ವಿವಿ ಕಾಲೇಜು: ಗ್ಯಾಟ್‌- ಬಿ ಪರೀಕ್ಷೆಯಲ್ಲಿ 68ನೇ ರ‍್ಯಾಂಕ್ ಪಡೆದ ಮರಿಯಂ ರಝಾನಾ

0
103
Tap to know MORE!

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಅಂತಿಮ ಬಿಎಸ್ಸಿ ಪರೀಕ್ಷೆ ಬರೆದಿರುವ ಮರಿಯಂ ರಝಾನಾ ಅತ್ಯಪರೂಪದ ಸಾಧನೆಯೊಂದನ್ನು ಮಾಡಿದ್ದಾರೆ. ರಾಷ್ಟ್ರ ಮಟ್ಟದ ಗ್ಯಾಟ್‌- ಬಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಮಂಗಳೂರು ವಿಶ್ವವಿದ್ಯಾನಿಲಯ ಅಥವಾ ವಿವಿ ಕಾಲೇಜಿನ ಇತಿಹಾಸದಲ್ಲೇ ಈವರೆಗೆ ಯಾರೂ ಮಾಡದ ಸಾಧನೆ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ನಡೆಸುವ ಗ್ರಾಜ್ಯುವೇಟ್‌ ಆಪ್ಟಿಟ್ಯೂಡ್‌ ಟೆಸ್ಟ್‌- ಬಯೋಟೆಕ್ನಾಲಜಿ (ಗ್ಯಾಟ್‌ ಬಿ)- 2020 ಪ್ರವೇಶ ಪರೀಕ್ಷೆಯಲ್ಲಿ 68ನೇ ರ‍್ಯಾಂಕ್‌ ಗಳಿಸಿರುವ ಮರಿಯಂ ರಝಾನಾ, ಈ ಮೂಲಕ ತಮಗೆ ತರಬೇತಿ ನೀಡಿದ ವಿಶ್ವವಿದ್ಯಾನಿಲಯ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸಿದ್ಧರಾಜು ಎಂಎನ್‌ ಅವರಿಗೆ ಹೆಮ್ಮೆಯುಂಟುಮಾಡಿದ್ದಾರೆ. ವಿದ್ಯಾರ್ಥಿನಿ ಗ್ಯಾಟ್‌- ಬಿ ಪ್ರವೇಶ ಪರೀಕ್ಷೆ ಬರೆಯಲು ಅಡ್ಡಿಯಾಗಬಹುದಾಗಿದ್ದ, ಅಕ್ಟೋಬರ್‌ 3 ರ ಅಂತಿಮ ಪದವಿಯ ಪ್ರಾಣಿಶಾಸ್ತ್ರ ಪರೀಕ್ಷೆಯನ್ನುಮುಂದೂಡುವಂತೆ ಅವರು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಮನವಿ ಸಲ್ಲಿಸಿದ್ದರು. ವಿವಿಯೂ ಅವರ ಒತ್ತಾಯಕ್ಕೆ ಸ್ಪಂದಿಸಿತ್ತು.

ಇದನ್ನೂ ಓದಿ: ಮಂಗಳೂರು : ವಿವಿ ಕಾಲೇಜಿನಲ್ಲಿ ಸರ್ ಸಿ. ವಿ. ರಾಮನ್‌ ಮತ್ತು ಮೇಡಂ ಮೇರಿ ಕ್ಯೂರಿ ಜನ್ಮದಿನಾಚರಣೆ

ಗ್ಯಾಟ್‌- ಬಿ ಫರೀದಾಬಾದ್‌ನ ರೀಜನಲ್‌ ಸೆಂಟರ್‌ ಫಾರ್‌ ಬಯೋಟೆಕ್ನಾಲಜಿ ನಡೆಸುವ, ದೇಶದ ಕೆಲವಷ್ಟೇ ಸಂಸ್ಥೆಗಳಲ್ಲಿ ಲಭ್ಯವಿರುವ ಜೈವಿಕ ತಂತ್ರಜ್ಞಾನ ಇಲಾಖೆಯಿಂದ ಬೆಂಬಲಿತ ಸ್ನಾತಕೋತ್ತರ ಕೋರ್ಸ್‌ಗಳಿಗೆ ನಡೆಸುವ ಅರ್ಹತಾ ಪರೀಕ್ಷೆ. ಇಲ್ಲಿನ ರ‍್ಯಾಂಕಿಂಗ್‌ ಆಧರಿಸಿ ಸಂಸ್ಥೆಗಳು ತಮ್ಮ ದಾಖಲಾತಿ ನಿಯಮಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಸ್ಟೈಪೆಂಡ್‌ ಸಹಿತ ಕಲಿಕೆಗೆ ಅವಕಾಶ ಮಾಡಿಕೊಡುತ್ತವೆ.

