ಗ್ರಾಮೀಣತೆ

0
191
Tap to know MORE!

ಗ್ರಾಮೀಣರೆಂದು ನಾಡವರ್ಗಳೆಂದು ಈ ನಾಡಿನ ಜನಪದರನ್ನು ಗುರಿತಿಸುವುದು ನಮ್ಮ ಅಂತರಂಗದ ಒಳ್ಳೆಯತನದ ಪ್ರತೀಕ. ಆದರೆ ವಿದ್ಯೆ,ಅಂತಸ್ತು,ವೇಷಭೂಷಣ, ಮಾತಿನ ಶೈಲಿಯನ್ನೇ ನಾಗರಿಕತೆಯೆಂದು ತಪ್ಪಾಗಿ ಅರ್ಥೈಸುವ ಜನ‌ ಈ ಗ್ರಾಮೀಣರ ಅಂತರಂಗದ ಚೆಲುವನ್ನರಿಯದೆ ಅವರನ್ನು ಗಮಾರರೆಂದು ಕರೆದು ನಗುವುದು ಹಾಗೆ ನಗುವವರ ತಿಳುವಳಿಕೆಯ ಬಡತನವನ್ನು ,ಮನಸ್ಸಿನ ಸಂಕುಚಿತ ಗುಣವನ್ನು ಎತ್ತಿ ತೋರಿಸುತ್ತದೆ. ಗ್ರಾಮೀಣರ ಬದುಕಿನ ಕುರಿತ ನಂಬಿಕೆ,ಪ್ರೀತಿ,ದೈವದಲ್ಲಿ ನಂಬಿಕೆ,ಶ್ರಮದಾಯಕ ಜೀವನವನ್ನು ಹತ್ತಿರದಿಂದ ನೋಡಿದವನು ಅವರನ್ನ ಹಿಯಾಳಿಸಲಾರ .

ಗ್ರಾಮೀಣರ ಬದುಕಿನ ಮುಖ್ಯ ಲಕ್ಷಣವೆಂದರೆ ಕಪಟತನವಿಲ್ಲದ ಪ್ರಮಾಣಿಕತೆ ,ಮತ್ತು ಸಂಶಯ‌ಪಡಲಾರದ ಪರೋಪಕಾರ,ಸಹಜವಾಗಿ ಸಿದ್ಧಿಸಿರುವ ಸರಳತೆ,ಇವು ಮೂರು ಈ ಕ್ಷಣಕ್ಕೆ ನನಗೆ ಹೊಳೆದ ಸಂಗತಿಗಳು. ಈ ಕಾರಣಕ್ಕಾಗಿ ಗ್ರಾಮೀಣರು ಸದಾಯಿಷ್ಟವಾಗುತ್ತಾರೆ,ಮತ್ತು ಗ್ರಾಮೀಣರೆಂದರೆ ಅಜ್ಞಾನಿಗಳು ಯೆಂಬ ಪೂರ್ವಗ್ರಹ ಪೀಡಿತ ಮನಸ್ಸುಗಳ ಬಗೆಗೆ ಕೊಂಚ ಬೇಸರವಾಗುತ್ತದೆ.
ಇವರದ್ದು ಕಪಟತನವಲ್ಲದ ಪ್ರಮಾಣಿಕತೆಯೆಂದೆ, ಇದನ್ನು‌ಕೊಂಚ ಬಿಡಿಸೋಣ, ವರ್ತಮಾನವನ್ನ ನೋಡಿದಾಗ ಪ್ರಮಾಣಿಕತೆಯೆಂದು ಬಿಂಬಿತವಾಗಿರುವ ಕೆಲವು ಸಂಗತಿಗಳು ಬರಿಯ ತೋರುಗಾಣಿಕೆಯದ್ದೇನೋ ಯೆಂಬ ಸಂದೇಹ ಮೂಡುತ್ತಿದೆ.

