ಡಿವೈಎಫ್‌ಐ ಮುಖಂಡ ಮುಹಮ್ಮದ್ ರಿಯಾಸ್ ರನ್ನು ವರಿಸಲಿರುವ ಪಿಣರಾಯಿ ವಿಜಯನ್ ಪುತ್ರಿ

0
187
Tap to know MORE!

ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾದ (ಡಿವೈಎಫ್‌ಐ) ರಾಷ್ಟ್ರೀಯ ಅಧ್ಯಕ್ಷ ಪಿ.ಎ.ಮಹಮ್ಮದ್ ರಿಯಾಸ್ ರವರು, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವರ ಮಗಳಾದ ವೀಣಾರವರನ್ನು ವರಿಸಲಿದ್ದಾರೆ.

ವೀಣಾ ಅವರು ಪಿಣರಾಯಿ ವಿಜಯನ್ ಮತ್ತು ಕಮಲಾ ವಿಜಯನ್ ಅವರ ಹಿರಿಯ ಮಗಳಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ಅವರು ತಮ್ಮದೇ ಕಂಪನಿಯನ್ನು ಸ್ಥಾಪಿಸಿದ್ದಾರೆ.

ವರದಿಗಳ ಪ್ರಕಾರ, ಜೂನ್ ೧೫ ರಂದು ತಿರುವನಂತಪುರದಲ್ಲಿ ವಿವಾಹವು ನಿಶ್ಚಯವಾಗಿದ್ದು, ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರು ಮಾತ್ರ ಸೇರಿಕೊಂಡ ಒಂದು ಸಣ್ಣ ಸಮಾರಂಭದಲ್ಲಿ ನಡೆಯಲಿದೆ.

ಕಾಲೇಜು ದಿನಗಳಲ್ಲಿ ರಾಜಕೀಯ ಪ್ರವೇಶಿಸಿದ್ದ ಮುಹಮ್ಮದ್ ರಿಯಾಸ್, ಈ ಹಿಂದೆ ಡಿವೈಎಫ್‌ಐನ ರಾಷ್ಟ್ರೀಯ ಜಂಟಿ ಕಾರ್ಯದರ್ಶಿಯಾಗಿದ್ದರು. ಫೆಬ್ರವರಿ 2017 ರಲ್ಲಿ ಅವರನ್ನು ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಮೇ 2017 ರಲ್ಲಿ, ಮಾರುಕಟ್ಟೆಗಳಿಂದ ಜಾನುವಾರುಗಳ ಮಾರಾಟ ಮತ್ತು ಖರೀದಿಯನ್ನು ನಿಷೇಧಿಸುವ ಕೇಂದ್ರದ ನಿರ್ಧಾರದ ವಿರುದ್ಧ ಅವರು ‘ಗೋಮಾಂಸ ಅಡುಗೆ’ ಹೆಸರಿನ ಪ್ರತಿಭಟನೆಗೆ ಕಾರಣರಾದರು.

2009 ರ ಲೋಕಸಭಾ ಚುನಾವಣೆಯಲ್ಲಿ ರಿಯಾಸ್ ಸಿಪಿಐ (ಎಂ) ಅಭ್ಯರ್ಥಿಯಾಗಿ ಕೋಝಿಕೋಡ್ ಕ್ಷೇತ್ರದಿಂದ ಸ್ಪರ್ಧಿಸಿ, ಯುಡಿಎಫ್‌ನ ಎಂ.ಕೆ.ರಾಘವನ್ ವಿರುದ್ಧ ಸುಮಾರು 800 ಮತಗಳ ಅಂತರದಿಂದ ಸೋತಿದ್ದರು.

ವೀಣಾ ಅವರು, ಒರ್ಯಾಕಲ್‌ನೊಂದಿಗೆ ಕೆಲಸ ಮಾಡಿದ ನಂತರ, ಆರ್‌ಪಿ ಟೆಕ್ಸಾಫ್ಟ್‌ನ ಸಿಇಒ ಆಗಿ, 6 ವರ್ಷಗಳ ಹಿಂದೆ ಎಕ್ಸಲಾಜಿಕ್ ಎಂಬ ಕಂಪನಿಯನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿದರು.

ವಿಪರ್ಯಾಸವೆಂದರೆ, ಇದು ವೀಣಾ ಮತ್ತು ರಿಯಾಸ್‌ ಇಬ್ಬರದ್ದೂ ಎರಡನೇ ಮದುವೆಯಾಗಿರುತ್ತದೆ.

LEAVE A REPLY

Please enter your comment!
Please enter your name here