ನವದೆಹಲಿ ಅ.6: ಅಕ್ಟೋಬರ್ 15ರಿಂದ ಸಿನಿಮಾ ಪ್ರದರ್ಶನ ಆರಂಭವಾಗಲಿದ್ದು, ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ನ ಮಾಲೀಕರು ಚಿತ್ರ ಪ್ರದರ್ಶನದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇನ್ನು ಸಿನಿಮಾ ಪ್ರದರ್ಶನ ಮಾಡುವವರು ಯಾವೆಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಯಾವ ರೀತಿಯ ಮಾರ್ಗಸೂಚಿಯನ್ನು ಪಾಲಿಸಬೇಕೆಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.
ಸರ್ಕಾರ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡುತ್ತಿದ್ದಂತೆಯೇ ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳ ಮಾಲೀಕರು ಖುಷಿಯಾಗಿದ್ದು, ಚಿತ್ರಮಂದಿರಗಳ ಸ್ವಚ್ಛತೆಗೆ ಮುಂದಾಗಿದ್ದಾರೆ.
ಸಿನಿಮಾ ಪ್ರದರ್ಶನಕ್ಕೆ ಸಂಬಂಧಿಸಿದ್ದಂತೆ ಈಗ ಕೇಂದ್ರ ಸರ್ಕಾರ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾ ಪ್ರದರ್ಶನ ಕುರಿತಂತೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಸಿನಿಮಾ ಪ್ರದರ್ಶನ ಮಾಡುವವರು ಮತ್ತು ಬರುವ ಪ್ರೇಕ್ಷಕರು ಯಾವೆಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಯಾವ ರೀತಿಯ ಮಾರ್ಗಸೂಚಿಯನ್ನು ಪಾಲಿಸಬೇಕೆಂದು ಸರ್ಕಾರ ಪ್ರಕಟಿಸಿದೆ :
● ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ ಆಸನ ವ್ಯವಸ್ಥೆ ಶೇಕಡ 50ನ್ನು ಮೀರುವಂತಿಲ್ಲ.
● ಪ್ರತಿ ಆಸನದ ನಡುವೆ ಅಂತರ ಇರಬೇಕು. ಮಾರ್ಕ್ ಮಾಡಿದ ಸೀಟ್ಗಳಲ್ಲಿ ಮಾತ್ರ ಪ್ರೇಕ್ಷಕರು ಕೂರಬೇಕು.
● ಹ್ಯಾಂಡ್ ವಾಶ್, ಹ್ಯಾಂಡ್ ಸ್ಯಾನಿಟೈಸರ್ ಬಳಸಬೇಕು.
● ಚಿತ್ರಮಂದಿರಕ್ಕೆ ಬರುವ ಎಲ್ಲರೂ ಆರೋಗ್ಯ ಸೇತು ಆ್ಯಪ್ ಬಳಸುವುದು ಕಡ್ಡಾಯ.
● ಚಿತ್ರಮಂದಿರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ.
● ಕೋವಿಡ್ ಲಕ್ಷಣ ಇಲ್ಲದವರಿಗೆ ಮಾತ್ರ ಸಿನಿಮಾ ವೀಕ್ಷಣೆಗೆ ಅವಕಾಶ.
● ಆನ್ಲೈನ್ ಟಿಕೆಟ್ ಬುಕ್ಕಿಂಗ್ಗೆ ಮೊದಲ ಆದ್ಯತೆ ನೀಡಬೇಕು.
● ಟಿಕೆಟ್ಗಾಗಿ ಕ್ಯೂಗಳಲ್ಲಿ ನಿಲ್ಲುವ ಪ್ರೇಕ್ಷಕರ ನಡುವೆ ಕನಿಷ್ಟ 6 ಅಡಿ ಅಂತರ ಇರಬೇಕು.
● ಮಧ್ಯಂತರದಲ್ಲಿ(interval) ಪ್ರೇಕ್ಷಕರು ಓಡಾಡುವಂತಿಲ್ಲ.
● ಗುಂಪುಗಾರಿಕೆ ತಡೆಯಲು ಅಡ್ವಾನ್ಸ್ ಟಿಕೆಟ್ ಬುಕ್ಕಿಂಗಿಗೆ ಅವಕಾಶ ಕೊಡಬೇಕು.
● ಕೇವಲ ಪ್ಯಾಕ್ ಮಾಡಿದ ತಿಂಡಿ-ತಿನಿಸುಗಳನ್ನು ಬಳಕೆ ಮಾಡಬೇಕು.
● ಥಿಯೇಟರ್ ಒಳಗೆ ಯಾವುದೇ ಆಹಾರ ಮಾರುವಂತಿಲ್ಲ.
● ಸಿಬ್ಬಂದಿಗಳಿಗೆ ಮಾಸ್ಕ್, ಗ್ಲೌಸ್, ಪಿಪಿಇ ಕಿಟ್, ಶೂ ಸೇರಿ ಡ್ರೆಸ್ ಕೋಡ್ ಕಡ್ಡಾಯ.
● ಪ್ರತಿಯೊಬ್ಬ ಪ್ರೇಕ್ಷಕರ ಕಾಂಟ್ಯಾಕ್ಟ್ ನಂಬರ್ ದಾಖಲಿಸಬೇಕು.
● ಎಸಿ ಆಧಾರಿತ ಚಿತ್ರಮಂದಿರಗಳಲ್ಲಿ 24-30 ಡಿಗ್ರಿ ಸೆ. ಉಷ್ಣಾಂಶವಿರಬೇಕು.
ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾ ಪ್ರದರ್ಶನ ಮಾಡುವವರು ಈ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು. ಇನ್ನು ಲಾಕ್ಡೌನ್ ಆರಂಭವಾದಾಗ ರಿಲೀಸ್ ಆಗಿದ್ದ ಕೆಲವು ಸಿನಿಮಾಗಳನ್ನು ರಿ-ರಿಲೀಸ್ ಮಾಡಲು ನಿರ್ಮಾಪಕರು ಸಜ್ಜಾಗಿದ್ದಾರೆ. ಜೊತೆಗೆ ಹೊಸ ಸಿನಿಮಾಗಳಲ್ಲಿ ಕೆಲವು ತೆರೆಗೆ ಬರಲು ಸಜ್ಜಾಗಿದ್ದರೂ, ಪ್ರೇಕ್ಷಕರ ಸಂಖ್ಯೆ ಕಡಿಮೆ ಇರುವ ಕಾರಣಕ್ಕೆ, ಸದ್ಯಕ್ಕೆ ರಿಲೀಸ್ ಆಗುತ್ತಿಲ್ಲ ಎನ್ನಲಾಗಿದೆ.