ಉಸಿರಾಟದ ತೊಂದರೆಯಿಂದ, ಜೂನ್ 20 ರಂದು ಮುಂಬೈನ ಬಾಂದ್ರಾದಲ್ಲಿರುವ ಗುರುನಾನಕ್ ಆಸ್ಪತ್ರೆಗೆ ದಾಖಲಾದ ಖ್ಯಾತ ಬಾಲಿವುಡ್ ನೃತ್ಯ ಸಂಯೋಜಕಿ ಸರೋಜ್ ಖಾನ್(71), ಇಂದು ಮುಂಜಾನೆ 1.52 ಗಂಟೆಗೆ ಹೃದಯಾಘಾತದಿಂದ ನಿಧನರಾದರು. ನೃತ್ಯ ಸಂಯೋಜಕಿ ಸರೋಜ್ ಖಾನ್ ಅವರಿಗೆ ತೀವ್ರ ಮಧುಮೇಹ ಸಂಬಂಧಿತ ಕಾಯಿಲೆಯಿತ್ತು. ಸರೋಜ್ ಖಾನ್ ಅವರು, ಪತಿ ಬಿ.ಸೋಹನ್ ಲಾಲ್, ಮಗ ಹಮೀದ್ ಖಾನ್ ಮತ್ತು ಹೆಣ್ಣುಮಕ್ಕಳಾದ ಹಿನಾ ಖಾನ್ ಮತ್ತು ಸುಕಿನಾ ಖಾನ್ ಅವರನ್ನು ಅಗಲಿದ್ದಾರೆ.
ಸರೋಜ್ ಖಾನ್ ಅವರನ್ನು ಜೂನ್ 17 ರಂದು ಮುಂಬೈನ ಬಾಂದ್ರಾದ ಗುರುನಾನಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶೀತದಿಂದಾಗಿ ಅವರಲ್ಲಿ ಉಸಿರಾಟದ ತೊಂದರೆ ಉಂಟಾಗಿತ್ತು ಎಂದು ಅವರ ಮಗಳು ಸುಕಿನಾ ಖಾನ್ ತಿಳಿಸಿದ್ದಾರೆ. ಇದಲ್ಲದೆ, ಮುಂದಿನ ಎರಡು ಮೂರು ದಿನಗಳಲ್ಲಿ ಸರೋಜ್ ಖಾನ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಾಧ್ಯತೆಯಿತ್ತು ಎಂದು ಅವರು ಹೇಳಿದ್ದಾರೆ.