ಇದಕ್ಕೆ ಕಾರಣ ಇಂದಿನ ದಿನಮಾನದಲ್ಲಿ ಜನರ ಹೊಟ್ಟೆಯೊಳಗಿನ ನಂಜು,ಅವರ ಪ್ರಮಾಣಿಕತೆಯನ್ನು ಗಟ್ಟಿಯಾಗಿ ಆವರಿಸಿದ ಪರಿಣಾಮ ಮತ್ತು ಲಾಭನಷ್ಟದ ಲೆಕ್ಕಾಚಾರದ ವ್ಯವಹಾರವು ದೈನಂದಿನ ಜೀವನವನ್ನು ವ್ಯಾಪಿಸಿರುವುದರಿಂದ ಪ್ರಮಾಣಿಕತೆಯು ಒಂದು ಮೌಲ್ಯವಾಗದೆ ಬರಿಯ ತೋರುಗಾಣಿಕೆಯದ್ದಾಗಿದೆ, ಇದು ಬರಿಯ ಹಲ್ಲು ತೋರುವ ನಗೆಯ ರೂಪದ ಮತ್ತೊಂದು ಬಗೆಯಾಗಿ ಕಂಡುಬರುತ್ತಿದೆ. ಉದಾಹರಣೆಗೆ ಹೊಸದಾಗಿ ಹಲ್ಲಿನ ಸೆಟ್ಟು ಕಟ್ಟಿಸಿದವರು ಬಾಯಿ ತೆರೆದರೆ ಬಾಯಿತುಂಬ ನಕ್ಕಂತೆ ಕಾಣುತ್ತಾರೆ.ನಿಜವಾಗಿ ಅವರು ನಕ್ಕಿರುವುದಿಲ್ಲ ಬದಲಿಗೆ ಕೃತಕ ಹಲ್ಲಿನ ಕೃತಕ ನಗೆಯ ಬಗೆಯದು!!

ಆದರೆ ಗ್ರಾಮೀಣರ ನಗೆಯಾಗಲೀ, ಉಪಚಾರವಾಗಲಿ, ಸಂಬಂಧವಾಗಲಿ, ಮಾತಾಗಲಿ,ವ್ಯವಹಾರವಾಗಲಿ ಯಾವುದೂ ತೋರಿಕೆಯದ್ದಲ್ಲ , ಅದು ಹೃದಯದಾಳದಿಂದ ಹೊರ ಹೊಮ್ಮಿರುತ್ತದೆ. ತನಗಿಷ್ಟವಿಲ್ಲದಿದ್ದರೆ ಹಾಗಂತ ನೇರವಾಗಿ ಹೇಳಿಯಾರೇ ವಿನಹ.ಯಾರದ್ದೋ ಮುಲಾಜಿಗೆ ಸಿಲುಕಿ ಕೊಳ್ಳುವುದಿಲ್ಲ.

ಮತ್ತೊಂದು ಲಕ್ಷಣ ಸಂಶಯ‌ಮಾಡಲಾಗದ ಪರೋಪಕಾರ. ಗ್ರಾಮೀಣರು ಯಾರೇ ಆಗಲಿ‌ ಇವರು ಪರೋಪಕಾರ ಮಾಡಲು ಸದಾ ಸಿದ್ದ.ಅದು ಸಣ್ಣದಾಗಲಿ,ದೊಡ್ಡದಾಗಲಿ ಇವರು ಉಪಕಾರಮಾಡಲು ಸದಾ ಮುಂದು,ಉದಾಹರಣೆಗೆ ನಗರಕ್ಕೆ ಬಂದು ಯಾರೋ ಅಂಗಡಿಯಾತನ ಬಳಿ ಯಾವುದೋ ವಿಳಾಸವನ್ನು ತೋರಿಸಿ ದಾರಿ ಕೇಳಿದರೆ ಯಾವ ಕೆಲಸವೂ ಯಿಲ್ಲದಿದ್ದರೂ .ಭಯಂಕರ ಕೆಲಸದ ಒತ್ತಡವನ್ನು ನಟಿಸುತ್ತ ನಿಮ್ಮ ಚೀಟಿಯತ್ತ ಕಣ್ಣು ಹಾಯಿಸದಲೆ “ಅಲ್ಲೆಲ್ಲೋ ಮುಂದೆ ಹೋಗಿ”ಎಂಬ ಸಂಜ್ಞೆ!! ಅದೇ ಹಳ್ಳಿಯವರತ್ತ ತೋರಿದರೆ ಆತ ವಿಪರೀತ ಕೆಲಸದ ಒತ್ತಡದಲ್ಲಿದ್ದರೂ ‌ನಿಮಗಾಗಿ ಒಂದು ಗಳಿಗೆ ಬಿಡುವು ಮಾಡಿಕೊಂಡು ನಿಮ್ಮನ್ನ ಕುಳ್ಳಿರಿಸಿಕೊಂಡು ಬೈಕೇರುತ್ತಾನೆ” ಇಲ್ಲೇ ಹತ್ತು ನಿಮಿಷದ ದಾರಿ”.


ಇನ್ನೊಂದು ಅವರ ಸರಳತೆ,ಅಂತರಂಗ ಶುದ್ದವಾದ ಗ್ರಾಮಿಣರು ಹೊರಗಿನ ತಳುಕು ಬಳುಕುಗಳಿಗೆ ಮಾರು ಹೋಗುವುದಿಲ್ಲ. ಊಟ, ಮಾತು ,ವ್ಯವಹಾರಗಳಲ್ಲಿ ಸದಾ ಸರಳತೆ, ಆಗರ್ಭ ಶ್ರೀಮಂತರೂ. ದೊಡ್ಡ ಜಮೀನುದಾರರೂ ಕೂಡಾ ಮನೆಗೆಲಸ ,ತೋಟದ ಕೆಲಸ ಮಾಡುತ್ತಾ, ಸೊಂಟಕ್ಕೆ ಕಟ್ಟಿದ ಟವೆಲಿನ ವಿನಹ ಬೇರೆ ವಸನಗಳ ಅಗತ್ಯವಿಲ್ಲದಂತೆ ಬದುಕಿದವರನ್ನು ನೋಡಿದ್ದೇನೆ. ಬೆಳಗ್ಗೆಯೆದ್ದು ಒಂದು ಹೊರೆ ಸೊಪ್ಪು ತಂದು ಕೊಟ್ಟಿಗೆಗೆ ಹಾಕಿಯೇ ಮತ್ತೆ ಬೆಳಗ್ಗಿನ ಗಂಜಿ ಊಟಕ್ಕೆ ಬಂದವರನ್ನೂ ಕಂಡಿದ್ದೇನೆ . ಮಾತು,ನಡತೆಯಲ್ಲಿ ಶ್ರೀಮಂತಿಕೆಯ ಯಾವ ಅಹಂಕಾರವೂ ಕಾಣದಂತೆ,ಸರಳವಾಗಿರುತ್ತ, ಒಳ್ಳೆಯ ಮಾತನ್ನಾಡುತ್ತಾ, ಮತ್ತೊಬ್ಬರನ್ನು ನೋಯಿಸದ ಅವರ ವ್ಯಕ್ತಿತ್ವ ಸೋಜಿಗ ತರುತ್ತದೆ.ಈ ಗುಣ ಅವರಿಗೆ ಪರಂಪರೆಯ ಕೊಡುಗೆ. ರಾತ್ರಿ ದೀಪವನ್ನು ಬಾಯಿಯಿಂದ ಗಾಳಿಯೂದಿ ಕೆಡಿಸದೆ ದೀಪದ ಕುಡಿಯನ್ನು ಮುಟ್ಟಿ ನಂದಿಸುವುದರ ಹಿಂದಿರುವ ಆಶಯವೇಯಿದು,ಇದಕ್ಕೆ ಸೌಮ್ಯೋಕ್ತಿಯೆನ್ನುತ್ತಾರೆ.

