ಜುಲೈ 5ರಿಂದ ಬೆಂಗಳೂರು ಲಾಕ್!

0
48

ಕರ್ನಾಟಕದಲ್ಲಿ, ವಿಶೇಷವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ 19 ಸೋಂಕು ತೀವ್ರವಾಗಿ ಹಬ್ಬಿರುವ ಕಳವಳ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ, ಜುಲೈ 5 ರಿಂದ ಪ್ರತಿ ಭಾನುವಾರ ಲಾಕ್‌ಡೌನ್ ವಿಧಿಸಲು ನಿರ್ಧರಿಸಿದೆ. ಜೂನ್ 29, ಸೋಮವಾರದಿಂದ ಪ್ರತಿದಿನ, ರಾತ್ರಿ 8 ರಿಂದ ಬೆಳಿಗ್ಗೆ 5 ರವರೆಗೆ ರಾತ್ರಿಗಳಲ್ಲಿ ಕಠಿಣ ಕರ್ಫ್ಯೂ ಜಾರಿಗೊಳಿಸಿದೆ.

ಅಗತ್ಯ ಸೇವೆಗಳು ಮತ್ತು ಸರಬರಾಜುಗಳನ್ನು ಹೊರತುಪಡಿಸಿ ಜುಲೈ 5 ರಿಂದ ಪ್ರತಿ ಭಾನುವಾರದಂದು ಯಾವುದೇ ಚಟುವಟಿಕೆಗಳಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ ಪ್ರಕಟಿಸಿದ್ದಾರೆ.

ಇದಲ್ಲದೆ, ಜುಲೈ 10 ರಿಂದ ಎರಡನೇ ಮತ್ತು ನಾಲ್ಕನೇ ಶನಿವಾರದ ಜೊತೆಗೆ ಎಲ್ಲಾ ಶನಿವಾರದಂದು ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ರಜೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಶನಿವಾರ ಬೆಂಗಳೂರಿನ ಮುಖ್ಯಮಂತ್ರಿಯ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದ ಕೋವಿಡ್ 19 ಪರಿಸ್ಥಿತಿಯ ನಿಯಂತ್ರಣಕ್ಕೆ ತುರ್ತು ಉನ್ನತ ಮಟ್ಟದ ಸಭೆಯ ನಂತರ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ ಭಾಸ್ಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್, ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಆಯುಕ್ತ ಬಿ ಎಚ್ ಅನಿಲ್ ಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ನಗರದಲ್ಲಿ ಸಗಟು ತರಕಾರಿ ಮಾರುಕಟ್ಟೆಗಳಲ್ಲಿ ಜನಸಂದಣಿಯನ್ನು ತಪ್ಪಿಸಲು, ಇನ್ನೂ ಹೆಚ್ಚಿನ ಸಂಖ್ಯೆಯ ಸಗಟು ತರಕಾರಿ ಮಾರುಕಟ್ಟೆಗಳನ್ನು ಸ್ಥಾಪಿಸುವಂತೆ ಬಿಬಿಎಂಪಿ ಆಯುಕ್ತರಿಗೆ ನಿರ್ದೇಶನ ನೀಡಲಾಯಿತು.

ಕೋವಿಡ್ 19 ರೋಗಿಗಳ ಆಸ್ಪತ್ರೆಗಳ ವ್ಯವಸ್ಥೆಯನ್ನು ತ್ವರಿತಗೊಳಿಸಲು, ಕೇಂದ್ರೀಕೃತ ಹಾಸಿಗೆ ಹಂಚಿಕೆ ವ್ಯವಸ್ಥೆಯನ್ನು ಹೊಂದಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.

ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಗಳನ್ನು ಆಸ್ಪತ್ರೆಗೆ ಸಾಗಿಸಲು ಅಂಬ್ಯೂಲೆನ್ಸ್ ಸಂಖ್ಯೆಗಳನ್ನು 250ಕ್ಕೆ ಹೆಚ್ಚಿಸಲು ಮತ್ತು ಕೋವಿಡ್‍ನಿಂದ ಮೃತರಾದ ದೇಹಗಳನ್ನು ಸಾಗಿಸಲು ಪ್ರತ್ಯೇಕ ಅಂಬ್ಯೂಲೆನ್ಸ್ ವ್ಯವಸ್ಥೆ ಮಾಡಲಾಗುವುದು. ಅಂಬ್ಯೂಲೆನ್ಸ್ ಇರುವ ಸ್ಥಳವನ್ನು ಗುರುತಿಸಲು ಮತ್ತು ಅವುಗಳ ಸರಳ ಚಲನವಲನಗಳ ಸಲುವಾಗಿ ಪೊಲೀಸ್ ಕಂಟ್ರೋಲ್ ರೂಂ ವೈರ್‍ಲೆಸ್ ಸೇವೆಯನ್ನು ಬಳಸಿಕೊಳ್ಳಲು ಸೂಚಿಸಲಾಗಿದೆ.

