ಚದುರರ್ ನಿಜದಿಂ

0
149
Tap to know MORE!

ನಾವು ಒಂದು ಲೇಖನವೋ ಕವಿತೆಯೋ,ಅಥವಾ ಇನ್ನೇನಾದರೂ ಸಣ್ಣ ಬರೆಹ ಬರೆಯ ಬೇಕಾದರೆ ಎಷ್ಟೊಂದು ಪೂರ್ವತಯಾರಿ ಮಾಡಿ ಪ್ರಯತ್ನಿಸಿ
ಅಂತಿಮವಾಗಿ ಬರೆಹ ರೂಪಕ್ಕಿಳಿಸಿದರೆ,ಕೊನೆಗೆ ಅದೂ ಸರಿಯಿಲ್ಲವೆಂದು ಹರಿದು ಹಾಕುತ್ತೇವೆ,ಆದರೆ ನಾವು ದಿನನಿತ್ಯ ಕೇಳುತ್ತಿರುವ ಜನಪದ ಗೀತೆ, ಕಥೆಗಳ ರಚನಾಕ್ರಮವನ್ನ ಗಮನಿಸಿ ,ಅದು ಹೀಗೆ ಬರೆದು ಹರಿದು ಕೊನೆಗೊಮ್ಮೆ ಪೂರ್ಣಗೊಳಿಸಿದ ರಚನೆಯೆಂದೆನಿಸುವುದಿಲ್ಲ,ಬದಲಿಗೆ ಆಕ್ಷಣಕ್ಕೆ ಹೊಳೆದ ಸತ್ಯ,ಅವರ ಜೀವನ ವಿಶೇಷ,ಅವರ ಅನುಭವವು ಹರಳುಗಟ್ಟಿದ ರಚನೆಯೆನಿಸುತ್ತದೆ. ಇದನ್ನು ರಚಿಸಿದವರು ಇಂದಿಗೂ ಅಜ್ಞಾತವಾಗಿದ್ದಾರೆ.ಆದರೆ ಅವರ ರಚನೆಗಳು ಭೂತ,ವರ್ತಮಾನವನ್ನು ದಾಟಿ ಭವಿಷ್ಯದಲ್ಲಿಯೂ ಜನಮನ್ನಣೆಯನ್ನು ಪಡೆಯುವ ಅರ್ಹತೆಯನ್ನು ಪಡೆದಿದೆ. ಇಂತಹ ಸಾರ್ವಕಾಲಿಕ ಸತ್ಯವನ್ನು ಹೇಳುವಂತಹ ರಚನೆಗಳು ಮಾತ್ರ ಕಾಲನ ಪರೀಕ್ಷೆಯಲ್ಲಿ ಉತ್ತೀರ್ಣವಾಗುತ್ತವೆ ,ಇಲ್ಲದಿದ್ದವು ನಾಶವಾಗುತ್ತವೆ.