“ಸವಿಮಾತು ಮೂಲೋಕ ಗೆಲ್ಲುವುದು”ಯೆಂಬುದನ್ನ ಆಚರಣೆಯಲ್ಲಿ ತಂದವರಿವರು.
ಇವರ ಈ ಗುಣವನ್ನು ಅವರ ಮಾತುಗಳು ಪ್ರತಿಫಲಿಸುತ್ತವೆ. ಏನು ಮರೀ.ಏನಣ್ಣಾ, ಏನ್ರೊ ಮಾರಾಯ್ರ,,ಎನು ಸ್ವಾಮೀ,ಏನಯ್ನೋರೇ,ಎಂದೇ ಮಾತನಾಡಿಸುವ ಇವರ ವಿಶ್ವಾಸ ನಮಗೆ ಹೆಮ್ಮೆ ಮೂಡಿಸುತ್ತದೆ. ವಚನಕಾರರು ಹೇಳುವ “ಅಯ್ಯಾ ಯೆಂದರೆ ಸ್ವರ್ಗ,ಎಲವೋಯೆಂದರೆ ನರಕ” ವೆಂಬಂತೆ ಇವರು ಬದುಕಿನಲ್ಲಿ ಅಳವಡಿಸಿ ಕೊಂಡಂತೆ,ಅಂತೆಯೇ ಬದುಕಿದಂತೆ ನಮಗೆ ಕಂಡು,ಇವರಿಗೆ ತಲೆಬಾಗಿಸುವ‌ ಮನಸ್ಸು ನೀಡುತ್ತದೆ.ಈ ಅಂಶಗಳು ಇವರ ಮಾತನ್ನೂ, ಭಾಷೆಯನ್ನೂ ಪ್ರಭಾವಿಸಿರುವಂತೆ ಕಾಣುತ್ತದೆ
ದೇಸೀತನವೇ ಮಾತಾಗಿ ಹೊರಹೊಮ್ಮುವ ಇವರ ಭಾಷೆಯೆಷ್ಟು ಚಂದ ,ಆಧುನಿಕತೆಯ ಹಮ್ಮುಬಿಮ್ಮುಗಳಿಲ್ಲದ,ನನ್ನ‌ ಮನದಲ್ಲಿರುವ ಸಂಗತಿ ನಿನಗೆ ತಿಳಿದರೆ ಸಾಕುಯೆಂಬ ನೆಲೆಯಲ್ಲಿ ಭಾಷೆ ಬಳಕೆಯಾಗಬೇಕೇ ವಿನಹ ಅದರಲ್ಲಿ ಶ್ರೇಷ್ಠವಾದ ಬೇರೆ ಅಂಶಗಳಿಲ್ಲ ,ನನ್ನ ಮಾತಿನ ಆಶಯ ‌ನಿನ್ನನ್ನು ತಲುಪಿದರಾಯಿತು. ಅದರಲ್ಲಿ ಶುದ್ದ,ಅಶುದ್ದ ಪ್ರಯೋಗಗಳ ಮಾತು ಬರುವುದಿಲ್ಲವೆಂಬ ಅವರ ತಿಳಿವಳಿಕೆ ನಮಗಿಂದಿಗೂ ಅನುಸರಣ ಯೋಗ್ಯ.
ಸತ್ಯವಲ್ಲದ,ಮಾತನ್ನು ಕತ್ತಿಯಂತೆ ಬಳಸುವ ,ಗೋಡೆಗೆ ಬಣ್ಣ ಹೊಡೆವ ಬ್ರಷ್ಷಿನಂತೆ ಹೇಗೆ ಹೇಗೋ ಬಾಗಿಸಿ,ಬಳುಕಿಸಿ ಮಾತಿನ‌ ಯುದ್ದ ಮಾಡುವ,ಮಾತನ್ನೇ ಹಣಮೂಲದ ,ಬದುಕಿನ‌ ಮೂಲದ ಉದ್ಯೋಗಮಾಡಿ ಬದುಕುವವರ ನಡುವೆ “ನಾಭಿಮೂಲದಿಂದಲೇ” ಶಬ್ದ ಹೊರಡಿಸುವ ಗ್ರಾಮೀಣರು ವಿಶೇಷವಾಗಿ ಕಂಗೊಳಿಸುತ್ತಾರೆ.ಮಾತಿಗೆ ಮೂರು ಗಾದೆ ,ಕತೆ,ಹಾಡಿನ ಸಾಲು, ಆಡುನುಡಿಯನ್ನು ಉದುರಿಸುತ್ತಾ ಬದುಕಿನಲ್ಲಿ ತಾನು ಕಂಡುಕೊಂಡ ಅನುಭವವನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವ ಅವರ ರೀತಿನೀತಿಗಳೇ ಚಂದ.

