ಜನ ಮಾನಸದಲ್ಲಿ ಉಳಿಯಲಿದೆ ‘ದಿಲ್ ಬೇಚಾರಾ’

0
180
Tap to know MORE!

ನಿರ್ದೇಶನ – ಮುಖೇಶ್ ಚಾಬ್ರಾ

ನಿರ್ಮಾಣ – ಫಾಕ್ಸ್ ಸ್ಟಾರ್ ಸ್ಟುಡಿಯೋಸ್

ಸಂಗೀತ – ಎ.ಆರ್.ರೆಹಮಾನ್

ಆಧಾರ – ಫಾಲ್ಟ್ ಇನ್ ಅವರ್ ಸ್ಟಾರ್ಸ್


ಪಾತ್ರ:
ಇಮ್ಯಾನುಯೆಲ್ ರಾಜ್‌ಕುಮಾರ್ ಜೂನಿಯರ್ (ಮನ್ನಿ) – ಸುಶಾಂತ್ ಸಿಂಗ್ ರಜಪೂತ್
ಕಿಝಿ ಬಸು – ಸಂಜನಾ ಸಂಘಿ
ಜೆಪಿ – ಸಾಹಿಲ್ ವೈದ್
ಕಿಜಿಯ ತಂದೆ – ಶಾಶ್ವತ ಚಟ್ಟರ್ಜಿ
ಕಿಜಿಯ ತಾಯಿ – ಸ್ವಸ್ತಿಕಾ ಮುಖರ್ಜಿ
ಮನ್ನಿಯ ಅಜ್ಜಿ – ಸುಬ್ಬಲಕ್ಷ್ಮಿ
ಅಭಿಮನ್ಯು ವೀರ್ – ಸೈಫ್ ಅಲಿ ಖಾನ್  (ಅತಿಥಿ ಪಾತ್ರ)

ದಿಲ್ ಬೇಚಾರಾ – ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಟಿಸಿರುವ ಕೊನೆಯ ಚಿತ್ರ. ಆತನು ಆತ್ಮಹತ್ಯೆಗೈದ ಬಳಿಕ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಸಿನಿಮಾ ಎಂದೇ ಇದನ್ನು ಹೇಳಬಹುದು. ಒಂದು ವೇಳೆ ಆತ ಇಂದು ಜೀವಂತವಾಗಿರುತ್ತಿದ್ದರೆ, ಈ ಚಿತ್ರ ಇಷ್ಟೊಂದು ಪ್ರಚಾರವನ್ನೂ ಗಿಟ್ಟಿಸುತ್ತಿರಲಿಲ್ಲ ಮತ್ತು ಸುಶಾಂತ್ ನಟಿಸಿದ ಮತ್ತೊಂದು ಚಿತ್ರವಾಗಿ ಇರುತ್ತಿತ್ತು, ಅಷ್ಟೆ!! ಮತ್ತೊಂದು ಆಶ್ಚರ್ಯಕರ ಸಂಗತಿಯೆಂದರೆ, ಈ ಸಿನಿಮಾವನ್ನು ನೋಡುತ್ತಿರುವಾಗ ಅಥವಾ ನೋಡಿದ ಬಳಿಕ ಒಂದು ಪ್ರಶ್ನೆ ಹುಟ್ಟಿಕೊಳ್ಳುತ್ತೆ – ಇದು ನಿಜಕ್ಕೂ ಒಂದು ಸಿನಿಮಾ ಕಥೆಯೋ ಅಥವಾ ಸುಶಾಂತ್ ಸಿಂಗ್ ನ ಜೀವನಗಾಥೆಯೋ ಎಂದು! ಅದರ ಬಗೆ ಗೊತ್ತಾಗಬೇಕಾದರೆ ಒಮ್ಮೆ ಆದರೂ ಸಿನಿಮಾವನ್ನು ನೋಡಲೇಬೇಕು!!