“ಸಾಹಿತ್ಯ ಎಲ್ಲವರಿಗಲ್ಲ”, ಯೆನ್ನುತ್ತಾನೆ ಸರ್ವಜ್ಞ,ಅಂದರೆ ಸಾಹಿತಿಗೆ ಸಾಮಾಜಿಕ ಪ್ರಜ್ಞೆ,ಎಚ್ಚರ,ಭಾಷಿಕ ಅರಿವು ಮತ್ತು ತಾನ ಹೇಳ ಬೇಕಾದ ಸಂಗತಿಯ ಸಮಗ್ರ ಅರಿವಿರಬೆಕು, ಹಾಗಾಗಿ ಎಲ್ಲರೂ ಬರೆಯ ಬಾರದು, ಮತ್ತು ನಮ್ಮ ಜನರ ನಂಬಿಕೆಯಂತೆ ಕವಿಯಾಗುವುದು ಪೂರ್ವ ಜನ್ಮವಿಶೇಷ,ಇಂತಹ ವ್ಯಕ್ತಿಯ ಪ್ರಜ್ಞೆಗೆ ಹೊಸಹೊಸದನ್ನ ಹೊಳೆಯಿಸುವ ಶಕ್ತಿಗೆ ಪ್ರತಿಭೆಯೆಂದು ಹೆಸರು,ಹಾಗಾಗಿ ಈ ಪ್ರತಿಭಾವಂತನಾದ ಕವಿ‌ಮಾತ್ರ ಶ್ರೇಷ್ಠ ಕಾವ್ಯ ರಚಿಸಿಯಾನು, ಉಳಿದಂತೆ ಸುಮ್ಮನೆ ಬಡಬಡ ಶಬ್ದವನ್ನು ಮಾಡುವುದು ಕಾವ್ಯವ್ಯಾಪಾರವಲ್ಲ,ಕಾವ್ಯವೇನಿದ್ದರೂ ಸತ್ಕುಲಪ್ರಸೂತರಾದ ಪಂಡಿತರ ಕೆಲಸವೆಂದು ಹೇಳಿದ ಕಾಲಘಟ್ಟದಲ್ಲಿಯೆ “ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್”ಯೆಂದು ನಮ್ಮ ಜನಪದರ ಸೃಜನಶೀಲತೆಯನ್ನ ಗೌರವಿಸಲಾಗಿದೆ,ಅವರ ವಿಶೇಷ ಶಕ್ತಿನಿಪುಣತೆಯನ್ನ ಗುರುತಿಸಲಾಗಿದೆ‌
ಕಾವ್ಯಕ್ರಿಯೆಗೆ ಬೇಕಾದುದು ಲೋಕಜ್ಞಾನ .ನಮ್ಮ ಜನಪದರಿಗೆ ಜತೆಯಾಗಿದ್ದುದು ಲೋಕಜ್ಞಾನವೇ ಹೊರತು ಶಾಸ್ತ್ರಜ್ಞಾನ,ಪುಸ್ತಕಜ್ಞಾನವಲ್ಲ, ಹಾಗಾಗಿ ತಮ್ಮ ಮತಿಗೆ ನಿಲುಕಿದ ,ತಾವು ಅನುಭವಿಸಿದ ,ತಾವು ಕಂಡುನೋಡಿದ ಅನುಭವ ವಿಶೇಷಗಳನ್ನು ಆಕ್ಷಣಕ್ಕೆ ತಮಗೇ ನಿಲುಕಿದ ಭಾಷಾ ಬಂಧ ದಲ್ಲಿ ಕಟ್ಟಿಕೊಟ್ಟರು, ಅವರು ಬಳಸಿದ ಭಾಷೆಯಲ್ಲಿತಪ್ಪಿರಬಹುದು ,ಆದರೆ ಅವರ ಅನುಭವ ಸುಳ್ಳಲ್ಲ,”ಕಾಸಿಗೆ ಹೋಗುದಕ ಏಸೊಂದು ದಿನಬೇಕ ,