ಮನೆಯ ಹಿರಿಯರನ್ನ ಗೌರವಿಸುವ, ಮನೆಯ,ಊರಿನ ಹೆಂಗಸರನ್ನು ಮರ್ಯಾದೆಯಿಂದ ನೋಡುವ, ತಮ್ಮವರಿಗಾಗಿ ಜೀವ ನೀಡುವ ನಮ್ಮ ಗ್ರಾಮೀಣರು ನಮಗೆ ಸದಾ ಪ್ರೇರಣದಾಯಕರು
ವ್ಯಾಕರಣ ಬದ್ದವಾಗಿ ಮಾತನಾಡಬೇಕು ,ಚಂದದ ವೇಷಭೂಷಣ ಮಾಡಬೇಕು. ಅಂತಸ್ತನ್ನು ಹೀಗೇ ಕಾಪಾಡಿಕೊಂಡು ಬರಬೇಕು,ಇಂತಹುದ್ದನ್ನೇ ತಿನ್ನಬೇಕೆಂಬ ವ್ಯವಹಾರದ ,ಲೆಕ್ಕಾಚಾರದ ಬದುಕು ಮಾಡುವ ತಳಕು ಬಳಕಿನ ಯುವಪಡೆಗಿಂತ ನಮ್ಮ ಹಳ್ಳಿಯ ಜನರ ಬದುಕು ನಮಗೆ ಅನುಸರಣೀಯವಾಗಿ ಕಾಣುತ್ತದೆ.

