ಬ್ರಿಟಿಷರು, ದೇಶದ್ರೋಹಿಗಳಿಗೆ ತಕ್ಕ ಶಾಸ್ತಿ ಮಾಡಿದ ಚಾಪೇಕರ್ ಸಹೋದರರು

0
394
Tap to know MORE!

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ದೇಶಕ್ಕಾಗಿ ನೇಣುಗಂಬಕ್ಕೇರಿದ, ಚಾಪೇಕರ್ ಸಹೋದರರು ಎಂದೇ ಕರೆಸಿಕೊಂಡ ಒಂದೇ ಮನೆಯ ಮೂವರು ಸಹೋದರರ ಬಗ್ಗೆ ನಿಮಗೆ ತಿಳಿದಿರಲೂಬಹುದು. ಬ್ರಿಟಿಷರ ದುಡ್ಡಿನ ಆಸೆಗೆ ಬಲಿಯಾಗಿ ಮಿತ್ರದ್ರೋಹ ಮಾಡಿದವರ ವಿರುದ್ಧ ಪ್ರತೀಕಾರ ತೆಗೆದುಕೊಂಡವರಲ್ಲಿ ಇವರೇ ಮೊದಲಿಗರು

ಚಾಪೇಕರ್ ಮನೆತನದ ಮೂಲಸ್ಥಾನ ಪೂನಾ ಬಳಿಯ ಚಿಂಚವಡಹಳ್ಳಿ. ಚಾಪೇಕರ್ ತಂದೆ ಹರಿಭಾವು, ತಾಯಿ ಲಕ್ಷ್ಮೀ ಬಾಯಿ .ಹರಿಭಾವು ಸರ್ಕಾರಿ ನೌಕರಿಯಲ್ಲಿದ್ದರು. ಗುಲಾಮಗಿರಿಗಿಂತ ಸ್ವತಂತ್ರ ವೃತ್ತಿಯೇ ಮೇಲೆಂದು ಅವರು ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹರಿ ಕೀರ್ತನೆಕಾರರಾಗಿ ಊರೂರು ಸಂಚರಿಸುತ್ತಾರೆ. ಸ್ವಾತಂತ್ರ್ಯದಾಹ, ಸ್ವಾಭಿಮಾನ, ಕೆಚ್ಚು ವಂಶಪಾರಂಪರ್ಯವಾಗಿ ಅವರ ಮಕ್ಕಳಾದ ಚಾಪೇಕರ್ ಸಹೋದರರಿಗೂ ಬಂದಿತ್ತು.

ಲೇಖಕರ ಇನ್ನೊಂದು ಲೇಖನ : ಆಂಗ್ಲರ ಗುಂಡಿಗೆ ಬಲಿಯಾದ ಬಾಜಿ ರಾವತ್‌ಗೆ ಆಗ ಹನ್ನೆರಡರ ಹರೆಯ!

ಹರಿಭಾವು ಸ್ವತಃ ಕಥೆ, ಅದಕ್ಕೆ ಬೇಕಾದ ಕವನಗಳನ್ನು ರಚಿಸುತ್ತಿದ್ದರು. ಕೀರ್ತನೆಯಲ್ಲಿ ವಿನೋದ, ಚೊಕ್ಕ ನಿರೂಪಣೆಯೂ ಸೇರಿತ್ತು. ಅವರ ಮೊದಲನೆಯ ಮಗ ದಾಮೋದರ ಚಾಪೇಕರ್ 1869 ರ ಜೂನ್ 25 ರಲ್ಲಿ ಚಿಂಚವಡದಲ್ಲಿ ಜನಿಸಿದರು. 1873ರಲ್ಲಿ ಬಾಲಕೃಷ್ಣ, 1879 ರಲ್ಲಿ ವಾಸುದೇವ ಪೂನಾದಲ್ಲಿ ಹುಟ್ಟಿದರು. ಮುಂದಕ್ಕೆ ಇವರು ತಂದೆಯೊಂದಿಗೆ ಹರಿಕೀರ್ತನೆ ಮಾಡುತ್ತಾ ಸಂಚಾರ ಪ್ರಾರಂಭಿಸುತ್ತಾರೆ.

ಹೀಗೆ ಊರೂರು ಅಲೆಯುತ್ತಾ ಅವರು ಬಾಲಗಂಗಾಧರ ತಿಲಕರ ಪ್ರಭಾವಕ್ಕೆ ಒಳಗಾಗಿ ಕ್ರಾಂತಿರಂಗಕ್ಕೆ ಧುಮುಕುತ್ತಾರೆ . ತಾವು ಮಾಡಿಕೊಂಡು ಬಂದಿದ್ದ ಹರಿಕೀರ್ತನೆ ನಿಲ್ಲಿಸಿ ಭಾರತ ಮಾತೆಯ ಯಶೋಗಾನವನ್ನು ಹಾಡುತ್ತಾ ಜನರಲ್ಲಿ ದೇಶಭಕ್ತಿ ತುಂಬುವ ಕೆಲಸ ಮಾಡುತ್ತಾರೆ. ಜೊತೆಗೆ ಜನರನ್ನು ಸಂಘಟಿಸಿ ಊರ ಹೊರಗಿನ ದೇವಸ್ಥಾನಗಳಲ್ಲಿ ಕುಸ್ತಿ ತರಬೇತಿ, ಲಾಠಿ ಬೀಸುವುದು ಮತ್ತು ಪಿಸ್ತೂಲು ಉಪಯೋಗಿಸುವುದನ್ನು ಕಲಿಸುತ್ತಿದ್ದರು.