ತಾಸೊತ್ತಿನಾದಿ ತವರೂರು!ಕಾಸಿಕುಂತಾಳ ಹಡೆದವ್ವ” ಈ ತ್ರಿಪದಿ ನಮಗೆ ಪ್ರೀತಿ ,ತವರೂರ ಸೆಳೆತ, ತಾಯ ಕುರಿತಾದ ಅಂತರಂಗದ ಮಾತುಗಳನ್ನು ಕಟ್ಟಿಕೊಡುವಲ್ಲಿ ಸಫಲವಾಗುತ್ತದೆ. ಈ ಭಾವದ ಮುಂದೆ ಇದರಲ್ಲಿನ ಭಾಷಾ ದೋಷಗಳು ನಗಣ್ಯವೆನಿಸುತ್ತದೆ.ಇಲ್ಲಿ ಹೆಣ್ಣುಮಗಳಿಗೆ ನಮ್ಮ ಪವಿತ್ರಕ್ಷೇತ್ರ ಕಾಶಿ ಗೊತ್ತಿದೆ,ಅದರ ದೂರವೂ ಗೊತ್ತಿದೆ,ಆದರದನ್ನು ಕಾಶಿಯೆಂದು ಉಚ್ಚರಿಸಲು ಬರಲ್ಲ. ಎರಡನೆಯ ಸಾಲು ನೊಡಿ”ತಾಸೊತ್ತಿನಾದಿ ತವರೂರು”ಇಲ್ಲಿನ ಭಾಷಾ ದೋಷವೂ ತೊಡಕಾಗುವುದಿಲ್ಲ, ಬದಲಿಗೆ ಕಾಶಿಗಿಂತ ತವರೂರು ಹತ್ತಿರವೆಂಬಾಗ ಆಕೆಗಿರುವ ವಿಶ್ವಾಸ ಗೋಚರಿಸುತ್ತದೆ. ಯಾಕಿಂತ ವಿಶ್ವಾಸವೆಂಬ ಅನುಮಾನಕ್ಕೆ ಮೂರನೆಯ ಸಾಲು ಉತ್ತರಿಸುತ್ತದೆ”ಕಾಸಿಕುಂತಾಳ ಹಡೆದವ್ವ” ತ್ರಿಪದಿ ಈಗ ಜಗ್ಗನೆ ಹೊಳೆಯುತ್ತದೆ. ಇಂತಹ ಸ್ವಯಂ ಪ್ರಕಾಶದ ಕಾರಣಕ್ಕಾಗಿ. ಕಿರಿದರಲ್ಲಿ ಹಿರಿದರ್ಥ ತೋರುವ ಗುಣದ ಕಾರಣಕ್ಕಾಗಿ ತ್ರಿಪದಿ ಯನ್ನು ಕಾವ್ಯಗಾಯತ್ರಿಯೆನ್ನುತ್ತಾರೆ,ಇಂತಹ ತ್ರಿಪದಿಗಳನ್ನು,ನೀತಿ ಕಥೆಗಳನ್ನು ನೀಡಿದ ಜನಪದರನ್ನು ಅಗೌರವದಿಂದ ನೋಡಬಾರದು.
“ಬಾಲಾಕಾರಿಲ್ಲದ ಬಾಲಿದ್ಯಾತರ ಜಲ್ಮ,ಬಾಡಿಗೆಯೆತ್ತು ದುಡಿದಾಂಗ/ಹಾಸುಂಡ ಬಾಳೆಲೆ ಬೀಸಿ ಒಗೆದಾಂಗ”.
ಗಂಡು ಸಂತಾನವಿಲ್ಲದ ಹೆಣ್ಣು ತನ್ನ ಅತ್ತೆಮಾವನಿಂದ ಅವಜ್ಞೆಗೊಳಗಾಗುವುದನ್ನು ” ಬಾಡಿಗೆ ಯೆತ್ತಿನ “ದುಡಿತಕ್ಕೆ ಹೋಲಿಸಿದರೆ,ಗಂಡನಿಂದ ಪಡುತ್ತಿದ್ದ ಬವಣೆಗಳನ್ನು ” ಹಾಸುಂಡ ಬಾಳೆಲೆಯನ್ನ ಬೀಸಿ ಒಗೆವ”ಮಾತಿನಲ್ಲಿ ಕಟ್ಟಿಕೊಡುವ ಮೂಲಕ ಹೆಣ್ಣನ್ನು ಬಳಸಿ ಬಿಸಾಡುವ ಗಂಡು ಮನೋಭಾವವನ್ನು ಟೀಕಿಸುತ್ತಾಳೆ,ಈ ಎಲ್ಲ ಅಂಶಗಳನ್ನು ಪ್ರತೀಸಾಲಿನಲ್ಲಿ ಸುಂದರವಾಗಿ ಕಟ್ಟಿಕೊಟ್ಟಿರುವುದನ್ನ ನೋಡಿದರೆ ಅಂದಿನ ಪುರುಷ ಕೇಂದ್ರಿತ ಕುಟುಂಬ,ಸಮಾಜ ಕಣ್ಣೆದುರು ನಿಲ್ಲುತ್ತದೆ, ಇಂತಹ ಪ್ರತಿಭಾವಂತರು
ಶಿಷ್ಟಕವಿಗಳಿಗಿಂತ ಕಡಿಮೆಯಲ್ಲವೆಂದೆನಿಸಲೇ ಬೇಕು.