ಇಡೀ ಸಿನಿಮಾ ಸಂಗೀತಮಯವಾಗಿದೆ. ಪ್ರತಿ ಒಂದು ಸನ್ನಿವೇಶವೂ ಜೀವನಕ್ಕೊಂದು ಪಾಠ ನೀಡುತ್ತೆ. ನಾಯಕ, ನಾಯಕಿ, ನಾಯಕಿಯ ಹೆತ್ತವರಾಗಲಿ, ವಿಶೇಷ ಪಾತ್ರದಲ್ಲಿ ಬರುವ ಸೈಫ್ ಅಲಿ ಖಾನ್ ಆಗಲಿ, ಸನ್ನಿವೇಶಕ್ಕೆ ಹೊಂದಿಕೊಂಡೇ ಒಂದೊಂದು ಪಾಠವನ್ನು ಕಲಿಸುತ್ತಾರೆ. ಸಿಂಪಲ್ ಆಗಿ ಹೇಳಬಹುದಾದರೆ, ಕಷ್ಟದ ಸಮಯದಲ್ಲೂ ಹೇಗೆ ಖುಷಿಯಾಗಿರಬೇಕು ಎಂಬುವುದನ್ನು ಇಡೀ ಸಿನಿಮಾ ಹೇಳುತ್ತದೆ.

ಹುಟ್ಟುವುದು ಮತ್ತು ಸಾಯುವುದು ನಮ್ಮ ಕೈಯಲಿಲ್ಲ. ಆದರೆ ಬದುಕುವುದು ಹೇಗೆ ಎಂದು ನಾವು ನಿರ್ಧರಿಸಬಹುದು.

ಮ್ಯಾನಿ

ಸಿನಿಮಾ ಕಥೆ ಹೀಗೆ ಸಾಗುತ್ತದೆ. ಚಿತ್ರದ ಆರಂಭಿಕ ದೃಶ್ಯವು ನಾಯಕಿ ಕಿಝಿ (ಸಂಜನಾ ಸಂಘಿ)ಯ ಪರಿಚಯವಾಗುತ್ತದೆ. ಅವಳು ಕ್ಯಾನ್ಸರ್ ನಿಂದ ಬಳಲುತ್ತಿರುವುದಾಗಿಯೂ, ತನ್ನ “ಬೋರಿಂಗ್” ದಿನಚರಿಯ ಬಗ್ಗೆಯೂ ಹೇಳುತ್ತಾಳೆ. ದಿನದ ಮೂರು ಬಾರಿ ಔಷಧ, ಬೆಳಗ್ಗೆ ಕಾಲೇಜಿಗೆ ಹೋಗುವುದು, ಸಂಜೆ ಮರಳುವುದು , ಪ್ರತಿನಿತ್ಯ ಆಗು ಹೋಗುಗಳನ್ನು ಲ್ಯಾಪ್ಟಾಪ್ ನಲ್ಲಿ ಬರೆದಿಟ್ಟುಕೊಳ್ಳುವುದು ಇಷ್ಟೇ ಅವಳ ಜೀವನ! ಒಂದು ದಿನ ಕಾಲೇಜಿನಲ್ಲಿ ನಾಯಕ ಮ್ಯಾನಿ (ಸುಶಾಂತ್ ಸಿಂಗ್ ) ಯ ಪರಿಚಯವಾಗುತ್ತದೆ. ನಾಯಕನ ಎಂಟ್ರಿ ಒಂದು ಸಾಮಾನ್ಯ ಬಾಲಿವುಡ್ ಶೈಲಿಯಲ್ಲಿಯೇ ಆಗುತ್ತದೆ. ಅವನೇ ಇವಳನ್ನು ನೋಡಿ, ಇವಳೊಂದಿಗೆ ಇರಲು ಬಯಸಿದರೂ, ಆರಂಭದಲ್ಲಿ ಕಿಝಿ ನಿರ್ಲಕ್ಷಿಸುತ್ತಾಳೆ. ಬಳಿಕ ಆತನೇ ಇವಳ ಪ್ರೀತಿಯನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ. ಮ್ಯಾನಿಯು ಅಂಗವಿಕಲತೆ ಮತ್ತು ಒಂದು ದೊಡ್ಡ ಖಾಯಿಲೆಯಿಂದ ಬಳಲುತ್ತಿದ್ದರೂ, ಕಿಝಿಯನ್ನು ಖುಷಿಯಾಗಿ ಇಡುತ್ತಿದ್ದ. ಎಲ್ಲೂ ಅವಳಿಗೆ ದುಃಖಿಯಾಗಿರಲು ಬಿಡಲಿಲ್ಲ.

