ಸಾಮಾನ್ಯವಾಗಿ ಹೆಚ್ಚಿನ ಮಕ್ಕಳಿಗೆ ಅಪ್ಪನೇ ಮಾದರಿಯಾಗಿರುತ್ತಾನೆ. ಕುಟುಂಬವೆಂಬ ಬಂಡಿಯನ್ನು ಎಳೆಯುವ ಸಾರಥಿಯಾಗಿ, ಮಕ್ಕಳ ಕನಸಿಗೆ ರೆಕ್ಕೆಯಾಗಿ, ಶಿಸ್ತಿಗೆ ಸಿಪಾಯಿಯಾಗಿ, ಧೈರ್ಯಕ್ಕೆ ಆಸರೆಯಾಗಿ ಮೀಸೆಯಂಚಿನಲಿ ಕಿರುನಗೆ ಬೀರೋ ಪ್ರೇಮಮಯಿಯಾಗಿ, ಮಗಳಿಗೆ ಹೀರೋ ಆಗಿ, ಮಗನಿಗೆ ಪ್ರೇರಣೆಯಾಗಿರುವ ಅಪ್ಪನ ಪ್ರೀತಿ ಅದ್ಭುತವಾದದ್ದು. ಆ ಪ್ರೀತಿ ಎಂದಿಗೂ ತೆರೆಮರೆಯಲ್ಲಿರುವ ಕಾಯಿಯಂತೆ ಇರುತ್ತದೆ.
ಇದನ್ನೂ ಓದಿ: ಅಪ್ಪ ಐ ಲವ್ ಯು
ಈ ದೊಡ್ಡ ಪ್ರಪಂಚದಲ್ಲಿ ಅಪ್ಪನಿಗೆ ನಾನು ನನ್ನ ಮಕ್ಕಳು ನನ್ನ ಸಂಸಾರವೆಂಬ ಪುಟ್ಟ ಪ್ರಪಂಚವೇ ಎಲ್ಲಕ್ಕಿಂತಲು ಹೆಚ್ಚು ಮುಖ್ಯವಾಗಿರುತ್ತದೆ. ಆ ಪ್ರಪಂಚದಲ್ಲಿ ಜೀವನ ಪಾಠ ಬೋಧಿಸುವ ಶಿಕ್ಷಕನಂತೆ ಇರುವ ಅಪ್ಪನ ಬೆವರ ಹನಿಗಳ ಹಿಂದಿನ ಪ್ರೀತಿಯೇ ಕುಟುಂಬಕ್ಕೆ ಶ್ರೀರಕ್ಷೆ.
ಇದನ್ನೂ ಓದಿ: ಅಪ್ಪ ಹೇಳಿದ ಆ ಒಂದು ಬುದ್ಧಿಮಾತು… ಜೀವನದ ಅತ್ಯಮೂಲ್ಯ ಪಾಠ!
ಮೊದ ಮೊದಲು ಅಪ್ಪನ ಕಾಲಿನ ಮೇಲೆ ನನ್ನ ಕಾಲನಿಟ್ಟು ನಡೆದ ಆ ದಿನಗಳು ಎಷ್ಟು ಚಂದ ಇತ್ತು. ಅಲ್ಲಿ ಯಾವುದೇ ಸಂಕೋಚವಿರಲಿಲ್ಲ. ಬರೀ ಪ್ರೀತಿ ಇತ್ತು. ನಾವು ಮೂರು ಮಕ್ಕಳು ಅವರು ಊಟ ಮಾಡುವಾಗ ಅವರ ಬಟ್ಟಲ ಮುಂದೆ ಕೂತು ಅವರ ಕೈಯಿಂದ ತುತ್ತು ತಿನ್ನುತ್ತಿದ್ದ ಸಮಯವಂತು ಅದ್ಭುತವಾಗಿತ್ತು.ಅವರ ತೊಡೆಯ ಮೇಲೆ ಕುಳಿತಾಗ ಆಗುತ್ತಿದ್ದ ಆನಂದ ಅದೆಂದಿಗೂ ಹಚ್ಚ ಹಸಿರೆ.
ಸುದ್ದಿಗಳನ್ನು ವಾಟ್ಸಾಪ್ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ
ಅಂದು ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುವಾಗ ಮಗಳ ಕಾಲಿನ ಗೆಜ್ಜೆಯಲ್ಲಿ ಆಗುತ್ತಿದ್ದ ಸದ್ದನ್ನು ಕೇಳಬಯಸುತ್ತಿದ್ದ ಅಪ್ಪ ಇಂದು ಬೆಳೆದು ನಿಂತಿರುವ ಮಗಳ ಗುಣಗಾನ ಮಾಡಲು ನಮ್ಮೊಡನೆ ಇಲ್ಲ. ಅಪ್ಪ ಎಂದರೆ ಆಕಾಶ ಎನ್ನುತ್ತಾರೆ. ಆದರೆ ನನ್ನ ಅಪ್ಪ ಇಂದು ಅದೇ ಆಕಾಶದಲ್ಲಿ ಮಿನುಗುವ ನಕ್ಷತ್ರ. ಅಪ್ಪ ಸ್ವಲ್ಪ ಕುಡುಕು ಪ್ರಿಯರಾಗಿದ್ದರು. ಕೊನೆಗೆ ಅದೇ ಕುಡುಕುತನ ಅವರ ಜೀವಕ್ಕೆ ಕಂಟಕವಾಯಿತು. ಆ ಕುಡುಕು ಅಪ್ಪನ ಪ್ರೀತಿ ಇಂದು ಎಲ್ಲಿ ಹುಡುಕಿದರೂ ಇಲ್ಲ. ಬರೀ ಅವರು ಬಿಟ್ಟು ಹೋದ ನೆನಪುಗಳಷ್ಟೆ ನಮ್ಮ ಬಳಿಯಿರುವುದು. ಅಪ್ಪ ನಿನ್ನ ಜೀವ ನಶ್ವರವಾದರೂ ನಿನ್ನ ನೆನಪು ನಿನ್ನ ಪ್ರೀತಿ ಅದೆಂದಿಗೂ ಶಾಶ್ವತವೇ. .ಮಿಸ್ ಯೂ ಅಪ್ಪ….
ನಳಿನಿ ಎಸ್ ಸುವರ್ಣ ಮುಂಡ್ಲಿ