ಭಾರತದ ಜಿಡಿಪಿ ಶೇ. -7.5 ಕ್ಕೆ ಕುಸಿತ | ದೇಶದ ಆರ್ಥಿಕತೆ ಸುಧಾರಣೆ ಪಥದಲ್ಲಿದೆ ಎಂದ ಆರ್ಬಿಐ ಗವರ್ನರ್!

0
190
Tap to know MORE!

ನವದೆಹಲಿ: ಕರೊನಾ ದುಷ್ಪರಿಣಾಮಗಳು ಮತ್ತು ಲಾಕ್​ಡೌನ್ ಕಾರಣಕ್ಕೆ ಮೈನಸ್ 23.9ಕ್ಕೆ ಕುಸಿದು ಆತಂಕ ಮೂಡಿಸಿದ್ದ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಜುಲೈ-ಸೆಪ್ಟೆಂಬರ್ ತ್ರೖೆಮಾಸಿಕದಲ್ಲಿ ತುಸು ಸುಧಾರಿಸಿಕೊಳ್ಳುವ ಮೂಲಕ ಆಶಾಭಾವ ಮೂಡಿಸಿದೆ. ಜಿಡಿಪಿ ಈಗ ಮೈನಸ್ 7.5ಗೆ ಬಂದಿದೆ ಎಂದು ಶುಕ್ರವಾರ ಬಿಡುಗಡೆಯಾದ ಅಂಕಿಅಂಶ ತಿಳಿಸಿದೆ.

ಈ ಮೂಲಕ ಮುಂದಿನ ತ್ರೖೆಮಾಸಿಕದಲ್ಲಿ ಜಿಡಿಪಿ ಧನಾತ್ಮಕವಾಗುವ ಭರವಸೆ ಮೂಡಿಸಿದೆ. ಆರ್ಥಿಕ ಪ್ರಗತಿ ಪ್ರಮಾಣ ಕಳೆದ ತ್ರೖೆಮಾಸಿಕಕ್ಕಿಂತ ಸ್ವಲ್ಪ ಸುಧಾರಿಸಿದ್ದರೂ, ಸತತ ಎರಡನೇ ಅವಧಿಯಲ್ಲಿ ಕುಸಿತ ದಾಖಲಿಸಿದ್ದರಿಂದ ದೇಶ ಅಧಿಕೃತವಾಗಿ ಆರ್ಥಿಕ ಬಿಕ್ಕಟ್ಟಿನಲ್ಲೇ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟು ಮೌಲ್ಯ ಸೇರ್ಪಡೆ (ಗ್ರಾಸ್ ವ್ಯಾಲ್ಯೂ ಆಡೆಡ್-ಜಿವಿಎ) ಶೇಕಡ 7 ಕುಸಿತವಾಗಿದೆ. ಕರೊನಾ ಮಹಾಮಾರಿ ಹಾಗೂ ಲಾಕ್​ಡೌನ್​ನಿಂದಾಗಿ ಆರ್ಥಿಕ ಚಟುವಟಿಕೆಗಳು ಮಂಕಾಗಿ ಏಪ್ರಿಲ್-ಜೂನ್ ಅವಧಿಯಲ್ಲಿ ಜಿಡಿಪಿ ಪಾತಾಳಕ್ಕೆ ಇಳಿದಿತ್ತು. ಉತ್ಪಾದನಾ ವಲಯದಲ್ಲಿ ಆಗಿರುವ ಗಣನೀಯ ಸುಧಾರಣೆ ಜಿಡಿಪಿ ಕುಸಿತ ಪ್ರಮಾಣ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ.

ಇದನ್ನೂ ಓದಿ: ಸುಳ್ಳು ಅತ್ಯಾಚಾರದ ಆರೋಪ : ಯುವತಿಗೆ ₹15 ಲಕ್ಷ ದಂಡ ವಿಧಿಸಿದ ಹೈಕೋರ್ಟ್!

ಸತತ ಎರಡು ತ್ರೖೆಮಾಸಿಕಗಳಲ್ಲಿ ಜಿಡಿಪಿ ಕುಸಿದರೆ ಅದು ಆರ್ಥಿಕ ಬಿಕ್ಕಟ್ಟು ಎನಿಸಿಕೊಳ್ಳುತ್ತದೆ. 1996ರಲ್ಲಿ ತ್ರೖೆಮಾಸಿಕ ಪದ್ಧತಿಯನ್ನು ಭಾರತ ಅಳವಡಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಸತತ ಎರಡು ತ್ರೖೆಮಾಸಿಕ ಋಣಾತ್ಮಕವಾಗಿದೆ. ಇತ್ತೀಚೆಗೆ ಪ್ರಕಟವಾಗಿದ್ದ ಆರ್​ಬಿಐನ ‘ನೌಕಾಸ್ಟ್’ ವರದಿಯಲ್ಲೂ, ದೇಶ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವ ಸುಳಿವು ನೀಡಲಾಗಿತ್ತು. ಶುಕ್ರವಾರ ಬಿಡುಗಡೆ ಮಾಡಲಾದ ಅಂಕಿಅಂಶದಿಂದ ಭಾರತ ತಾಂತ್ರಿಕವಾಗಿ ‘ಆರ್ಥಿಕ ಬಿಕ್ಕಟ್ಟ’ನ್ನು ಪ್ರವೇಶಿಸಿದೆ. ಎರಡನೇ ತ್ರೖೆಮಾಸಿಕದಲ್ಲಿ ಶೇಕಡ 8.8 ಕುಸಿತ ಆಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಅದಕ್ಕಿಂತಲೂ ಉತ್ತಮ ಸಾಧನೆ (ಶೇ. 7.5) ದಾಖಲಾಗಿದೆ. ಈ ವರ್ಷದಲ್ಲಿ ಶೇಕಡ 8.7 ಕುಸಿತ ದಾಖಲಾಗುವ ಸಾಧ್ಯತೆ ಇದ್ದು, ಇದು ನಾಲ್ಕು ದಶಕದಲ್ಲೇ ಕನಿಷ್ಠ ಜಿಡಿಪಿ ಆಗಲಿದೆ.

ಆರ್​ಬಿಐ ಗವರ್ನರ್ ಹೇಳಿದ್ದೇನು?

ಲಾಕ್​ಡೌನ್​ನಿಂದ ಉಂಟಾದ ಹಿನ್ನಡೆ ನಿವಾರಣೆಯಾಗಿ ನಿರೀಕ್ಷೆಗಿಂತ ವೇಗವಾಗಿ ದೇಶದ ಆರ್ಥಿಕತೆ ಸುಧಾರಣೆಯ ಪಥದಲ್ಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್​ನ (ಆರ್​ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ ಹೇಳಿದ್ದರು. ಆರ್ಥಿಕತೆಯ ಪುನಶ್ಚೇತನಕ್ಕೆ ಹಣಕಾಸಿನ ನೆರವು ಮುಂದುವರಿಸುವ ಸುಳಿವು ನೀಡಿದ್ದರು.

LEAVE A REPLY

Please enter your comment!
Please enter your name here