ತಾ ಮಡಿದರೂ ಧ್ವಜ ಬಿಡದ ದೇಶಭಕ್ತ ತಿರುಪುರ್ ಕುಮಾರನ್!!

0
225
Tap to know MORE!

ಭಾರತೀಯ ಸ್ವಾತಂತ್ರ್ಯ ಹೋರಾಟವೆಂಬ ಯಜ್ಞಕ್ಕೆ ಸಮಿದೆಯಾದ ಕೆಲವರಷ್ಟೇ ನಮ್ಮ ನೆನಪಿನಲ್ಲಿರುವುದು. ಆದರೆ ಬ್ರಿಟಿಷರ ವಿರುದ್ಧದ ಪ್ರತಿಭಟನೆಯ ವೇಳೆ ಲಾಠಿ ಪ್ರಹಾರದಲ್ಲಿ ತಾನು ಕೆಳಗೆ ಬಿದ್ದರೂ ಕೈಯಲ್ಲಿದ್ದ ಧ್ವಜ ಕೆಳಗೆ ಬೀಳದ ಹಾಗೆ ನೋಡಿಕೊಂಡು ಪ್ರಸಿದ್ಧರಾದವರು ತಿರುಪುರ್ ಕುಮಾರನ್ ಅಥವಾ ಕೋಡಿ ಕಾಥಾ ಕುಮಾರನ್.

ಕುಮಾರನ್ 1904ರ ಅಕ್ಟೋಬರ್ 4 ರಂದು ತಮಿಳುನಾಡಿನ ಚೆನ್ನಿಮಲೈ ಎಂಬ ಹಳ್ಳಿಯ ಸಣ್ಣ ಕುಟುಂಬವೊಂದರಲ್ಲಿ ಜನಿಸಿದರು. ಇವರ ಕುಲಕಸುಬು ಕೈಮಗ್ಗ- ನೇಯ್ಗೆಯಾದ್ದರಿಂದ ಇವರು ತಮ್ಮ ಶಿಕ್ಷಣವನ್ನು 5ನೇ ತರಗತಿಗೆ ನಿಲ್ಲಿಸಿ ಕುಲವೃತ್ತಿಯಲ್ಲಿ ತೊಡಗಿ ಕುಟುಂಬದ ಸಹಾಯಕ್ಕೆ ನಿಲ್ಲುತ್ತಾರೆ. 1923 ರಲ್ಲಿ ಕುಟುಂಬದ ಒತ್ತಾಯಕ್ಕೆ ಮಣಿದು ಕುಮಾರನ್ ತನ್ನ 19 ವರ್ಷ ವಯಸ್ಸಿನಲ್ಲೇ ವಿವಾಹವಾಗುತ್ತಾರೆ. ಆ ಹೊತ್ತಿಗೆ ದೇಶದಲ್ಲಿ ಸ್ವಾತಂತ್ರ್ಯ ಚಳುವಳಿ ವೇಗ ಪಡೆಯುತ್ತಿರುತ್ತದೆ. ಗಾಂಧೀಜಿಯವರ ಆದರ್ಶಗಳಿಂದ ಪ್ರಭಾವಿತರಾದ ಕಮಾರನ್ ಚಳುವಳಿಯಲ್ಲಿ ಭಾಗವಹಿಸಲು ನಿರ್ಧರಿಸುತ್ತಾರೆ.

ಕುಮಾರನ್ಗೆ ಚಳುವಳಿಯ ಮೇಲಿದ್ದ ಬದ್ದತೆ ಕಂಡು ಕುಟುಂಬದವರು ಇವರನ್ನು ಚಳುವಳಿಯಲ್ಲಿ ಭಾಗವಹಿಸದಂತೆ ಒತ್ತಾಯಿಸಿದರು. ಅವರ ಸಹೋದ್ಯೋಗಿಗಳಿಗೆ ಕುಮಾರನ್ ಭಾಗವಹಿಸದಂತೆ ನೋಡಿಕೊಳ್ಳಲು ಹೇಳಿದರು. ಆದರೆ ಯಾವುದರಿಂದಲೂ ನಿರುತ್ಸಾಹಗೊಳ್ಳದ ಕುಮಾರನ್ ಭಾರತೀಯ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ತಮಿಳುನಾಡು ಮತ್ತು ಸುತ್ತಮುತ್ತಲಿನ ಯುವಕರನ್ನು ಸೇರಿಸಿ ‘ದೇಸ ಬಂಧು ಯುವ ಸಂಘ’ ಪ್ರಾರಂಭಿಸಿದರು. ಈ ಮೂಲಕ ತಮಿಳುನಾಡಿನಾದ್ಯಂತ ಬ್ರಿಟಿಷರ ವಿರುದ್ಧ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿ ಯೌವಕರಿಗೆ ಸ್ಪೂರ್ತಿ ನೀಡಿದರು.

1932ರಲ್ಲಿ ಬಾಂಬೆಯಲ್ಲಿ ಗಾಂಧೀಜಿ ಪ್ರತಿಭಟನಾ ಪ್ರದರ್ಶನ ನಡೆಸಿದಾಗ ಬ್ರಿಟಿಷರು ಹಲವು ಭಾರತೀಯ ನಾಯಕರನ್ನು ಬಂಧಿಸಿದರು. ಇದರಿಂದ ತಿರುಪುರದಲ್ಲಿ ನಡೆದ ದೇಶ ಭಕ್ತಿ ಮೆರವಣಿಗೆ ಸೇರಿದಂತೆ ದೇಶಾದ್ಯಂತ ಗಲಭೆಗಳು ನಡೆದವು. ಆ ಸಮಯದಲ್ಲಿ ಭಾರತದ ಧ್ವಜವನ್ನು ನಿಷೇಧಿಸಲಾಗಿದ್ದರೂ ಪ್ರತಿಭಟನೆಯಲ್ಲಿ ಕುಮಾರನ್ ಸೇರಿದಂತೆ ಜನರು ರಾಷ್ಟ್ರೀಯ ಧ್ವಜವನ್ನು ಹಿಡಿದಿದ್ದರು. ಪ್ರತಿಭಟನಾಕಾರರ ವಿರುದ್ಧ ಬ್ರಿಟಿಷರು ಲಾಠಿ ಪ್ರಹಾರ ಮಾಡಿದರು. ಆದರೆ ಕುಮಾರನ್ ಆವರಣ ತೊರೆಯಲಿಲ್ಲ. ಆಕ್ರೋಶಗೊಂಡ ಬ್ರಿಟಿಷರು ಪ್ರತಿಭಟನಾಕಾರರ ವಿರುದ್ಧ ತೀವ್ರ ಹಲ್ಲೆ ನಡೆಸಿದರು.

ಕುಮಾರನ್ ಬ್ರಿಟಿಷರ ಹೊಡೆತಕ್ಕೆ ಸಿಲುಕಿದರೂ ಕೈಯಲ್ಲಿದ್ದ ಧ್ವಜ ಮಾತ್ರ ಬಿಡಲ್ಲಿಲ್ಲ. ಕುಮಾರ್ ಪ್ರಜ್ಞಾಹೀನರಾದರು ಮತ್ತು ