ಬೆಂಗಳೂರು ಅ.04 : ರಾಜರಾಜೇಶ್ವರಿ ನಗರದ ಟಿಕೆಟ್ ಆಕಾಂಕ್ಷಿ ದಿವಂಗತ ಡಿ.ಕೆ.ರವಿ ಪತ್ನಿ ಕುಸುಮಾ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕೆಪಿಸಿಸಿ ಕಚೇರಿಗೆ ಕುಟುಂಬ ಸಮೇತರಾಗಿ ಆಗಮಿಸಿದ್ದ ಕುಸುಮಾ ಇಂದು ಬೆಳಗ್ಗೆ ಕಾಂಗ್ರೆಸ್ ಸದಸ್ಯತ್ವವನ್ನು ಪಡೆದರು.
ಬೆಳಗ್ಗೆ 10.40ಕ್ಕೆ ಕೆಪಿಸಿಸಿ ಕಚೇರಿಗೆ ಆಗಮಿಸಿದ ಕುಸುಮಾ, ಈ ಶುಭ ಘಳಿಗೆಗಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾದು ಕುಳಿತಿದ್ದರು. ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಂದ ಪಕ್ಷದ ಸದಸ್ಯತ್ವವನ್ನು ಪಡೆದುಕೊಂಡರು. ಇದೇ ವೇಳೆ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಪರಮೇಶ್ವರ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ರಾಜಕುಮಾರ್ ಭಾಗಿಯಾಗಿದ್ದರು.
ಇದೇ ವೇಳೆ ಅವರ ತಂದೆ ಹನುಮಂತರಾಯಪ್ಪ ಹಾಗೂ ಅವರ ಬೆಂಬಲಿಗರು ಸಹ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಜೊತೆಗೆ ಸಿರಾ ಕ್ಷೇತ್ರದ ಬೇರೆ ಪಕ್ಷದ ನೂರಾರು ಮುಖಂಡರೂ ಸಹ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡರು.