ಗೋ ಹತ್ಯೆ ನಿಷೇಧ ಮಸೂದೆ | 13 ವರ್ಷ ಮೇಲ್ಪಟ್ಟ ಅಥವಾ ಅನಾರೋಗ್ಯ ಪೀಡಿತ ಜಾನುವಾರುಗಳ ಹತ್ಯೆಗೆ ಅವಕಾಶ!

0
60

ಬೆಂಗಳೂರು ಡಿ.9: ವಿಧಾನಸಭೆಯಲ್ಲಿ ಬುಧವಾರ ಅಂಗೀಕಾರವಾದ ಗೋ ಹತ್ಯೆ ನಿಷೇಧ ವಿಧೇಯಕದಲ್ಲಿ ಹಲವು ನಿಯಮಗಳನ್ನು ಅಡಕ ಮಾಡಲಾಗಿದೆ. ವಿಧಾನಪರಿಷತ್ತಿನಲ್ಲಿಯೂ ಅಂಗೀಕಾರಗೊಂಡ ನಂತರ ಇದು ರಾಜ್ಯಪಾಲರ ಒಪ್ಪಿಗೆ ಬಳಿಕ ಕಾಯ್ದೆಯಾಗಿ ಜಾರಿಯಾಗಲಿದೆ.

ಗೋಹತ್ಯೆ ನಿಯಂತ್ರಣ ಮತ್ತು ಜಾನುವಾರು ಸಂರಕ್ಷಣಾ ವಿಧೇಯಕದಲ್ಲಿ 13 ವರ್ಷದೊಳಗಿನ ಆಕಳು, ಆಕಳ ಕರು ಮತ್ತು ಗೂಳಿ, ಎತ್ತು, ಎಮ್ಮೆ ಅಥವಾ ಕೋಣವನ್ನು ವಧಿಸುವಂತಿಲ್ಲ. ಆದರೆ, ಸಾರ್ವಜನಿಕ ಆರೋಗ್ಯದ ಹಿತಾಸಕ್ತಿಯಿಂದ ಅಥವಾ ಗುಣಪಡಿಸಲಾಗದಂತಹ ಕಾಯಿಲೆಯಿಂದ ಬಳಲುತ್ತಿರುವ 13 ವರ್ಷ ವಯಸ್ಸಿನ ಮೇಲ್ಪಟ್ಟ ಎಮ್ಮೆಯನ್ನು ಮಾತ್ರ ರಾಜ್ಯ ಸರಕಾರವು ಅಧಿಕೃತಗೊಳಿಸಿದ ಪಶುವೈದ್ಯಾಧಿಕಾರಿಯು ಸಕ್ಷಮ ಪ್ರಾಧಿಕಾರಿಯ ಪ್ರಮಾಣೀಕರಣದೊಂದಿಗೆ ವಧಿಸಲು ಅವಕಾಶ ಕಲ್ಪಿಸಬಹುದು.

ಇದನ್ನೂ ಓದಿ: ಕೃಷಿ ಕಾಯ್ದೆಗಳ ಕುರಿತು ಮಾಹಿತಿ ನೀಡಲು ಬಿಜೆಪಿಯಿಂದ ದೇಶವ್ಯಾಪಿ “ರೈತ ಜಾಗೃತಿ ಯಾತ್ರೆ”

ಪ್ರಸ್ತಾವಿತ ಕಾಯ್ದೆಯಲ್ಲಿರುವ ಪ್ರಮುಖ ಅಂಶಗಳು ಈ ಕೆಳಗಿನಂತಿದೆ.

