಲಿಕ್ ಡೇ ದಿನ ಮೊದಲ ಸಾಲಿನಲ್ಲಿ ನಿಂತು ರಾಷ್ಟ್ರಗೀತೆ ಹಾಡಿದಾಗ ಹೃದಯದಲ್ಲೊಂದು ಸಂಚಲನ ಮೂಡಿ, ಕಂಬನಿಯೊಂದು ಜಾರಿದ ನೆನಪು. ವರ್ಷಪೂರ್ತಿ ನಮ್ಮ ದಳ ನಡೆಸುತ್ತಿದ್ದ ಕಾರ್ಯಕ್ರಮಗಳನ್ನು ನಿರ್ವಹಿಸಿದ ನೆನಪು. ಕ್ಯಾಂಪ್‍ಗಳ ಕೊನೆಯ ದಿನ ಕ್ಲಿಕ್ಕಿಸಿದ ಫೋಟೋಗಳಲ್ಲಿ ಮುಖ ಕರ್ರಗಾಗಿದ್ದ ನೆನಪು. ಹೈಸ್ಕೂಲಿನಲ್ಲಿ ಕೆಡೆಟ್ ಇಂದ ಸಾರ್ಜೆಂಟ್, ಕಾಲೇಜಿನಲ್ಲಿ ಕೆಡೆಟ್ ಇಂದ ಸೀನಿಯರ್-ಅಂಡರ್-ಆಫೀಸರ್ ಆಗುವ ಹಾದಿಯಲ್ಲಿನ ಸತತ ಪರಿಶ್ರಮ, ಸುಖ-ದುಃಖಗಳ ಅಚ್ಚಳಿಯದ ನೆನಪು. ಕ್ಯಾಂಪ್‍ಗಳಲ್ಲಿನ ಉಲ್ಲಾಸ, ಪರೇಡ್‍ಗಳಲ್ಲಿನ ಪನಿಶ್‍ಮೆಂಟ್. ಮೂರು ವರ್ಷದಲ್ಲಿ ಸವೆಸಿದ ಐದು ಜೊತೆ ಡಿಎಮ್‍ಎಸ್ ಶೂಗಳು. ಎಲ್ಲರ ಬೆರೆಟ್‍ಗಿಂತಲೂ ಅಚ್ಚುಕಟ್ಟಾದ ಬೆರೆಟ್ ನನ್ನದು ಎಂದು ಯಾರೋ ಹೇಳಿದಾಗ ಆದ ಖುಷಿ. ಎರಡು ವರ್ಷ ಸತತವಾಗಿ ಕಾಲೇಜಲ್ಲಿಬೆಸ್ಟ್ ಕೆಡೆಟ್ ಅವಾರ್ಡ್’ ಪಡೆದ ಹೆಮ್ಮೆ. ಸಿ' ಸರ್ಟಿಫಿಕೇಟ್ ಎಕ್ಸಾಮ್‍ನ ನಂತರ, "ಇನ್ನು ಉನಿಫಾರಂ ಹಾಕುವ ಭಾಗ್ಯ ಇಲ್ಲ" ಎಂದು ರಾತ್ರಿಯಿಡೀ ನಿದ್ದೆಗೆಟ್ಟಿದ್ದ ನೆನಪು. ಇವೆಲ್ಲದರ ನಡುವೆ, ಡಿಐಜಿ ರೂಪಾ ಮೇಡಂ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಅವರೂ ಎನ್‍ಸಿಸಿ ಕೆಡೆಟ್ ಆಗಿದ್ದರೆಂದು ಹೇಳಿ, "ಖಾಕಿ ನಂಟು ಯಾವತ್ತಿದ್ರೂ ಬಿಡಲ್ಲ" ಎಂದಾಗ ಅರಿಯದೇ ಎದೆ ಉಬ್ಬಿಸಿ ರೋಮಾಂಚನಗೊಂಡ ನೆನಪು. ಮತ್ತದೇ ಕ್ಷಣದಲ್ಲಿ ಖಾಕಿ ಹಾಕಿಯೇ ದೇಶಸೇವೆ ಮಾಡಬೇಕು ಎಂದು ಸಂಕಲ್ಪ ಮಾಡಿದ ನೆನಪು.ಬೆನಿಫಿಟ್’ಗಳ ಬೆನ್ನುಹತ್ತದೇ ಮನಪೂರ್ತಿಯಾಗಿ ಎನ್‍ಸಿಸಿಯಲ್ಲಿ ತೊಡಗಿಸಿಕೊಂಡ ನೆನಪು.
ಖಾಕಿ ನಂಟಿನ ನೆನಪು…!

LEAVE A REPLY

Please enter your comment!
Please enter your name here