ಭಾನುವಾರ ಬಂಗ್ಲಗುಡ್ಡೆಯಲ್ಲಿ ನಡೆದ ಭೂಕುಸಿತದಲ್ಲಿ ಇಬ್ಬರು ಮಕ್ಕಳು ಜೀವಂತವಾಗಿ ಸಮಾಧಿ ಆದ ಬಳಿಕ, ಇದೀಗ ಎಚ್ಚೆತ್ತುಕೊಂಡಿರುವ ಗುರುಪುರ ಗ್ರಾಮ ಪಂಚಾಯಿತಿ, ಬಂಗ್ಲಗುಡ್ಡೆ ಹಾಗೂ ಮಠದಗುಡ್ಡೆ ಪರಿಸರದ ಎಲ್ಲಾ ನಿವಾಸಿಗಳನ್ನು ಅಲ್ಲಿಂದ ಖಾಲಿ ಮಾಡಿಸಿದ್ದಾರೆ.
ಈ ಪ್ರದೇಶದಲ್ಲಿ ಸುಮಾರು 180 ಮನೆಗಳಿದ್ದು, 40 ಮನೆಗಳು ಡೇಂಜರ್ ಝೋನ್ ನಲ್ಲಿತ್ತು. ಅವು ಅತ್ಯಂತ ಅಪಾಯಕಾರಿ ಪ್ರದೇಶಗಳಾಗಿವೆ. ಹಲವಾರು ನಿವಾಸಿಗಳನ್ನು ಭಾನುವಾರ ಸಂಜೆಯೇ ಇತರ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು ಮತ್ತು ಉಳಿದವರನ್ನು ನಿನ್ನೆ ಬಂಗ್ಲಗುಡ್ಡೆ ಪ್ರದೇಶದಿಂದ ಸ್ಥಳಾಂತರಿಸಲಾಯಿತು. ಅವರಿಗೆ ಗುರುಪುರ ಶಾಲೆ, ಪಿಯು ಕಾಲೇಜು ಮತ್ತು ಹಾಸ್ಟೆಲ್ಗಳಲ್ಲಿ ತಾತ್ಕಾಲಿಕ ಆಶ್ರಯ ನೀಡಲಾಗಿದೆ. ಇನ್ನೂ ಕೆಲವರು ಆಶ್ರಯ ಕೇಂದ್ರಗಳಲ್ಲಿ ತಂಗಿದ್ದಾರೆ.
ಬಾಡಿಗೆ ಮನೆಗಳಲ್ಲಿ ವಾಸಿಸುವ ನಿವಾಸಿಗಳಿಗೆ ₹2,500 ಗಳನ್ನು ಪಾವತಿಸಲು ಕಂದಾಯ ಇಲಾಖೆ ನಿರ್ಧರಿಸಿದೆ. ಘಟನೆಯಲ್ಲಿ ಗಾಯಗೊಂಡ ಶಾಹಿದಾ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.