ಸಿನಿಮಾದಲ್ಲಿ ಕಿಝಿಗೆ ‘ಮೇಂ ತುಮ್ಹಾರಾ’ ಹಾಡು ಬಹಳ ಇಷ್ಟವಾಗಿರುತ್ತದೆ. ಆದರೆ ಕವಿಯು ಆ ಹಾಡನ್ನು ಪೂರ್ತಿಗೊಳಿಸಲಿಲ್ಲ ಎಂಬ ಕೊರಗು ಅವಳಿಗೆ ಕಾಡುತ್ತಲೇ ಇರುತ್ತದೆ. ಆ ಕವಿ ಅಭಿಮನ್ಯು ವೀರ್(ಸೈಫ್ ಅಲಿ ಖಾನ್) ನನ್ನು ಭೇಟಿಯಾಗಲು ಮತ್ತು ಆ ಹಾಡನ್ನು ಪೂರ್ತಿಗೊಳಿಸುವಂತೆ ಕೇಳಿಕೊಳ್ಳಲು ಕಿಝಿ ಮತ್ತು ಮ್ಯಾನಿ ಪ್ಯಾರಿಸ್ ಗೆ ಹೋಗ್ತಾರೆ. ಅಲ್ಲಿ ಅವರಿಗೆ ಅಭಿಮನ್ಯು ಸಿಕ್ಕಿದರೂ ಆ ಹಾಡಿನ ಬಗ್ಗೆ ಆತ ಸರಿಯಾಗಿ ಹೇಳುವುದೇ ಇಲ್ಲ. ಆತನು ಒಬ್ಬ ಅರೆಹುಚ್ಚನಂತೆ ಇರುತ್ತಾನೆ. ಅಲ್ಲಿ ಅವರಿಗೆ ಆ ಕವಿಯಿಂದ ಎರಡು ಸಂದೇಶಗಳು ಸಿಗುತ್ತವೆ.

“ನೀವಿಬ್ಬರೂ ಈಗ ಒಟ್ಟಿಗೆ ಇದ್ದೀರಿ , ಆದರೆ ನಿಮ್ಮಲ್ಲಿ ಒಬ್ಬರು ಬೇಗ ಸಾಯುತ್ತೀರಾ. ಮತ್ತೊಬ್ಬರು ಖುಷಿಯಾಗಿ ಜೀವಿಸುತ್ತೀರಾ”

ಅಭಿಮನ್ಯು ವೀರ್

“ಈ ಹಾಡು ಅರ್ಧಕ್ಕೆ ನಿಲ್ಲಿಸಲಾಗಿದೆ ಏಕೆಂದರೆ ಜೀವನವೇ ಅಪೂರ್ಣವಾಗಿದೆ”

ಅಭಿಮನ್ಯು ವೀರ್

ಈ ಮಾತು ಕಿಝಿಗೆ ಬಹಳ ದುಃಖಗೊಳಿಸುತ್ತದೆ. ಅವರ ಜೀವನದಲ್ಲಿ ಆ ಪರಿಸ್ಥಿತಿ ಬರುತ್ತೆ, ಕ್ಯಾನ್ಸರ್ ನಿಂದ ಅವಳು ಸಾಯುತ್ತಾಳೆ ಇತ್ಯಾದಿ ಯೋಚನೆಗಳು ಅವಳಲ್ಲಿ ಬರುತ್ತವೆ. ಆದರೆ ಮುಂದೆ, ಅಭಿಮನ್ಯು ಹೇಳಿದಂತೆ, ಇವಳು ಯೋಚಿಸಿದಂತೆ ಆಗುತ್ತಾ? ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕಾಗುತ್ತದೆ.

ಎ.ಆರ್.ರೆಹಮಾನ್ ರ ಸಂಗೀತ ಸಂಯೋಜನೆ ಮನಸ್ಸಿಗೆ ಮತ್ತಷ್ಟು ಮುದ ಕೊಡುತ್ತದೆ. ಪ್ರತಿಯೊಂದು ಸನ್ನಿವೇಶಕ್ಕೂ ಸಂಗೀತವು ಬಲ ನೀಡುತ್ತದೆ. ವೀಕ್ಷಕರನ್ನೂ ಸಹ ಕಿಝಿ ಮತ್ತು ಮ್ಯಾನಿಯ ಜೀವನದ ಭಾಗವನ್ನಾಗಿ ಮಾಡುತ್ತದೆ.

