ಗೆಳೆತನ

0
203
Tap to know MORE!

“ನಿನ್ನ ಗೆಳೆಯರನ್ನು ಹೇಳು, ನಾನು ನಿನ್ನ ಯೋಗ್ಯತೆಯನ್ನು ಹೇಳುತ್ತೇನೆ ” ಈ ಒಂದು ಮಾತನ್ನು ನಾವು ಆಗಾಗ ಕೇಳುತ್ತಿರುತ್ತೇವೆ.
ಏನಂತಾ ಮಹತ್ವವಿದೆ ಈ ಮಾತಿನಲ್ಲೆಂದು ಯೋಚಿಸಿ ನೋಡೋಣ ,ಸುಲಭದಲ್ಲಿ ಹೇಳುವುದಾದರೆ ನಮ್ಮ ಗೆಳೆಯರು ನಮ್ಮ‌ಮನೋಭಾವಕ್ಕೆ ,ಅಂತಸ್ತಿಗೆ ,ರೂಪಕ್ಕೆ ಹೊಂದುವವರೇ ಆಗಿರುತ್ತಾರೆ, ಹಾಗಾಗಿ ಗೆಳೆಯರ ಗುಣ,ಸ್ವಭಾವಗಳು ನಡೆನುಡಿಗಳು ,ಹವ್ಯಾಸಗಳು ನಮಗೆ ತುಂಬಾಯಿಷ್ಟ‌. ನಿಜವಾಗಿ ಅವು ಸಮಾಜವಿರೋಧಿ,ಕುಲಕಂಟಕ,ಮಾನಹಾನಿಕರವಾಗಿದ್ದರೂ ನಮಗೆ ಅದು ಗೋಚರಿಸುವುದಿಲ್ಲ
ಹೀಗಾಗಿ ನಮ್ಮ ಗೆಳೆಯರು ನಮ್ಮ ಮನೋಭಾವದ ಪ್ರತಿಬಿಂಬ, ಮೇಲೆ ಹೇಳಿದ
ಗೆಳೆತನದ ಕೆಟ್ಟ ಮುಖವನ್ನು ಬದಿಗಿಟ್ಟು ಉದಾತ್ತವೂ,ಶ್ರೇಷ್ಟ ವೂ ಆದ ಮುಖವನ್ನು ನೋಡೋಣ.
ನಾವು ನಮ್ಮ ಬಾಲ್ಯ,ಯೌವನವನ್ನು ಕಳೆದು ಇಂದು ಸಾಮಾಜಿಕ ಸ್ಥಾನಮಾನ ಪಡೆದು ಮನೆ,ಹೆಂಡತಿ ಮಕ್ಕಳೆಂಬ ಜವಬ್ದಾರಿಯನ್ನು ಹೊಂದಿ ಬಾಳಿ ಬದುಕುತ್ತಿರುವಾಗ,ಆಗಾಗ ಅವುಗಳಿಂದ ಹೊರಬಂದು ಕೊಂಚ ಸ್ವಚ್ಚಗಾಳಿಯನ್ನು ಉಸಿರಾಡಬೇಕೆಂಬ ಬಯಕೆ ಕಾಡಿದರೆ ಮರಳಿ ಗೆಳೆಯರ ನೆನಪು ಮಾಡಿಕೊಳ್ಳುತ್ತೇವೆ, ಅಂತಹ ಗೆಳೆಯರಾದರೂ ಯಾರು?