1896 ರಲ್ಲಿ ಮುಂಬಯಿ ನಗರಕ್ಕೆ ಪ್ಲೇಗ್ ರೋಗ ಕಾಲಿಟ್ಟಿತು. ಜನ ಸಾಯುವ ರೀತಿ ನೋಡಿ ನಗರವೆಲ್ಲ ನಡುಗಿತು. ಭೀತಿಯಿಂದ ಜನರು ವಲಸೆ ಹೊರಟರು. ಈ ರೋಗ ಪೂನಾಕ್ಕೂ ಹರಡಿತು. ಈ ರೋಗವನ್ನು ತೊಡೆದುಹಾಕಲು ಬ್ರಿಟಿಷ್ ಸರ್ಕಾರ ಕೇವಲ ಕಾಟಾಚಾರದ ಕ್ರಮಗಳನ್ನು ಕೈಗೊಂಡಿತು. ಅದಲ್ಲದೆ ರ‍್ಯಾಂಡ್‌ ಎಂಬ ದುಷ್ಟ ಅಧಿಕಾರಿಯನ್ನು ಇಲ್ಲಿಗೆ ನೇಮಿಸಲಾಯಿತು. ಭಾರತೀಯರನ್ನು ಕಂಡರೆ ಆಗದ ರ‍್ಯಾಂಡ್‌ ರೋಗ ಪೀಡಿತ ಜನರನ್ನು ಬೆಂಕಿಯಿಂದ ಸುಟ್ಟು ತನ್ನ ವಿಕೃತಿ ಮೆರೆದಿದ್ದ. ಇದನೆಲ್ಲ ಗಮನಿಸಿದ ಕ್ರಾಂತಿಕಾರಿಗಳು ರ‍್ಯಾಂಡ್‌ ನ ಹತ್ಯೆಗೆ ಸಂಚು ರೂಪಿಸಿದರು. ಈ ಕಾರ್ಯವನ್ನು ಚಾಪೇಕರ್ ಸಹೋದರರಿಗೆ ವಹಿಸಲಾಗಿತ್ತು. ರ‍್ಯಾಂಡ್‌ ಪೂನಾ ಹೊಟೇಲಿನ ಕೊಠಡಿಯೊಂದರಲ್ಲಿ ವಾಸಿಸುತ್ತಿದ್ದ. ಅವನಿಲ್ಲದ ಸಮಯ ನೋಡಿಕೊಂಡು ಒಮ್ಮೆ ಈ ಸಹೋದರರು ಅವನ ಕೊಠಡಿಯನ್ನು ನೋಡಿಕೊಂಡು ಬಂದರು. ಅವನ ಕುದುರೆ ಸಾರೋಟಿನ ಬಣ್ಣ, ಚಲನವಲನ, ಕುದುರೆ ಇವುಗಳೆಲ್ಲವನ್ನೂ ಚೆನ್ನಾಗಿ ಗಮನಿಸಿದರು.

1897 ರ ಜೂನ್ 22ರಂದು ಬ್ರಿಟಿಷ್ ಸಮ್ರಾಜ್ಯದ ಮಹಾರಾಣಿ ವಿಕ್ಟೋರಿಯ ಪಟ್ಟಕ್ಕೇರಿದ ವಜ್ರ ಮಹೋತ್ಸವದ ದಿನ . ಪೂನಾದಲ್ಲಿ ಅದರ ಆಚರಣೆಗೆ ಭವ್ಯ ಸಿದ್ದತೆಗಳು ನಡೆದವು. ಈ ಸಂದರ್ಭದಲ್ಲಿ ರ‍್ಯಾಂಡ್‌ನ ಹತ್ಯೆಗೆ ಚಾಪೇಕರರು ಸಿದ್ದರಾದರು. ಸುಮಾರು ಮಧ್ಯರಾತ್ರಿಗೆ ಸಮಾರಂಭ ಮುಗಿಯಿತು. ಆಯಸ್ಟ್ ಎಂಬ ತರುಣ ಅಧಿಕಾರಿ ತನ್ನ ಹೆಂಡತಿಯೊಡನೆ ಬಂದು ಕುದುರೆ ಗಾಡಿಯಲ್ಲಿ ಕುಳಿತ .ಅವನ ಹಿಂದೆ ಇನ್ನೂ ಕೆಲವು ಇಂಗ್ಲಿಷ್‌ ಅಧಿಕಾರಿಗಳು ಅವರವರ ಗಾಡಿಗಳಲ್ಲಿ ಕುಳಿತರು. ಆದರೆ ಆಯಸ್ಟ್ ಹತ್ತಿ ಕೊರಟ ಕುದುರೆ ಗಾಡಿ ನೋಡುವುದಕ್ಕೆ ರ‍್ಯಾಂಡ್‌ನ ಗಾಡಿಯಂತೆಯೇ ಇತ್ತು. ಅದು ಬರುತ್ತಿದ್ದಂತೆಯೇ ಬಾಳಕೃಷ್ಣನು ಬಂದೂಕನ್ನು ತೆಗೆದುಕೊಂಡು ಆ ಗಾಡಿಯ ಹಿಂದೆ ಏರಿ ಆಯಸ್ಟ್ನ ತಲೆಗೆ ಸರಿಯಾಗಿ ಗುಂಡುಹಾರಿಸಿದ “ಗೋಂದ್ಯಾ ಅಲಾರೇ ” ಎಂಬ ಸಂಕೇತ ವಾಕ್ಯವನ್ನು ಕೂಗಿ ಅಣ್ಣನಿಗೆ ಸೂಚನೆ ಕೊಟ್ಟ. ದಾಮೋದರ ಕೂಡಲೆ ಮುನ್ನುಗಿದ. ರ‍್ಯಾಂಡ್‌ನ ಗಾಡಿಯನ್ನು ಹಿಂಬದಿಯಿಂದ ಏರಿ ಆತನ ಬೆನ್ನಿಗೆ ಗುಂಡು ಹಾರಿಸಿದವನೇ ಕೆಳಗೆ ಧುಮುಕಿ ಕತ್ತಲಲ್ಲಿ ಮಾಯಾವಾದ.

ರ‍್ಯಾಂಡ್‌ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆಯಸ್ಟ್‌ನ ಹೆಂಡತಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು ಮೂವರನ್ನು ಆಸ್ಪತ್ರೆಗೆ ಸೇರಿಸಿದರು. ಆಯಸ್ಟ್ ಕೆಲವು ಗಂಟೆಗಳಲ್ಲೆ ಸತ್ತ‌. ರ‍್ಯಾಂಡ್‌ ಮಾತ್ರ 10 ದಿನಗಳ ಕಾಲ ನರಕಯಾತನೆ ಅನುಭವಿಸಿ ಅಸುನೀಗಿದ. ಆಯಸ್ಟ್ ಮತ್ತು ರ‍್ಯಾಂಡ್‌ ನ ವಧೆ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು. ಕೆಲವು ತಿಂಗಳ ನಂತರ ಗಣೇಶ ಶಂಕರ ದ್ರಾವಿಡ ಅನ್ನುವ ಮಿತ್ರನ ದ್ರೋಹದ ಪರಿಣಾಮವಾಗಿ ದಾಮೋದರರನ್ನು ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಮಾಡಿದರು. ಮಿತ್ರದ್ರೋಹ ಮಾಡಿದ ದ್ರಾವಿಡನನ್ನು ವಾಸುದೇವ ಮತ್ತು ರಾನಡೆ ರಾತ್ರೋರಾತ್ರಿ ಹತ್ಯೆಮಾಡಿ ದೇಶದ್ರೋಹಿಗಳಿಗೆ ತಕ್ಕ ಶಾಸ್ತಿ ಮಾಡಿದರು. ಪೋಲಿಸರು ಹರಸಾಹಸ ಪಟ್ಟು ಇವರನ್ನು ಬಂಧಿಸಿದರು.

ಭಾರತೀಯರನ್ನು ಚಿತ್ರಹಿಂಸೆ ಮಾಡಿ ಕೊಂದ ರ‍್ಯಾಂಡ್‌ ನ ಹತ್ಯೆ ಮಾಡಿದರ ಫಲವಾಗಿ ಚಾಪೇಕರ್ ಸಹೋದರರಿಗೆ ದೊರೆತ್ತಿದ್ದು ಫಾಸೀ ಎಂಬ ಉಡುಗೊರೆ. ಬ್ರಿಟಿಷ್ ಸರಕಾರ ಇವರನ್ನು ಗಲ್ಲು ಶಿಕ್ಷೆಗೆ ಗುರಿಮಾಡಿ ಕೊಂದಿತು. ಆದರೇ ಹುತಾತ್ಮರ ಬಲಿದಾನ ಎಂದೂ ವ್ಯರ್ಥವಾಗುವುದಿಲ್ಲ ಅಲ್ಲವೇ? ದೇಶ ಬೇರೆಬೇರೆ ರೂಪದಲ್ಲಿ ಸಿಡಿದೆದ್ದಿತು. ಕೊನೆಗೊಮ್ಮೆ ಬ್ರಿಟಿಷರು ಭಾರತದಿಂದ ತೊಲಗಲೇಬೇಕಾಯಿತು!

ಸುರೇಶ್‌ ರಾಜ್‌
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು

LEAVE A REPLY

Please enter your comment!
Please enter your name here