  • ಗೋ ಹತ್ಯೆ ಮಾಡಿದರೆ 3 ವರ್ಷಗಳಿಂದ 7 ವರ್ಷಗಳವರೆಗೆ ಕಾರಾಗೃಹವಾಸ
    • ಮೊದಲ ಬಾರಿ ಜಾನುವಾರು ಹತ್ಯೆ ಮಾಡಿದರೆ 50 ಸಾವಿರ ರೂ.ಗಳಿಂದ 5 ಲಕ್ಷ ರೂ.ವರೆಗೆ ದಂಡ
    • ಎರಡು ಅಥವಾ ಹೆಚ್ಚಿನ ಬಾರಿಯ ಅಪರಾಧಕ್ಕೆ 1 ಲಕ್ಷದಿಂದ 10 ಲಕ್ಷ ರೂ.ದಂಡ ಮತ್ತು ಏಳು ವರ್ಷ ಕಾರಾಗೃಹ ಶಿಕ್ಷೆ
  • ಹಸುಗಳ ಸಾಗಣೆ ಮತ್ತು ಶುಲ್ಕ ವಿಧಿಸಲು, ನಿಯಮ ರಚಿಸಲು, ಅನುಮತಿ ನೀಡಲು ಅಧಿಕಾರ
  • 13 ವರ್ಷಕ್ಕಿಂತ ಮೇಲಿನ ಎಮ್ಮೆಗಳನ್ನು ಕೊಲ್ಲಲು ಮಸೂದೆಯಲ್ಲಿ ಅನುಮತಿಯಿದೆ.
    • ಅನಾರೋಗ್ಯ ಮತ್ತು ಇತರ ಗಂಭೀರ ಕಾರಣಗಳಿಗಾಗಿ ಗೋವನ್ನು ಹತ್ಯೆ ಮಾಡಬೇಕೆಂದರೆ ಇನ್ನು ಮುಂದೆ ಪಶು ಸಂಗೋಪನಾ ಇಲಾಖೆಯಿಂದ ಪ್ರಮಾಣ ಪತ್ರ ಪಡೆದುಕೊಳ್ಳಬೇಕಾಗುತ್ತದೆ.
    • ಸಾಂಕ್ರಾಮಿಕ ರೋಗಗಳ ಜಾನುವಾರುಗಳನ್ನು ಕೊಲ್ಲುವುದಕ್ಕೆ ತೊಂದರೆ ಇಲ್ಲ, ಆದರೆ, ಪಶುವೈದ್ಯಾಧಿಕಾರಿ ಪ್ರಮಾಣಪತ್ರ ಅಗತ್ಯ
    • ಗುಣವಾಗದ ಕಾಯಿಲೆ ಹೊಂದಿದ ಹಸು ಕೊಲ್ಲಲು ಅವಕಾಶವಿದೆ, ಆದರೆ, ಪ್ರಮಾಣ ಪತ್ರ ಅಗತ್ಯ
    • ವಧೆಗೆ ಪಶು ವೈದ್ಯಾಧಿಕಾರಿಯಿಂದ ಪ್ರಮಾಣ ಪತ್ರ ಕಡ್ಡಾಯ