ಇಂದಿನ ದಿನಮಾನದಲ್ಲಿ ಹೊಸದಾಗಿ ಟಂಕಿಸಲ್ಪಡುತ್ತಿರುವ ಭಾಷೆಗಳ ಅಂತರಾಳವೆನೆಂದೇ ಅರ್ಥ ವಾಗುವುದಿಲ್ಲ,ಅವು ಏನನ್ನು ಧ್ವನಿಸುತ್ತದೆ, ಅದನ್ನು ಬಳಸಿದರೆ ನಮ್ಮ ಗೌರವ ವ್ಯಕ್ತಿತ್ವ ಹೆಚ್ಚುತ್ತದಾ,ಯೆಂಬುದನ್ನ ನೋಡಿದರೆ ಗಾಬರಿಯಾಗುತ್ತದೆ ಮಚ್ಚಾ,ಮಗನೆ, ಸೆಡೆ,ಗುಬಾಲ್ಡ್,ಇವೇ ಮುಂತಾದ ಮೇಲಿಂದ ಮೇಲೆ ಕಿವಿಗೆ ಬೀಳುವ ಶಬ್ದಗಳು,ಅಸಹ್ಯೋಕ್ತಿಗಳೇ ವಿಜೃಂಭಿಸುವ ,ಕೇಳಲು ಕರಕರೆಯೆನಿಸುವ ಪದಪ್ರಯೋಗ,ಭಾಷೆಯ ಬೇರೆಬೇರೆ ಅಯಾಮ,ನಾನಾರ್ಥ,ಸಮಾನಾರ್ಥಕ ಪ್ರಯೋಗವನ್ನರಿಯದ ಇಂದಿನ ತಲೆಮಾರಿನ ಏಕತಾನತೆಯಿಂದ ,ಧ್ವನ್ಯಂಗಗಳ ಬಳಕೆಯನ್ನರಿಯದೇ ಹೇಗೆಹೇಗೊ ಉಚ್ಚರಿಸುವ ಇಂದಿನಭಾಷೆ ತೀರಾಕೃತಕವಾಗಿದೆ ಇದರ ನಡುವೆ ನಮ್ಮಗ್ರಾಮಿಣರು ಸಹಜ ಚೆಲುವಿನಿಂದ ಬಾಯಿತುಂಬ ಮಾತನಾಡುವುದನ್ನ ಕೇಳಲೆ ಹಿತವಾಗುತ್ತದೆ. ಮತ್ತು ಇವರಲ್ಲಿ ಇನ್ನೂ ಉಳಿದುಕೊಂಡು ಬಂದಿರುವ “ಸಂಬಂಧಗಳು” ಕೇಳಲು ಖುಷಿಯಾಗುತ್ತದೆ, ಪ್ರತಿಯೊಬ್ಬರನ್ನೂ ಸಂಬಂಧ ಗುರುತಿಸಿ ಅಜ್ಜ,ಅಜ್ಜಿ,ತಾತ, ಅತ್ತೆ,ಮಾವ,ಚಿಗಪ್ಪ,ಚಿಗವ್ವ,ದೊಡ್ಡಪ್ಪ,ದೊಡ್ಡಮ್ಮ,ಅಮ್ಮಮ್ಮ,ಹಿರಿಯಮ್ಮ,ಹಿರಿಯಪ್ಪಯ್ಯ,ಅಣ್ಣ ಅಕ್ಕ ತಮ್ಮ ತಂಗಿ,ಬಾವ,ಅತ್ತಿಗೆ,ಮೈದ‌ ಷಡ್ಡಗ,ಸೋದರಿಕೆ,ಹೆಣ್ಣುಕೊಟ್ಟ ಮಾವ,ದೂರದ ಸಂಬಂಧಿ,ರಕ್ತಸಂಬಂಧಿ,ವಾರಗಿತ್ತಿ…..ಇವತ್ತು ಎಲ್ಲಾ ಸಂಬಂದಗಳೂ “ಕಸಿನ್ ” ಗಳಾಗಿ ಬದಲಾಗಿ ತೀರಾ ಗೋಜಲಾಗಿರುವಾಗ ಗ್ರಾಮೀಣರು ಸಂಬಂಧ ಮೂಲವನ್ನ ಹಿಡಿದು ಕರೆವಾಗ ಮನಸ್ಸು ಮುದಗೊಳ್ಳುತ್ತದೆ‌.
ಅದರೂ ಇಂದು ಗ್ರಾಮಿಣರ ಬದುಕಿನಲ್ಲಿ ಪಲ್ಲಟವಾಗಿದೆ,ಅವರ ಬದುಕಿನಲ್ಲಿ
ಕೆಲವು ಬದಲಾವಣೆಗಳು ಗೋಚರಿಸುತ್ತಿವೆ, .ಓದು.ಪುಸ್ತಕಗಳು ,ಹೊಸಹೊಸ ಸಂಬಂಧಗಳು. ಮಾಧ್ಯಮಗಳು ನಮ್ಮ ಇಂದಿನ ತಲೆಮಾರಿನ ಗ್ರಾಮೀಣರ ಬದುಕು,ನಂಬಿಕೆ,ರೀತಿ ನೀತಿಯನ್ನ ಪ್ರಭಾವಿಸಿದೆ,ಬದಲಾಯಿಸಿದೆ,ಆದರೂ ಗ್ರಾಮೀಣರ ಮೂಲ ಲಕ್ಷಣ ಇನ್ನೂ ಹಾಗೆಯಿರುವುದೇ ಅದರ ಹೆಚ್ಚುಗಾರಿಕೆಯ ದ್ಯೋತಕ

ಹರೀಶ್ ಟಿ. ಜಿ

LEAVE A REPLY

Please enter your comment!
Please enter your name here