‘ಖೇಲೋ ಇಂಡಿಯಾ ಸ್ಟೇಟ್ ಸೆಂಟರ್ ಆಫ್ ಎಕ್ಸಲೆನ್ಸ್’ ಸ್ಥಾಪಿಸಲು ಕ್ರೀಡಾ ಸಚಿವಾಲಯ ನಿರ್ಧಾರ

0
207
Tap to know MORE!

ನವದೆಹಲಿ : ಖೇಲೋ ಇಂಡಿಯಾ ಯೋಜನೆಯಡಿ “ಖೇಲೋ ಇಂಡಿಯಾ ಸ್ಟೇಟ್ ಸೆಂಟರ್ ಆಫ್ ಎಕ್ಸಲೆನ್ಸ್” ಸ್ಥಾಪಿಸಲು ಭಾರತದ ಕ್ರೀಡಾ ಸಚಿವಾಲಯ ಸಿದ್ಧವಾಗಿದೆ. ಇದು ಇಡೀ ದೇಶದಲ್ಲಿ ದೃಢವಾದ ಕ್ರೀಡಾ ಪರಿಸರ ವ್ಯವಸ್ಥೆಯನ್ನು ರಚಿಸುವ ಗುರಿಯನ್ನು ಹೊಂದಿದೆ. ಪ್ರತಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂತಹ ಒಂದು ಕೇಂದ್ರವನ್ನು ರಚಿಸಲಾಗುತ್ತದೆ.

ಕ್ರೀಡಾ ಸಚಿವಾಲಯವು, ಮೊದಲ ಹಂತದಲ್ಲಿ ಈಗಾಗಲೇ ಭಾರತದ 8 ರಾಜ್ಯಗಳಲ್ಲಿ ಸರ್ಕಾರಿ ಸ್ವಾಮ್ಯದ ಕ್ರೀಡಾ ಸೌಲಭ್ಯಗಳನ್ನು ಗುರುತಿಸಿದೆ. ಈ ಸೌಲಭ್ಯಗಳನ್ನು ಖೇಲೋ ಇಂಡಿಯಾ ಸ್ಟೇಟ್ ಸೆಂಟರ್ ಆಫ್ ಎಕ್ಸಲೆನ್ಸ್ (ಕೆ.ಐ.ಎಸ್.ಸಿ.ಇ) ಗೆ ನವೀಕರಿಸಲಾಗುವುದು.

ಕೇಂದ್ರವನ್ನು ನಡೆಸಲು ಮತ್ತು ಅದನ್ನು ವಿಶ್ವ ದರ್ಜೆಯ ಕ್ರೀಡಾ ಸೌಲಭ್ಯವಾಗಿ ನಡೆಸುವ ಸಾಮರ್ಥ್ಯವನ್ನು ಹೆಚ್ಚಿಸಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಜವಾಬ್ದಾರರಾಗಿರುತ್ತವೆ. ಪರಿಣಿತ ತರಬೇತುದಾರರು, ಉಪಕರಣಗಳು, ಸಹಾಯಕ ಸಿಬ್ಬಂದಿ, ಮೂಲಸೌಕರ್ಯಗಳಿಗೆ ಹಣವನ್ನು ಖೇಲೋ ಇಂಡಿಯಾ ಯೋಜನೆಯ ಮೂಲಕ ವಿಸ್ತರಿಸಲಾಗುವುದು.

ಪ್ರತಿ ರಾಜ್ಯ, ಕೇಂದ್ರಾಡಳಿತ ಪ್ರದೇಶದಲ್ಲಿ ಒಂದು ರಾಜ್ಯ ಮಟ್ಟದ ಶ್ರೇಷ್ಠತೆಯ ಕೇಂದ್ರವನ್ನು ಸ್ಥಾಪಿಸಲು ಕ್ರೀಡಾ ಸಚಿವಾಲಯ ನಿರ್ಧರಿಸಿದೆ. ಮೊದಲ ಹಂತದಲ್ಲಿ ಒಡಿಶಾ, ಕರ್ನಾಟಕ, ಕೇರಳ, ತೆಲಂಗಾಣ, ಮಿಜೋರಾಂ, ಮಣಿಪುರ, ಅರುಣಾಚಲ, ನಾಗಾಲ್ಯಾಂಡ್‌ನಲ್ಲಿ ಕ್ರೀಡಾ ಸೌಲಭ್ಯಗಳನ್ನು ಗುರುತಿಸಲಾಗಿದೆ.