ಬಾಲ್ಯದಲ್ಲಿ ಆಡುವಾಗ ಸೇರಿಕೊಂಡು,ಯೌವನದಲ್ಲಿ ನಗೆ,ತಮಾಷೆಯಲ್ಲಿ ಜೊತೆಯಾಗಿ ,ಮುಂದೆ ನಾವು ಜವಬ್ದಾರೀ ನೆಲೆಗೆ ಬಂದ ನಂತರವೂ ನಮ್ಮ ಯಶಸ್ಸಿಗೆ ಸಂತೋಷ‌ಪಡುವ,ನಮ್ಮ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಅವಲೋಕಿಸುವ,ನಮ್ಮೊಂದಿಗೆ ಸಾಧನೆಯ ದಾರಿಯಲ್ಲಿ ಜೊತೆಯಾಗಿ ಹೆಜ್ಜೆ ಹಾಕುವ, ನಮ್ಮ ಯಶಸ್ಸಿಗಾಗಿ ಸಲಹೆ ನೀಡುವ ಆ ಅಂದಿನ ಗೆಳೆಯರೇ ಇಂದಿಗೂ ನೆನಪಾಗುತ್ತಾರೆ.
ನಾವು ಬಹುತೇಕರು ಬಾಲ್ಯದಲ್ಲಿ ಬಡತನದಲ್ಲಿಯೇ ಬೆಳೆದವರು. ಊಟವಾಗಲಿ, ಬಟ್ಟೆಯಾಗಲೀ ಹೇಳಿಕೊಳ್ಳುವ ಯಾವ ಸ್ಥಿತಿಯಲ್ಲಿಯೂ ಯಿರಲಿಲ್ಲ , ಊರಿಗೊಂದೇ ಯಿರುತ್ತಿದ್ದ ಶ್ರಿಮಂತರ ಮನೆ ,ಮತ್ತವರ ಮಕ್ಕಳಾದ ನಮ್ಮ ಸಹಪಾಠಿಗಳು ನಮ್ಮೊಂದಿಗೆ ಯಾವತ್ತೂ ಸಮಾನತೆಯಿಂದ ವರ್ತಿಸುತ್ತಲೇ ಯಿರಲಿಲ್ಲ,ನಾವು ಅವರ ತಂದೆ ತಾಯಿಯರನ್ನು ಕರೆಯುತ್ತಿದ್ದಂತೆ ನಮ್ಮ ವಯಸ್ಸಿನ ಅವರ ಮಕ್ಕಳನ್ನೂ ಅಮ್ಮ,ಅಯ್ಯರೆಂದೇ ಕರೆಯ ಬೇಕಿತ್ತು. ಇಂತಹ ಅಕಾಶ ಪಾತಾಳದ ಅಂತರವಿರುವಾಗ ಗೆಳೆತನ ವಾದರೂ ಹೇಗೆ ಸಾಧ್ಯ?ಸೇವಕ ತನವನ್ನು ಬಯಸುವವರು ಗೆಳೆಯಾರಾಗುವುದಾದರೂ ಹೇಗೆ?ಏ ಇವನೇ ರಾಮಯ್ಯನ ಬ್ಯಾಗನ್ನು ನೀನು ಹಿಡ್ಕಳೋ,ಇವಳೇ,ಸುಮಮ್ಮನಿಗೆ ಚೂರು ತಲೆನೋವಂತೆ ಸ್ವಲ್ಪ ಅವಳನ್ನು ಎತ್ತಿಕೊಳ್ಳೇ…ಇಂತಹ ನೂರು ಆದೇಶಗಳ ನಡುವೆ ಇಚ್ಚೆಯಿದ್ದರೂ ಸ್ನೇಹ ಕುದುರುವ ಅವಕಾಶವೆಲ್ಲಿ? ಹಾಗಾಗಿ ನಮಗೆ ನಮ್ಮಂತೆಯೇ ನೊವನ್ನುಂಡ,ಹಸಿದ ಹೊಟ್ಟೆಯ,ಹರಿದ ಬಟ್ಟೆಯ ಸೂರಿ,ವಿಶ್ವ, ಭೂಷಣ,ಪರಮೇಸಿಯಂತಹ ಸಹೃದಯರೇ ಗೆಳೆಯರು. ಅಚ್ಚರಿಯೆಂದರೆ ಇಂದು ನಾವು ನಮ್ಮಓದು,ಪರಿಶ್ರಮ,ಸಾಧನೆಯಿಂದ ಸಮಾಜದಲ್ಲಿ ಉನ್ನತ ಸ್ಥಾನವನ್ನುಪಡೆದಿದ್ದೇವೆ ,ಉನ್ನತ ಹುದ್ದೆ,ದೊಡ್ಡ ಸಂಬಳ, ವಾಹನ,ಸವಲತ್ತು,ಮನೆ,ಆಸ್ತಿಯನ್ನು ಹೊಂದಿದ್ದೇವೆ ಈಗ ಮೇಲೆ ಹೇಳಿದ ರಾಮಯ್ಯನೋ,ಸುಮಮ್ಮ ನಂತವರೋ ನಮ್ಮ ಸ್ನೇಹಿತರಾದಾರು, ಆದರೆ ನಮಗೀಗಲೂ ಅದೇ ಸೂರಿ,ವಿಶ್ವ,ಭೂಷಣ,ಪರಮೇಸಿಯರೇ ಆಪ್ತರು.
