ಗುರುಪುರ ಗುಡ್ಡ ಕುಸಿತ : ಸಂತ್ರಸ್ತರಿಗೆ ₹10,000 ಪರಿಹಾರ ಧನ ಪ್ರಕಟ

0
39

ಗುರುಪುರ: ಇತ್ತೀಚೆಗೆ ಗುರುಪುರ ಗ್ರಾಪಂ ವ್ಯಾಪ್ತಿಯ ಮೂಳೂರು ಗ್ರಾಮದ ಮಠದಗುಡ್ಡೆ ಪ್ರದೇಶದಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಆಸ್ತಿ-ಪಾಸ್ತಿ ಕಳೆದುಕೊಂಡ 70 ಕುಟುಂಬಗಳಿಗೆ ಸರಕಾರದಿಂದ ತಲಾ ₹10,000 ಪರಿಹಾರ ಪ್ರಕಟಗೊಂಡಿದೆ.

ಗುಡ್ಡ ಕುಸಿತದ ಪರಿಣಾಮದಿಂದಾಗಿ ಮನೆ ಕಳೆದುಕೊಂಡ ಕುಟುಂಬಗಳಿಗೆ ಬಾಡಿಗೆ ಮನೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಈ ವರೆಗೂ ತಿಂಗಳ ಬಾಡಿಗೆ ₹2,500 ರೂ. ಬಿಡುಗಡೆಯಾಗಿಲ್ಲ ಎಂದು ಸಂತ್ರಸ್ತರು ಶಾಸಕ ಡಾ. ಭರತ್ ಶೆಟ್ಟಿಯವರಲ್ಲಿ ಅಳಲು ತೋಡಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಶಾಸಕರು ಸೋಮವಾರ ಜಿಲ್ಲಾಡಳಿತದೊಂದಿಗೆ ತುರ್ತು ಸಮಾಲೋಚನೆ ನಡೆಸಿ ಸಂತ್ರಸ್ತರಿಗೆ ತಕ್ಷಣ ಪರಿಹಾರ ಬಿಡುಗಡೆಗೊಳಿಸುವಂತೆ ಸೂಚನೆ ನೀಡಿದ್ದರು.

ಅದರಂತೆ ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಸಂತ್ರಸ್ತರ ಬ್ಯಾಂಕ್ ಖಾತೆಗೆ ಪ್ರಕೃತಿ ವಿಕೋಪ ಮಾರ್ಗಸೂಚಿಯಂತೆ ಸಂತ್ರಸ್ತರಿಗೆ ಪ್ರಥಮ ಹಂತದ ತಲಾ 10,000 ರೂ. (ಒಟ್ಟು 7 ಲಕ್ಷ ರೂ.) ಪರಿಹಾರ ಧನ ಮಂಜೂರು ಮಾಡುವಂತೆ ಪ್ರಕಟಣೆ ಹೊರಡಿಸಿದ್ದಾರೆ.

ಸಂತ್ರಸ್ತರಿಗೆ ಉಳಿದ ಪರಿಹಾರ ಹಾಗೂ ಬಾಕಿ ಇರುವ ಎಲ್ಲರಿಗೂ ಹಕ್ಕುಪತ್ರ ನೀಡುವಲ್ಲಿ ಶಾಸಕ ಡಾ. ಭರತ್ ಶೆಟ್ಟಿ ಈಗಾಗಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಅರ್ಹರಿಗೆ ಹಕ್ಕುಪತ್ರ ನೀಡುವಲ್ಲಿ ಶಾಸಕರು ಬದ್ಧರಾಗಿದ್ದಾರೆಂದು ಸ್ಥಳೀಯ ಬಿಜೆಪಿ ಮುಖಂಡ ರಾಜೇಶ್ ಸುವರ್ಣ ತಿಳಿಸಿದ್ದಾರೆ.

ಬಾಡಿಗೆ ಮನೆಯಲ್ಲಿರುವ ಸಂತ್ರಸ್ತರಿಗೆ ಶೀಘ್ರ ಬಾಡಿಗೆ ಮೊತ್ತ ಮಂಜೂರು ಮಾಡಬೇಕು ಮತ್ತು ಹಕ್ಕುಪತ್ರ ಸಿಗದ ಕುಟುಂಬಗಳಿಗೆ ಇನ್ನಷ್ಟು ವಿಳಂಬ ಮಾಡದೆ ಹಕ್ಕುಪತ್ರ ವಿತರಿಸಬೇಕು. ಇಲ್ಲವಾದಲ್ಲಿ ಸಂತ್ರಸ್ತರ ಪರವಾಗಿ, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಗುರುಪುರ ಗ್ರಾಪಂ ನಿಕಟಪೂರ್ವ ಉಪಾಧ್ಯಕ್ಷ ಜಿಎಂ ಉದಯ ಭಟ್ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು.

LEAVE A REPLY

Please enter your comment!
Please enter your name here