 

 

ಪ್ರಮುಖ ಮುಖ್ಯಾಂಶಗಳು:

ಈ ಕ್ರೀಡಾ ಸೌಲಭ್ಯಗಳ ಆಯ್ಕೆ ಪ್ರಕ್ರಿಯೆಯನ್ನು ಅಕ್ಟೋಬರ್ 2019 ರಲ್ಲಿ ಕ್ರೀಡಾ ಸಚಿವಾಲಯ ಪ್ರಾರಂಭಿಸಿತು. ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿರುವ ಅತ್ಯುತ್ತಮ ಕ್ರೀಡಾ ಮೂಲಸೌಕರ್ಯಗಳನ್ನು ಗುರುತಿಸಬೇಕಾಗಿತ್ತು, ಅದನ್ನು ವಿಶ್ವ ದರ್ಜೆಯ ಕ್ರೀಡಾ ಸೌಲಭ್ಯವಾಗಿ ಅಭಿವೃದ್ಧಿಪಡಿಸಬಹುದು ಎಂದು ಸಿಕ್ಕ 15 ಪ್ರಸ್ತಾವನೆಗಳ ಪೈಕಿ 8 ಪ್ರಸ್ತಾಪಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಯಿತು.

ಅಸ್ತಿತ್ವದಲ್ಲಿರುವ ಕೇಂದ್ರವನ್ನು ಕೆ.ಐ.ಎಸ್.ಸಿ.ಇ ಗೆ ಅಪ್‌ಗ್ರೇಡ್ ಮಾಡಲು, ಸರ್ಕಾರವು ‘ಕಾರ್ಯಸಾಧ್ಯತೆಯ ನಿಧಿಯನ್ನು’ ವಿಸ್ತರಿಸಲಿದೆ. ಇದು ಕ್ರೀಡಾ ಸಲಕರಣೆಗಳು, ಉನ್ನತ-ಕಾರ್ಯಕ್ಷಮತೆಯ ವ್ಯವಸ್ಥಾಪಕ ಮತ್ತು ತಜ್ಞ ತರಬೇತುದಾರರ ಅಗತ್ಯತೆಗೆ ಸಹಕಾರಿಯಾಗಲಿದೆ.

ಸಮಗ್ರ ವಿಶ್ಲೇಷಣೆ ಅಧ್ಯಯನದ ನಂತರ ಸೂಚಿಸಲಾದ ಅವಶ್ಯಕತೆಗೆ ಅನುಗುಣವಾಗಿ ಅಂತಿಮ ಮೊತ್ತದ ಆಧಾರದ ಮೇಲೆ ಎಂಟು ಕೇಂದ್ರಗಳಿಗೆ ಅನುದಾನವನ್ನು ನೀಡಲಾಗುವುದು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೇಂದ್ರದಿಂದ ಹಣವನ್ನು ಪಡೆದ ಪ್ರತಿಯೊಂದು ಕ್ರೀಡೆಯಲ್ಲಿನ ಪ್ರತಿಭೆಗಳನ್ನು ಗುರುತಿಸಿ ಅಭಿವೃದ್ಧಿಪಡಿಸಬೇಕು.

ಆಯ್ದ 8 ಸರ್ಕಾರಿ ಸ್ವಾಮ್ಯದ ಕ್ರೀಡಾ ಸೌಲಭ್ಯಗಳ ಪಟ್ಟಿ ಈ ಕೆಳಗಿನಂತಿವೆ:

  1. ಜೈಪ್ರಕಾಶ್ ನಾರಾಯಣ್ ರಾಷ್ಟ್ರೀಯ ಯುವ ಕೇಂದ್ರ, ಬೆಂಗಳೂರು, ಕರ್ನಾಟಕ
  2. ಸಾಂಗೆ ಲಾಡೆನ್ ಸ್ಪೋರ್ಟ್ಸ್ ಅಕಾಡೆಮಿ, ಇಟಾನಗರ್, ಅರುಣಾಚಲ ಪ್ರದೇಶ
  3. ಜಿ.ವಿ.ರಾಜ ಸೀನಿಯರ್ ಸೆಕೆಂಡರಿ ಸ್ಪೋರ್ಟ್ಸ್ ಸ್ಕೂಲ್, ತಿರುವನಂತಪುರಂ, ಕೇರಳ
  4. ಖುಮನ್ ಲಾಂಪಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಇಂಫಾಲ್, ಮಣಿಪುರ
  5. ರಾಜೀವ್ ಗಾಂಧಿ ಕ್ರೀಡಾಂಗಣ, ಐಜ್ವಾಲ್, ಮಿಝೋರಾಂ
  6. ಸ್ಟೇಟ್ ಸ್ಪೋರ್ಟ್ಸ್ ಅಕಾಡೆಮಿ, ಐಜಿ ಸ್ಟೇಡಿಯಂ, ಕೊಹಿಮಾ, ನಾಗಾಲ್ಯಾಂಡ್
  7. ಕಳಿಂಗ ಕ್ರೀಡಾಂಗಣ, ಭುವನೇಶ್ವರ, ಒಡಿಶಾ
  8. ಪ್ರಾದೇಶಿಕ ಕ್ರೀಡಾ ಶಾಲೆ, ಹಕಿಂಪೇಟ್, ತೆಲಂಗಾಣ

LEAVE A REPLY

Please enter your comment!
Please enter your name here