ಯಾಕೆ? ಯಾಕೆಂದರೆ ಸ್ನೇಹ ಸಂಬಂಧವು ಕೂಡಾ ಕರುಳ ಸಂಬಂಧದಂತೆಯೇ ಪರಿಶುದ್ದವಾದುದು, ನಮಲ್ಲಿ “ಸನಾಭಿ” ಎಂಬ ಮಾತಿದೆ ಸಹೋದರ ಎಂಬರ್ಥ. ಈ ಗೆಳೆತನವು ಕೂಡಾ ಅದೇ ನೆಲೆಯದು, ಹಾಗಾಗಿ ಗೆಳೆತನವು ಅಮೂಲ್ಯವಾದ ಸಂಗತಿ, ನಮ್ಮ‌ಮನೊಭಾವಕ್ಕೆ ಹೊಂದುವಂತಹ ಗೆಳೆಯರು ಯಾವುದೇ ಪ್ರತಿಫಲಾಪೆಕ್ಷೆಯಿಲ್ಲದೆ ನಮ್ಮನ್ನು ಅನುಸರಿಸಿಕೊಂಡು ಬರುತ್ತಾರೆ, ನಾವು ತಪ್ಪಿದಾಗ ಎಚ್ಚರಿಸುತ್ತಾರೆ, ಗೆದ್ದಾಗ ಬೀಗುತ್ತಾರೆ,ನಮ್ಮ ಸಂತೋಷಕ್ಕಾಗಿ ಅವರು ತ್ಯಾಗ‌ಮಾಡುತ್ತಾರೆ,ಇಂತಹ ಗೆಳೆಯರೇ ನಮ್ಮ ಅಮೂಲ್ಯ ಆಸ್ತಿ .
ನಮ್ಮ ನಮ್ಮ ಗೆಳೆಯರ ಬಳಗವನ್ನು ನೋಡಿದರೆ ಅಲ್ಲಿನ ಗೆಳೆಯರಲ್ಲಿ ಪ್ರತಿಯೊಬ್ಬರಲ್ಲಿಯೂ ಸಮಾನವಾದ ಆಸಕ್ತಿಗಳಿರುತ್ತವೆ,ಈ ಆಸಕ್ತಿಗಳೇ ನಮ್ಮನ್ನು ಬೆಸೆಯುತ್ತವೆ ಮತ್ತು ಆ ಬೆಸುಗೆಯು ಇಂದಿಗೂ ಮುಂದುವರಿದುಕೊಂಡು ಬಂದಿರುತ್ತದೆ.