ಕೆರೆಗೆ ಹಾರ ಕಾವ್ಯ ಭಾಗೀರಥಿಯ ಬದುಕಿನ ದುರಂತ ಕಣ್ಣಿಗೆ ಕಟ್ಟುವಂತಹ ರೀತಿಯಿಂದ ಗಮನ ಸೆಳೆಯುತ್ತದೆ. ಈ ಕಾವ್ಯ ಅಂದಿನ ಜನರ ಬದುಕಿನ‌ ಕುರಿತ ನಂಬಿಕೆಯನ್ನೂ ತಿಳಿಸುತ್ತದೆ ತನ್ನನ್ನು ಕೆರೆಗೆ ಬಲಿಕೊಡುತ್ತಾರೆಯೆಂಬುದರ ಅರಿವಿದ್ದೂ ತಂದೆ ತಾಯಿ, ಅಣ್ಣ ತಮ್ಮದಿರಲ್ಲಿ ಹೇಳಿಕೊಳ್ಳಲಾರದ ಭಾಗೀರಥಿ ಗೆಳತಿಯ ಬಳಿ ಹೇಳುಕೊಳ್ಳುತ್ತಾಳೆ” ನನ್ನತ್ತಿ ನನಮಾವ ಕೆರಿಗಾರ ಕೊಡುತಾರಂತ” ಗೆಳತಿ ಬಾಳು ಸ್ವೀಕಾರಾರ್ಹ ವೆಂದು ನಂಬಿದ್ದವಳು”ಕೊಟ್ಟಾರ ಕೊಡಲೇಳು :ಇಟ್ಟಾಂಗಯಿರಬೇಕು” ಗೆಳತಿಯ ಈ ಮಾತು ಭಾಗೀರಥಿಯ ಎಲ್ಲ ಉಮ್ಮಳ,ಸಂಕಟವನ್ನು ಪರಿಹರಿಸುತ್ತದೆ ಆಕೆ “ಸರ್ರನೆ ಹೋದಳು ಭರ್ರನೆ ಬಂದಳು”
ಈ ಕಾವ್ಯವನ್ನೋದಿದ ನಂತರ ಪ್ರತಿಯೊಬ್ಬರಿಗೂ ಹೇಗೆ ಬದುಕ ಬೇಕೆಂಬ ಅರಿವನ್ನು ಮೂಡಿಸುವ ಈ ಕಾವ್ಯವನ್ನು ಹಾಡಿದವರು ಓದು ಬರಹವಿಲ್ಲದ ಜನಯೆಂಬ ನಂಬಿಕೆಯೆ ಬಾರದು.
ಇಂತಹ ಜನಪದರ ಪ್ರತಿಭೆಯು ಕೇವಲ ಸಾಹಿತ್ಯಕ್ಕೆ ಮಾತ್ರ ಮೀಸಲಾಗಲಿಲ್ಲ ಅದು ಮುಂದುವರೆದು,ವೈದ್ಯ, ವೇಷಭೂಷಣ,,ಅಡುಗೆ,ಮುಂತಾದ ಹಲವು ಆಯಾಮಗಳಲ್ಲಿ ತೆರೆದುಕೊಂಡಿತು‌.