ಪರೀಕ್ಷೆ ಹೇಗೆ?
ಒಟ್ಟು 180 ನಿಮಿಷಗಳ ಪರೀಕ್ಷೆ ಕಂಪ್ಯೂಟರ್‌ ಆಧರಿತವಾಗಿರುತ್ತದೆ (ಸಿಬಿಟಿ). ಮೊದಲ ಭಾಗದಲ್ಲಿ ಪಿಯುಸಿ ವಿಷಯಗಳನ್ನು (ವಿಜ್ಞಾನ) ಆಧರಿತ 60 ಕಡ್ಡಾಯ ಬಹ ಆಯ್ಕೆ ಪ್ರಶ್ನೆಗಳಿರುತ್ತವೆ. ದ್ವಿತೀಯ ಭಾಗದಲ್ಲಿ ವಿಶ್ಲೇಷಣೆ ಬಯಸುವ, ಪದವಿ ಹಂತದ ವಿಷಯ ಆಧರಿತ ಕಡ್ಡಾಯ ಬಹ ಆಯ್ಕೆ ಪ್ರಶ್ನೆಗಳಿರುತ್ತವೆ. ಅಭ್ಯರ್ಥಿ 100 ಪ್ರಶ್ನೆಗಳಲ್ಲಿ ಕನಿಷ್ಠ 60 ನ್ನು ಉತ್ತರಿಸಬೇಕಾಗಿರುತ್ತದೆ. ಪ್ರತಿ ತಪ್ಪು ಉತ್ತರಕ್ಕೂ ನೆಗೆಟಿವ್‌ ಅಂಕವಿರುತ್ತದೆ.

ಏನು ಲಾಭ?
ಈ ಪರೀಕ್ಷೆಯ ಮೂಲಕ ವಿವಿಧ ಸ್ನತಕೋತ್ತರ ಕೋರ್ಸ್‌ಗಳನ್ನು ಆಯ್ದುಕೊಳ್ಳುವ ಪ್ರತಿ ವಿದ್ಯಾರ್ಥಿಯೂ ಸ್ಟೈಪೆಂಡ್‌ ಪಡೆಯುತ್ತಾನೆ. ಎಂ.ಎಸ್ಸಿ (ಜೈವಿಕ ತಂತ್ರಜ್ಞಾನ) ಅಥವಾ ತತ್ಸಂಬಂಧಿ ವಿಷಯಗಳಿಗೆ ತಿಂಗಳಿಗೆ ರೂ. 5000, ಎಂ.ಎಸ್ಸಿ (ಕೃಷಿ ಜೈವಿಕ ತಂತ್ರಜ್ಞಾನ)ವಾದರೆ ರೂ. 7500 ಮತ್ತು ಎಂ.ವಿ. ಎಸ್ಸಿ, ಎಂ.ಟೆಕ್‌ (ಜೈವಿಕ ತಂತ್ರಜ್ಞಾನ) ಗಳಿಗೆ ಪ್ರತಿ ತಿಂಗಳು ರೂ. 12000 ದೊರೆಯುತ್ತದೆ. ಮರಿಯಂ ರಝಾನಾಗೆ ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾನಿಲಯ ಅವಕಾಶ ನೀಡಿದೆ. ಭವಿಷ್ಯದಲ್ಲಿ ಈಕೆ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್‌) ಗೆ ಸೇರುವ ಗುರಿ ಹೊಂದಿದ್ದಾರೆ.

ಇದೇ ವೇಳೆ ಡಾ. ಸಿದ್ಧರಾಜು ಎಂ ಎನ್‌ ಅವರ ಬಳಿ ತರಬೇತಿ ಪಡೆದ ಅಂತಿಮ ಬಿ. ಎಸ್ಸಿಯ ಇನ್ನೊಬ್ಬ ವಿದ್ಯಾರ್ಥಿನಿ ರಕ್ಷಾ ಬೇಳ ಸಮ್ಮರ್‌ ರಿಸರ್ಚ್‌ ಫೆಲೋಶಿಪ್‌- 2019 ಗೆ ಆಯ್ಕೆಯಾಗಿದ್ದು ಹೈದಾರಾಬಾದ್‌ ವಿವಿಯಲ್ಲಿ ಎರಡು ತಿಂಗಳು ರೂ. 12,500 ಸ್ಟೈಪೆಂಡ್‌ನೊಂದಿಗೆ ಕೆಲಸ ಮಾಡಿದ್ದಾರೆ. ಇದೂ ಕೂಡ ಕಾಲೇಜಿನ ಇತಿಹಾಸದಲ್ಲೇ ಮೊದಲು. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಡಾ. ಸಿದ್ಧರಾಜು ಎಂ.ಎನ್‌ ಅವರನ್ನು (9008761986) ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here