ನನ್ನ ವಿದ್ಯಾರ್ಥಿ ದೆಸೆಯಲ್ಲಿ ಚರ್ಚೆ,ಭಾಷಣ, ನಾಟಕ,ಜಾಥ,ಎನ್ನೆಸೆಸ್ ಮುಂತಾದ ಚಟುವಟಿಕೆಯಲ್ಲಿ ನಾನು ಮಂಚೂಣಿಯಲ್ಲಿದ್ದೆ . ನನ್ನ ಎಲ್ಲ ಗೆಳೆಯರ ಕ್ಷೇತ್ರವೂ ಇದೇ ಆಗಿತ್ತು, ನಾವು ಪದವಿ ಮುಗಿಸಿ ಎರಡುವರೆ ದಶಕ ವಾದರೂ, ನಾವು ಬೇಟಿಯಾದಾಗ ಮಾತುಗಳು ಆರಂಭವಾಗುವುದು ಮತ್ತೆ ಇದೇ ಹಾಡು,ಜಾಥ,ನಟನೆಗಳ ಕಾಲದಿಂದಲೇ , ಅಂದಿನ ಜಾಥದಲ್ಲಿ ನಾನು ಅಭಿನಯಿಸಿದ್ದ ಪಾತ್ರವನ್ನು ಇನ್ನೂ ನೆನಪಿನಲ್ಲಿಟ್ಟುಕೊಂಡ ನನ್ನ‌ಅಂದಿನ ಸಹಪಾಠಿ ಗೆಳತಿ ಇಂದಿಗೂ ನನಗೆ “ಯಂತ ಯಂಕಪಣ” ಅಂತಲೇ ಗುರುತಿಸಿ ಕರೆಯುವುದು ನನಗಂತೂ ಅಭಿಮಾನದ ಸಂಗತಿ,ಇನ್ನೊಬ್ಬ ಗೆಳೆಯ ನಡಿಗೆ ಸ್ಪರ್ಧೆಯಲ್ಲಿಮಿಂಚಿದ್ದ ಕಾರಣಕ್ಕೆ ನಾವು ಇಂದಿಗೂ ಅವನನ್ನು” ನಡಿಗೆ ಸೂರ” ಅಂತಲೇ ಕರೆಯುತ್ತೀವಿ, ಗುಣ,ಸ್ವಬಾವಗಳ ಕಾರಣಕ್ಕೆ ನಾವು ಇಟ್ಡಿದ್ದ ಅಡ್ಡ ಹೆಸರುಗಳಿಂದಲೇ ಇಂದಿಗೂ ಪರಸ್ಪರ ಕರೆದುಕೊಂಡು ಸಂಭ್ರಮ ಪಡುತ್ತೇವೆ, ಅಂದು ಒಟ್ಟಿಗೆ ಮಾಡಿದ ಹಾಸ್ಯ, ಹಂಚಿತಿಂದ ಊಟ, ಪಾಠ ಪ್ರವಚನಗಳಲ್ಲಿ ಅರ್ಥ ವಾಗದಿದ್ದರೆ ಸಹಾಯ, ಗೆಲ್ಲಲೇ ಬೇಕೆಂಬ ಛಲ, ಸೋತಾಗ ಕೊಡುವ ಹೆಗಲು,ಕಣ್ಣಿರನ್ನು ಒರೆಸುವ ಕೈ, ಮುಂದೆ ಮದುವೆ ಮುಂಜಿಗಳಲ್ಲಿ ಸಂಭ್ರಮದ ಓಡಾಟ….
ಇದು ನಿಜವಾದ ಗೆಳೆತನ. ಈ ಗೆಳೆತನಕ್ಕೆ ಮುಪ್ಪಿಲ್ಲ, ಕೊನೆಯಿಲ್ಲ.
ಬಾಕಿವುಳಿದ ,ಸಮಯ ಸಂದರ್ಭ ನೊಡಿ ಬರುವ ಗೆಳೆತನವು ಕಪಟಿಗಳ ಸಂಚು,ಹೂಟ.ಇದನ್ನು ಅರಿತುಕೊಂಡು ನಿಜವಾದ ಗೆಳೆತನವನ್ನು ಆಯ್ದು ಕೊಳ್ಳಬೇಕು

– ಹರೀಶ್ ಟಿ ಜಿ

LEAVE A REPLY

Please enter your comment!
Please enter your name here