ಜನಪದರ ವೈದ್ಯವೆಂಬುದು ಅತ್ಯಂತ ರೋಚಕವಾದ ಅನುಭವ ಶ್ರೀಮಂತಿಕೆ‌,ಆಧುನಿಕ ವೈದ್ಯಕೀಯ ಲೋಕಕ್ಕೆ ಸವಾಲಾಗಬಲ್ಲ ಇವರ ತಿಳಿವಳಿಕೆ ಅಚ್ಚರಿ‌ಮೂಡಿಸುತ್ತದೆ,ಮುರಿತ ಗೊಂಡ ಮೂಳೆಯ ಅಲುಗಾಟದ ಶಬ್ದವನ್ನು ಕೇಳಿಯೇ ಮುರಿತದ ಪರಿಮಾಣವನ್ನು ಗ್ರಹಿಸುವ, ಉದರದ ಒಳಗಿನ ಕಾಯಿಲೆಯನ್ನೂ ರೋಗಿಯ ವಿವರಣೆಯಿಂದಲೆ ಗ್ರಹಿಸುವ ಇವರ ಶಕ್ತಿ ನಮಗೊಂದು ಅಚ್ಚರಿ ,ಹೆಸರು ತಿಳಿದಿಲ್ಲದ ನಾರು ಬೇರುಗಳ ಔಷಧೀಯ ಗುಣವನ್ನು ಇವರು ತಿಳಿದದ್ದಾದರೂ ಹೇಗೆ? ಅಕ್ಷರದ ,ಬರಹದ ಸಹಾಯವಿಲ್ಲದೆ ಇವರದನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವುದಾದರೂ ಹೇಗೆ!! ತಮಗೆ ತಿಳಿದ ಮದ್ದನ್ನು ಪ್ರಯೋಗದ ಮೂಲಕ ಸಿದ್ಧವಾಗದೇ ಇವರು ಯಾವ ಧೈರ್ಯದಿಂದ ರೋಗಿಯ ಮೇಲೆ ಪ್ರಯೋಗಿಸಿದರೋ!! ಇದೆಲ್ಲ ನಮಗೆ ಅಚ್ಚರಿಯೇ ಸರಿ.
ನನಗೆ ಬಾಲ್ಯದಲ್ಲಿ ಆಟವಾಡುವ ಬಿದ್ದು ಮೇಲ್ಬಾಗದ ಮುಂದಿನ ಹಲ್ಲು ಅರ್ಧ ತುಂಡಾಗಿತ್ತು .ಒಂದು ವರ್ಷದ ನಂತರ ಈ ಮುರಿದ ಹಲ್ಲು ,ಮೇಲಿನ‌ತುಟಿ ಮತ್ತು ಮೂಗಿನ ಒಳಬಾಗದಲ್ಲಿ ಯಾವ‌ಜಾಗವೆಂದು ನಿಖರವಾಗಿ ಗುರುತಿಸಲಾಗದ ಕಡೆ ಕೀವಾಗಿ ಬಾವು ಬಂದು ಯಾತನೆ ಕೊಡಲಾರಂಭಿಸಿತು, ಡೆಂಟಿಸ್ಟರು ಪರಿಹಾರವಿಲ್ಲ ,ಅದಾಗಿ ಗುಣವಾದ ಮೇಲೆ ಹಲ್ಲುಕೀಳುವುದಾಗಿ ಹಿಂದೆ ಕಳಿಸಿದರು. ಮುಸುಡಿ ಹನುಮಂತನಾಗಿ ನಾನು ಒದ್ದಾಡುತ್ತಿದ್ದೆ, ಇದನ್ನು ನೋಡಿದ ನಮ್ಮ ದೊಡ್ಡಪ್ಪ ಅಲ್ಲೇ ಪಕ್ಕದಲ್ಲಿದ್ದ ನಾಯಿವಾಟೆಮರಕ್ಕೆ ಕತ್ತಿ ಚುಚ್ಚಿ ಹೊರಬಂದ ರಸವನ್ನು ಹತ್ತಿ ಯಲ್ಲಿ ಹಿಡಿದು ತಂದು ಮೇಲಿನ ತುಟಿಯಯ ಒಳಭಾಗದ ಬುಡಕ್ಕೆ ಒತ್ತಿಯಿಟ್ಟರು. ಏನಾಶ್ಚರ್ಯ !!ಕೆಲವೇ ನಿಮಿಷದಲ್ಲಿ ಅ ಜಾಗ ತೂತಾಗಿ ರಸಿಕೆ ಹೊರಹೋಯಿತು!!
