ರಾಜ್ಯದಲ್ಲಿ ಕೊರೊನಾವೈರಸ್ ಪ್ರಕರಣಗಳನ್ನು ಹೆಚ್ಚುತ್ತಿರುವ ಭೀತಿಯಿಂದ, ಪಶ್ಚಿಮ ಬಂಗಾಳ ಸರ್ಕಾರ ಜುಲೈ 31 ರವರೆಗೆ ಲಾಕ್ಡೌನ್ ವಿಸ್ತರಣೆಯನ್ನು ಘೋಷಿಸಿದೆ.
ಹಿಂದಿನ ಪ್ರಕಟಣೆಯಲ್ಲಿ, ರಾಜ್ಯ ಸರ್ಕಾರವು ಜುಲೈ 31ರವರೆಗೆ ಬಂಗಾಳದ ಎಲ್ಲಾ ಶಿಕ್ಷಣ ಸಂಸ್ಥೆಗಳ ಮುಚ್ಚುವಿಕೆಯನ್ನು ಘೋಷಿಸಿತ್ತು. ಇವುಗಳಲ್ಲಿ ರಾಜ್ಯದಾದ್ಯಂತದ ಎಲ್ಲಾ ಸರ್ಕಾರಿ ಮತ್ತು ಸರ್ಕಾರೇತರ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಸೇರಿವೆ ಎಂದು ಪಶ್ಚಿಮ ಬಂಗಾಳ ಶಿಕ್ಷಣ ಸಚಿವ ಪಾರ್ಥಾ ಚಟರ್ಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇಂದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೋವಿಡ್ -19 ಪರಿಸ್ಥಿತಿಯ ಕುರಿತು ಕೋಲ್ಕತ್ತಾದ ನಬನ್ನಾದಲ್ಲಿ ಸರ್ವಪಕ್ಷ ಸಭೆ ನಡೆಸಿದ್ದರು.
ಸಭೆಯಲ್ಲಿ ಬಿಜೆಪಿಯಿಂದ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷ ದಿಲೀಪ್ ಘೋಷ್, ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮನೋಜ್ ಹೌಲದರ್, ಕಮ್ಯುನಿಸ್ಟ್ ಪಕ್ಷದ ಸ್ವಪನ್ ಬ್ಯಾನರ್ಜಿ, ಕಾಂಗ್ರೆಸ್ ನ ಪ್ರದೀಪ್ ಭಟ್ಟಾಚಾರ್ಯರು ಭಾಗವಹಿಸಿದ್ದರು.
ನಾಯಕರಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಅಂತಿಮವಾಗಿ ಜುಲೈ ಅಂತ್ಯದವರೆಗೆ, ಕೆಲವೊಂದು ನಿರ್ಬಂಧಗಳೊಂದಿಗೆ ಲಾಕ್ಡೌನ್ ವಿಸ್ತರಿಸಲು ನಿರ್ಧರಿಸಲಾಯಿತು ಎಂದು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ ಮಮತಾ ಬ್ಯಾನರ್ಜಿ ಹೇಳಿದರು.
ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸದ್ಯ ಜಾರಿಯಲ್ಲಿರುವ ಲಾಕ್ಡೌನ್ ಜೂನ್ 30 ರಂದು ಕೊನೆಗೊಳ್ಳಬೇಕಿತ್ತು.