ಸುಶಾಂತ್ ಅವರಿಂದಾಗಿ ಪ್ರತಿ ಬಾರಿಯೂ ಸನ್ನಿವೇಶಕ್ಕೆ ಪುಷ್ಟಿ ಸಿಗುತ್ತದೆ ಮತ್ತು ಮ್ಯಾನಿಯ ಅನಾರೋಗ್ಯವನ್ನು ಮೀರಿ, ಸಿನಿಮಾ ಕಾಣಿಸುತ್ತದೆ. ಒಂದು ವೇಳೆ ಸುಶಾಂತ್ ಬದುಕಿರುತ್ತಿದ್ದರೆ ಅವರು ಮತ್ತೊಬ್ಬ ಶಾರುಖ್ ಖಾನ್ ಆಗುತ್ತಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಸಂದರ್ಭಕ್ಕೆ ತಕ್ಕಂತೆ ಬದಲಾಗುವ ಹಾವ ಭಾವಗಳು, ಮುಖ ಚಹರೃಯಲ್ಲಿನ ಬದಲಾವಣೆಗಳು ಅವರನ್ನು ಒಬ್ಫ ಪರ್ಫೆಕ್ಟ್ ಲವರ್ ಬಾಯ್ ಯನ್ನಾಗಿಸುತ್ತದೆ. ಸಿನಿಮಾದ ಪ್ರಾರಂಭದಲ್ಲಿ ನಾಯಕಿಯು ” ನೀನು ಒಬ್ಬ ಸೀರಿಯಲ್ ಕಿಲ್ಲರ್ ರೀತಿ ಕಾಣಿಸುತ್ತಿ”ಎಂದು ನಾಯಕನಿಗೆ ಹೇಳುತ್ತಾಳೆ. ಆದರೆ ನಿಜಕ್ಕೂ ನಾಯಕ ಒಂಚೂರು ಆ ರೀತಿ ಕಾಣಿಸುವುದಿಲ್ಲ!

ನನಗೆ “ಸ್ಟ್ರಾಂಗ್” ಆಗಿ ಬಾಳುವ ಆಸೆಯಿಲ್ಲ. ಬದಲಾಗಿ ಒಬ್ಬ “ನಾರ್ಮಲ್” ಹುಡುಗಿಯರಂತೆ ನಾನೂ ಬಾಳಬೇಕು.

ಕಿಝಿ

ಚಿತ್ರದಲ್ಲಿ ಕಿಝಿ ಪಾತ್ರವು ಸಂಜನಾಗೆ ಹೇಳಿ ಮಾಡಿಸಿದಂತಹ ಪಾತ್ರದಂತಿದೆ. ಇಡೀ ಸಿನಿಮಾದಲ್ಲಿ ಗ್ಯಾಸ್ ಸಿಲಿಂಡರ್ “ಪಶ್ಪಿಂದರ್” ಅವಳ ನೆಚ್ಚಿನ ಗೆಳೆಯನಾಗಿರುತ್ತಾನೆ. ಎಲ್ಲಿಗೆ ಹೋದರೂ ಅವನು ಪಕ್ಕದಲ್ಲೇ ಇರುತ್ತಾನೆ! ನಾಯಕಿಯ ಹೆತ್ತವರೂ ಸಹ ತಮ್ಮ ಪಾತ್ರಕ್ಕೆ ಮೋಸ ಮಾಡಲಿಲ್ಲ. ಮಗಳ ಬಗೆಗಿನ ಕಾಳಜಿ, ಮಗಳ ಕನಸನ್ನೇ ತಮ್ಮ ಕನಸಾಗಿ ಕಾಣುತ್ತಾರೆ.

ಒಟ್ಟಾರೆಯಾಗಿ, ಇದು ಒಂದು ಪ್ರೇಮ ಕಥನವಾಗಿದ್ದು, ಜನ ಮಾನಸದಲ್ಲಿ ಉಳಿಯುವ ಕಥೆಯಾಗಿರಲಿದೆ. ಒಂದು ವೇಳೆ ಸುಶಾಂತ್ ಇಂದು ಜೀವಂತವಾಗಿರುತ್ತಿದ್ದರೆ……

LEAVE A REPLY

Please enter your comment!
Please enter your name here