ಕೋವಿಡ್-19 ರ ನಿಯಂತ್ರಣದಲ್ಲಿ ಕೆಲಸ ಮಾಡುವ ಎಲ್ಲಾ ನೋಡಲ್ ಅಧಿಕಾರಿಗಳ ವಿವರಗಳನ್ನು ಪತ್ರಿಕೆಗಳ ಜಾಹಿರಾತು ಮುಖಾಂತರ ಸಾರ್ವಜನಿಕರಿಗೆ ಪ್ರಚುರಪಡಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಯಿತು.

ಡಾಕ್ಟರ್‍ಗಳ ಕೊರತೆಯನ್ನು ನೀಗಿಸಲು ಕಾರ್ಮಿಕ ಇಲಾಖೆಯಿಂದ ನೇಮಕವಾಗಿರುವ 180 ಎ.ಎಸ್.ಐ ಡಾಕ್ಟರ್‍ಗಳನ್ನು ಕೋವಿಡ್ ಕರ್ತವ್ಯಕ್ಕೆ ಬಳಸಿಕೊಳ್ಳಲು ಮತ್ತು ಪರೀಕ್ಷಾರ್ತಿ ತಹಶೀಲ್ದಾರ್‍ಗಳನ್ನು ಕೋವಿಡ್ ಆಸ್ಪತ್ರೆಗಳು/ಕೇರ್ ಸೆಂಟರ್‍ಗಳಿಗೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲು ಸೂಚಿಸಲಾಯಿತು.

ಬೆಡ್ ಕೊರತೆ ನೀಗಿಸಲು ಪರ್ಯಾಯ ವ್ಯವಸ್ಥೆ

ಬೆಂಗಳೂರಿನಲ್ಲಿ ಲಭ್ಯವಿರುವ ಕಲ್ಯಾಣ ಮಂಟಪಗಳು, ಹಾಸ್ಟೆಲ್‍ಗಳು ಹಾಗೂ ಇನ್ನಿತರೆ ಸಂಸ್ಥೆಗಳನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ಮೀಸಲಿಡಲು ಹಾಗೂ ರೈಲ್ವೆ ಇಲಾಖೆಯಿಂದ ಬೆಡ್‍ಗಳ ಕೋಚ್‍ನ್ನು ಪಡೆಯಲು ಅವಶ್ಯ ಕ್ರಮ ಜರುಗಿಸಲು ಸೂಚಿಸಲಾಯಿತು. ಅದಲ್ಲದೆ ಕೋವಿಡ್‍ನಿಂದ ಮೃತರಾದ ದೇಹಗಳ ಅಂತ್ಯಕ್ರಿಯೆಯನ್ನು ಜರುಗಿಸಲು ಪ್ರತ್ಯೇಕ ತಂಡಗಳನ್ನು ರಚಿಸುವುದು ಹಾಗೂ ದೇಹಗಳ ಅಂತ್ಯಕ್ರಿಯೆಯ ಸಲುವಾಗಿ ಇನ್ನೂ ಹೆಚ್ಚಿನ ಜಾಗಗಳನ್ನು ಗುರುತಿಸಲು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಸೂಚಿಸಲು ತೀರ್ಮಾನಿಸಲಾಯಿತು. ಮೆಡಿಕಲ್ ಕಾಲೇಜ್ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್‍ಗಳ ಪೈಕಿ ಶೇ.50 ರಷ್ಟನ್ನು ಕೋವಿಡ್ ರೋಗಿಗಳ ಸಲುವಾಗಿ ಮೀಸಲಿಡಲು ಬಿ.ಬಿ.ಎಂ.ಪಿ ಆಯುಕ್ತರಿಗೆ ಸೂಚಿಸಲಾಯಿತು. ಆಸ್ಪತ್ರೆಗಳಲ್ಲಿ ಬೆಡ್‍ಗಳು ಪೂರ್ತಿಯಾದ ನಂತರ ರೋಗಿಗಳನ್ನು ಹೋಟೆಲ್‍ಗಳ ಕೊಠಡಿಗಳನ್ನು ಚಿಕಿತ್ಸೆಗಾಗಿ ಬಳಸಿಕೊಳ್ಳುವ ಉದ್ದೇಶದಿಂದ ಹೋಟೆಲ್‍ಗಳನ್ನು ಆಸ್ಪತ್ರೆಗಳಿಗೆ ಟೈಯಪ್ ಮಾಡಲು ಸೂಕ್ತ ಕ್ರಮ ಕೈಗೊಳ್ಳಲು ಬಿ.ಬಿ.ಎಂ.ಪಿ ಆಯುಕ್ತರಿಗೆ ಸೂಚಿಸಲಾಯಿತು.

LEAVE A REPLY

Please enter your comment!
Please enter your name here