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

  • ಸ್ಥಳೀಯ ಆಡಳಿತಕ್ಕೆ ಗೋ ಶಾಲೆ ನಿರ್ವಹಣೆ ಮಾಡುವ ವಿಧಾನಕ್ಕೆ ಸಂಬಂಧಿಸಿದಂತೆ ನಿಯಮ ರೂಪಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ
    • ರಕ್ಷಣೆಗೆ ಸಂಬಂಧಪಟ್ಟಂತೆ ಲೆವಿ ಸಂಗ್ರಹಿಸಲು ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರಕ್ಕೆ ಅವಕಾಶ
  • ಸಬ್ ಇನ್‌ಸ್ಪೆಕ್ಟರ್ ಅಧಿಕಾರಿಗಳಿಗೆ ಸಕ್ಷಮ ಪ್ರಾಧಿಕಾರದ ಅಧಿಕಾರ
    • ದಾಳಿ ಮಾಡುವುದು, ಪರಿಶೀಲನೆ ಮತ್ತು ವಶಕ್ಕೆ ಪಡೆವ ಅಧಿಕಾರ ಸಬ್ ಇನ್‌ಸ್ಪೆಕ್ಟರ್‌ಗಳಿಗೆ
    • ಗೋವನ್ನು ಅನುಮಾನಾಸ್ಪದವಾಗಿ ಕಟ್ಟಿಕೊಂಡಿದ್ದರೆ ಅಥವಾ ಸಾಗಣೆ ಮಾಡುತ್ತಿದ್ದಾಗ ತನಿಖಾಧಿಕಾರಿಗೆ ಸಹಕಾರ ನೀಡಬೇಕು
    • ವಶಕ್ಕೆ ಪಡೆದ ವಿಚಾರವನ್ನು ತಕ್ಷಣ ಸಬ್ ಡಿವಿಜನ್ ಮ್ಯಾಜಿಸ್ಟ್ರೇಟರ್‌ಗಳಿಗೆ ತಿಳಿಸಿ ಅಲ್ಲಿಂದ ಮುಟ್ಟುಗೋಲು ಹಾಕಿಕೊಳ್ಳುವುದು
    • ಗೋ ಮಾಂಸ ವಶಕ್ಕೆ ಪಡೆದಿದ್ದರೆ ಮನುಷ್ಯನ ಉಪಭೋಗಕ್ಕೆ ಉಪಯೋಗವಲ್ಲ ಎಂದು ಪರಿಗಣಿಸಿ ನಾಶಪಡಿಸಬಹುದು
    • ವಶಪಡಿಸಿಕೊಂಡ ಹಸುಗಳನ್ನು ಸಾರ್ವಜನಿಕ ಹರಾಜು ಮಾಡಲು ಅವಕಾಶ
  • ಸೆಕ್ಷನ್ 19ರ ಪ್ರಕಾರ ಯಾವುದೇ ಸಂದರ್ಭದಲ್ಲಿ ವಶಕ್ಕೆ ಪಡೆದ ಹಸುಗಳನ್ನು ಆರೋಪಿತರಿಗೆ ಹಿಂದಿರುಗಿಸುವಂತಿಲ್ಲ
  • ಗೋ ಹತ್ಯೆ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯ ಸ್ಥಾಪನೆ
  • ಆರೋಪಿತರನ್ನು ವಶಕ್ಕೆ ಪಡೆಯುವುದು, ಪ್ರಕರಣ ವಿಲೇವಾರಿ ಸೆಷನ್ ಜಡ್ಜ್ ಹಂತದಲ್ಲೇ ನಡೆಯಬೇಕು
    • ಪ್ರಕರಣ ಮುಗಿದ ಬಳಿಕ ಆರೋಪ ಸಾಬೀತಾದಲ್ಲಿ ಹಸು, ಸಾಗಣೆ, ವಾಹನ, ಸ್ಥಳ ಮುಟ್ಟುಗೋಲು ಹಾಕಿಕೊಳ್ಳಬಹುದು.
  • ಗೋ ರಕ್ಷಣೆಗೆ ಶ್ರಮಿಸುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ
  • ಯಾವುದೇ ಲಸಿಕೆ, ಪ್ರಯೋಗಕ್ಕಾಗಿ ಸರ್ಕಾರ ಸ್ಥಾಪನೆ ಮಾಡಿರುವ ಪ್ರಯೋಗಾಲಯಕ್ಕೆ ಈ ನಿಯಮ ಅನ್ವಯವಾಗಲ್ಲ
  • ಸಾರ್ವಜನಿಕ ಹಿತಕ್ಕಾಗಿ ಪ್ರಾಣಿಯನ್ನು ಕೊಲ್ಲಲೇಬೇಕೆಂದು ಸರ್ಕಾರದಿಂದ ಪ್ರಮಾಣಿತವಾಗಿದ್ದರೆ ಅನ್ವಯವಾಗಲ್ಲ
  • ಕರ್ನಾಟಕ ಸೊಸೈಟಿ ಆಕ್ಟ್ ಪ್ರಕಾರ ನೊಂದಾಯಿತ ಸಂಸ್ಥೆಗಳಿಗೆ ಮಾತ್ರ ಗೋ ಶಾಲೆ ನಡೆಸಲು ಅಧಿಕಾರ

LEAVE A REPLY

Please enter your comment!
Please enter your name here