ವಿಲಕ್ಷಣ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ಬೋರ್ಡ್ ಪರೀಕ್ಷೆಯಲ್ಲಿ ತನ್ನ ಸ್ನೇಹಿತ ತನಗಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದರಿಂದ 10 ನೇ ತರಗತಿಯ ವಿದ್ಯಾರ್ಥಿನಿ ಮಂಗಳವಾರ ತನ್ನ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಈ ಘಟನೆಯು ಕಲ್ಯಾಣ್ಪುರ ಪೊಲೀಸ್ ವಲಯದಲ್ಲಿ ನಡೆದಿದೆ.
ವಿದ್ಯಾರ್ಥಿನಿ ಅಮಿಶಾ (15) ಶೇ.83 ರಷ್ಟು ಅಂಕಗಳನ್ನು ಗಳಿಸಿದ್ದರೆ, ಆಕೆಯ ಸ್ನೇಹಿತ ಶೇ.85 ರಷ್ಟು ಅಂಕಗಳನ್ನು ಪಡೆದಿದ್ದರು.
ಎಸ್ಪಿ ಕಾನ್ಪುರ್ ದಿನೇಶ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಯಾವುದೇ ಆತ್ಮಹತ್ಯೆ ಪತ್ರವು ಪತ್ತೆಯಾಗಿಲ್ಲ ಮತ್ತು ಕಳೆದ ಶನಿವಾರ ಮಂಡಳಿಯ ಪರೀಕ್ಷಾ ಫಲಿತಾಂಶ ಪ್ರಕಟವಾದ ನಂತರ ಅವಳು ಅಸಮಾಧಾನಗೊಂಡಿದ್ದಳು ಎಂದು ಬಾಲಕಿಯ ಕುಟುಂಬಸ್ಥರು ತಿಳಿಸಿದ್ದಾರೆ.
ತನ್ನ ಸ್ನೇಹಿತ ಹೆಚ್ಚಿನ ಅಂಕಗಳನ್ನು ಗಳಿಸಿದ್ದರಿಂದ ಮತ್ತು ಅವಳು ನಿರೀಕ್ಷಿಸಿದ ಅಂಕಗಳು ಅವಳಿಗೆ ಸಿಗದೇ ಇದ್ದ ಕಾರಣ, ತನ್ನ ಮಗಳು ಖಿನ್ನತೆಗೆ ಒಳಗಾಗಿದ್ದಳು ಎಂದು ವಿದ್ಯಾರ್ಥಿನಿಯ ತಂದೆ ಶ್ರವಣ್ ಕುಮಾರ್ ನಿಷಾದ್ ಹೇಳಿದ್ದಾರೆ.
ಕುಟುಂಬವು ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ.
ಅಮಿಶಾ ಆತ್ಮಹತ್ಯೆಗೆ ಶರಣಾದಾಗ, ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ.