ಕೊರೋನಾ ಭೀತಿಯಿಂದಾಗಿ ಕಳೆದ ಆರು ತಿಂಗಳಿನಿಂದ ಮುಚ್ಚಲ್ಪಟ್ಟಿರುವ ಚಿತ್ರಮಂದಿರಗಳು ಮುಂದಿನ ತಿಂಗಳು ತೆರೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಾರ್ಚ್ನಿಂದ ಬಂದ್ ಆಗಿದ್ದ ಸಿನಿಮಾ ಮಂದಿರಗಳು ಕಾರ್ಯನಿರ್ವಹಿಸಲು ಕೇಂದ್ರ ಸಮ್ಮತಿ ನೀಡಿದೆ. ಅಕ್ಟೋಬರ್ 1 ರಿಂದ ದೇಶಾದ್ಯಂತದ ಚಿತ್ರಮಂದಿರಗಳು ತೆರೆಯಲಿದೆ ಎಂಬ ವಿಚಾರ ಹೊರಬಿದ್ದಿದೆ.
ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ, ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆ ಚರ್ಚಿಸಿದ್ದು, ಅಕ್ಟೋಬರ್ 1 ರಿಂದ ದೇಶಾದ್ಯಂತ ಚಿತ್ರಮಂದಿರ ತೆರೆಯಲು ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತವಾಗಿ ಮುಂದಿನ ಮಾರ್ಗಸೂಚಿಯಲ್ಲಿ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ ಶಿವರಾಜ್ ಕುಮಾರ್ ನೇತೃತ್ವದ ನಿಯೋಗ
ಈ ಮಧ್ಯೆ ಕನ್ನಡ ಚಲನಚಿತ್ರರಂಗದ ಪರವಾಗಿ ಶಿವರಾಜ್ ಕುಮಾರ್ ನೇತೃತ್ವದ ನಿಯೋಗ ಇಂದು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದೆ. ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ಚಿತ್ರರಂಗಕ್ಕೆ ನೆರವು ನೀಡಬೇಕು ಹಾಗೂ ಚಿತ್ರಮಂದಿರ ತೆರೆಯಲು ಅನುವು ಮಾಡಿ ಕೊಡಬೇಕು ಎಂದು ವಿನಂತಿಸಿದೆ.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಟ ಶಿವರಾಜ್ ಕುಮಾರ್ ‘ಚಿತ್ರರಂಗದ ಸಮಸ್ಯೆಗೆ ಬಗ್ಗೆ ಸಿಎಂ ಸ್ಪಂದಿಸಿದ್ದಾರೆ. ಲಾಕ್ಡೌನ್ ನಿಂದ ಸಿನಿ ಕ್ಷೇತ್ರಕ್ಕೆ ಬಹಳ ನಷ್ಟವಾಗಿದೆ. ಸಿನಿಮಾ ಥಿಯೇಟರ್ ತೆರೆಯುವ ಕುರಿತು ಚರ್ಚೆ ಮಾಡಿದ್ದೇವೆ. ಈ ಬಗ್ಗೆ ಕೇಂದ್ರದ ಮಾರ್ಗಸೂಚಿಯಂತೆ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.
‘ಸಿನಿಮಾ ಥಿಯೇಟರ್ ಓಪನ್ ಮಾಡೋದು ದೊಡ್ಡದಲ್ಲ. ಆದರೆ ಎಷ್ಟು ನಿರ್ಮಾಪಕರು ರೆಡಿಯಾಗಿದ್ದಾರೆ ಎಂಬುದು ಗಮನಿಸಬೇಕು. ಈ ಬಗ್ಗೆ ನಾವು ಮೊದಲು ಚರ್ಚೆ ಮಾಡಿ ತೀರ್ಮಾನ ಮಾಡ್ತೇವೆ. ನಮ್ಮ ಸಮಸ್ಯೆ ಬಗ್ಗೆ ಸಿಎಂ ಬಳಿ ಕೇಳಿಕೊಂಡಿದ್ದೇವೆ. ಆ ಸಮಸ್ಯೆಗೆ ಪರಿಹಾರ ಒದಗಿಸುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ’ ಎಂದು ನಟ ಶಿವರಾಜ್ ಕುಮಾರ್ ಹೇಳಿದರು.
ಈ ವೇಳೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಶಿವರಾಜ್ ಕುಮಾರ್, ತಾರಾ ಅನುರಾಧ, ಸಾ.ರಾ.ಗೋವಿಂದು, ನಟ ಯಶ್ ಮತ್ತು ದುನಿಯಾ ವಿಜಯ್ ಹಾಗೂ ನಿರ್ಮಾಪಕ, ನಿರ್ದೇಶಕರುಗಳು ಭಾಗಿಯಾಗಿದ್ದರು.