ಅಕ್ರಮವಾಗಿ ಬೆಳೆಸಲಾಗಿದ್ದ 26 ಕೆಜಿ ತೂಕದ ಗಾಂಜಾ ಗಿಡಗಳ ವಶ – ಓರ್ವನ ಬಂಧನ!

0
186
Tap to know MORE!

ಚಾಮರಾಜನಗರ: ಕಾಡಂಚಿನ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ, 3 ಲಕ್ಷ ರೂ. ಮೌಲ್ಯದ 26 ಕೆಜಿ ತೂಕದ 134 ಗಾಂಜಾ ಗಿಡಗಳನ್ನು ಪೂರ್ವ ಪೊಲೀಸ್ ಠಾಣೆ ಪೊಲೀಸರು ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ತಾಲೂಕಿನ ಶನಿವಾರ ಮುಂಟಿ ಗ್ರಾಮದ ಜಡೇಗೌಡ (ಮಾರಕುನ್ನ) (40) ಬಂಧಿತ. ಇನ್ನೋರ್ವ ಆರೋಪಿ ಬೆಲವತ್ತ ಗ್ರಾಮದ ಮಾದಯ್ಯ ತಲೆಮರೆಸಿಕೊಂಡಿದ್ದಾನೆ. ಬಂಧಿತನ ಪತ್ತೆಗಾಗಿ ತನಿಖೆ ಮುಂದುವರೆದಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸರಾ ಥಾಮಸ್, ಚಾಮರಾಜನಗರ ತಾಲೂಕಿನ ಬೆಲವತ್ತ ಗ್ರಾಮದ ಬಳಿಯ ಮೇಲ್ಮಾಳದ ಸರ್ವೇ ನಂ. 312ರ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆಯಲಾಗಿದೆ ಎಂಬ ಮಾಹಿತಿ ತಿಳಿದು ಬಂದಿತು. ಹೀಗಾಗಿ ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ಪೂರ್ವ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ತಾಜುದ್ದೀನ್ ಮತ್ತು ಸಿಬ್ಬಂದಿ, ತಹಶೀಲ್ದಾರ್ ಚಿದಾನಂದ ಗುರುಸ್ವಾಮಿಯವರ ಸಮಕ್ಷಮ ದಾಳಿ ನಡೆಸಿದರು ಎಂದರು.

ಜಿಲ್ಲೆಯ ಅರಣ್ಯಗಳ ಅಂಚಿನಲ್ಲಿ ಗಾಂಜಾ ಬೆಳೆಯುತ್ತಿದ್ದ ಬಗ್ಗೆ ಮಾಹಿತಿ ಇದೆ. ಹಾಗಾಗಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಸಂಶಯ ಬಂದ ಕಡೆಗಳಲ್ಲಿ ದಾಳಿ, ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ದಿವ್ಯಾ ತಿಳಿಸಿದರು.

ಎಎಸ್ಪಿ ಅನಿತಾ, ಪ್ರಭಾರ ಡಿವೈಎಸ್‌ಪಿ ಅನ್ಸರ್ ಅಲಿ, ಸಿಇಎನ್ ಇನ್‌ಸ್ಪೆಕ್ಟರ್ ಮೋಹಿತ್ ಸಹದೇವ್, ಪೂರ್ವ ಠಾಣೆ ಸಬ್ ಇನ್‌ಸ್ಪೆಕ್ಟರ್ ತಾಜುದ್ದೀನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here