ಇನ್ನೊಮ್ಮೆ ನಮ್ಮ ಎಮ್ಮೆ ಕರು ಮಲಗಿದಲ್ಲಿಂದ ಏಳಲಾರದಾದಾಗ ಬಂದ ವೈದ್ಯರು ಚಪ್ಪೆರೋಗವೆಂದು ಅದರ ಸೊಂಟವನ್ನು ಬ್ಲೇಡಿನಿಂದ ಕೊಯ್ದರು.ಕರು ಏಳಲಿಲ್ಲ. ಆಗ ನಮ್ಮೂರಿನ ಕೂಸನೆಂಬಾತ ಬಂದು ನೋಡಿದವನೇ ರುಂಡಿ ಜಾರ್ಯದೆ(ಸೊಂಟದ ಕೀಲು) ಯೆಂದವನೇ ಅದರ ಹಿಂಗಾಲುಗಳೆರಡನ್ನು ಸೇರಿಸಿ ಕಾಲು ಕಟ್ಟಿ ,ಗುದ್ದಲಿ ಕಾವನ್ನು ಸೇರಿಸಿ ಲಾಕ್ ಮಾಡಿ ,ಸಿಪ್ಪೆ ತೆಂಗಿನ ಕಾಯಿಯನ್ನ ಸನ್ನೆಯಾಗಿರಿಸಿ ಮೀಟಿದ ಹೊಡೆತಕ್ಕೆ ಕಾಲು ಸಟ್ ಎಂಬ ಶಬ್ದದೊಂದಿಗೆ ಸೊಂಟಕ್ಕೆ ಕೂಡಿಕೊಂಡ ಮರುಗಳಿಗೆ ಎಮ್ಮೆಕರು ಎದ್ದು ನಿಂತಿತು!!
ಇದು ಒಂದೆರಡು ಉದಾಹರಣೆಗಳು.
ಜನಪದರ ಇನ್ನಿತರ ವೈಶಿಷ್ಟ್ಯ ಗಳನ್ನು ನೋಡುವುದಾದರೆ ಅವರ ವೇಷಭೂಷಣ ಕೂಡಾ ಗಮನಿಸುವಷ್ಟು ಸೊಗಸು‌,ಇವತ್ತಿನ ನಯ ನಾಜೂಕಿನ ಕಾಲಘಟ್ಟ ದಲ್ಲಿಯೂ ಅವರು ಪರಂಪರೆಯನ್ನ ಬಿಟ್ಟು ಕೊಡದೆ ವಿಶೇಷ ಸಂದರ್ಭಗಳಲ್ಲಿ ಬಿಳಿ ವೇಷ್ಟಿ,ಅಂಗಿಯನ್ನ ಧರಿಸಿ ಮೇಲೊಂದು ಶಲ್ಯವನ್ನು ಹೊದೆಯುವತ್ತಾರೆ, ಹೆಂಗಸರು ಜರಿಸೀರೆಯುಟ್ಟು ಸೆರಗನ್ನು ಹೊದೆದು ಸಿಂಧೂರ ತಿಲಕ ಧರಿಸಿ ಕಂಗೊಳಿಸುವಮೂಲಕ ಸಮಾರಂಭಕ್ಕೆ ಮೆರುಗು ತರುತ್ತಾರೆ, ಹಿಂದಿನ ಕಾಲದಲ್ಲಿ ಗಿಡ್ಡದಾಗಿ ಉಡುತ್ತಿದ್ದ ಗೊಬ್ಬೆ ಸೀರೆ,ಗಂಡಸರ ಕಚ್ಚೆ ಕಸೆಯಂಗಿ ಮುಟ್ಟಾಳೆ, ಬೈರಾಸು,ಎಲೆಯಡಕೆಯ ಕೆಂಪು ದಂತಪಂಕ್ತಿಯ ಕಾಂತಿ, ನಿಷ್ಕಲ್ಮಷ ನಗೆಯ ಮೂಲಕ ಇವರು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿದ್ದರು, ವಿಶೇಷ ದಿನಗಳಲ್ಲಿ ಅಭ್ಯಂಜನ ,ಸಮೂಹಿಕ ತುಳಸಿ‌ಮತ್ತು ಮನೆ ದೇವರ ಪೂಜೆ,ಕುಲದೈವಗಳಿಗೆ ಬಲಿ,ಆಹಾರ, ಹಿರಿಯರಿಗೆ ಗೌರವ ಕಿರಿಯರಿಗೆ ಮನ್ನಣೆಯ ಪ್ರೀತಿ, ಜನ ಜಾನುವಾರುಗಳ‌ ಮೇಲಂತೂ ತುಂಬಾ ಕಾಳಜಿ, ಮನೆಯ ಮುಂಬಾಗದಲ್ಲಿಯೆ ಜಾನುವಾರುಗಳ ಕೊಟ್ಟಿಗೆ,ಅವುಗಳ ದೇಕ ರೇಖೆಗೆ ಮನೆಯ ಒಬ್ಬ‌ಮಗ,ಸೊಸೆಯ ನಿಯೋಜನೆ,ಬೆಳಗ್ಗೆದ್ದ ಮನೆಯ ಯಜಮಾನ ಕೊಟ್ಟಿಗೆಗೆ ಬೇಟಿಕೊಟ್ಟ ಬಳಿಕವೇ ಉಳಿದ ಕೆಲಸ ಕಾರ್ಯದ ಆರಂಭ,ವರ್ಷಕ್ಕೊಮ್ಮೆ‌ಪೂಜೆ,ಪ್ರತಿನಿತ್ಯ ಗೌರವ, ಉಳಿದಂತರ ಸರಳ ಜಿವನ, ಕಡುಬು,ರೊಟ್ಟಿಗಳ ಗಟ್ಟಿಯೂಟ,ರಟ್ಟೆಮುರಿತದ ದುಡಿಮೆ,ಮನೆಯ ಸದಸ್ಯರು ಮಕ್ಕಳು ಮರಿಗಳು,ನೆಂಟರಿಷ್ಟರು,ಆಳುಕಾಳುಗಳು ಸದಾ ತುಂಬಿರುತ್ತಿದ್ದರಿಂದ ಅಡುಗೆ ಮನೆಯೆಂಬುದು ಪ್ರತಿನಿತ್ಯ ಸಮಾರಾಧನೆಯ ಸ್ಥಳವಾಗಿರುತ್ತಿತ್ತು, ಬಹಳ ಜನರಿಗೆ ತಯಾರಿಸ ಬೇಕಾದ್ದರಿಂದ ಕಡುಬು,ರೊಟ್ಟಿಗಳಂತಹ ಪಾಕಗಳೇ ಹೆಚ್ಚಿರುತ್ತಿದ್ದವು. ಮನೆಯ ಯಜಮಾನನಿಗೆ ತನ್ನ ಕೂಡುಕುಟುಂಬವನ್ನು ಸಮತೋಲನದ ನೆಲೆಯಲ್ಲಿ ಕೊಂಡೊಯ್ಯುವ ಸವಾಲಿರುತ್ತಿದ್ದುದರಿಂದ ಆತ ನ್ಯಾಯಪಕ್ಷಪಾತಿಯೂ,ಹೊರನೋಟಕ್ಕೆ ನಿಷ್ಠುರನೂ ಆಗಿರುತ್ತಿದ್ದ,ಹೆಂಗಸರು ಹೊಂದಿಕೊಂಡು ಹೊಗುವುದನ್ನ ಕಲಿತಿದ್ದರು
ಇಂತಹ ಸಮೃದ್ಧ ಜೀವನ‌ಪ್ರೀತಿಯ ಮೂಲಕ ನಮ್ಮ ಜನಪದರು ಬಹು ಜನಪ್ರಿಯರಾಗಿದ್ದಾರೆ . ಅವರು ಬಾಳಿಬದುಕಿದ ರೀತಿ ಮುಂದಿನ ಜನಾಂಗಕ್ಕೆ ಮಾದರಿಯಾಗಿದೆ

– ಹರೀಶ್ ಟಿ.ಜಿ

LEAVE A REPLY

Please enter your comment!
Please enter your name here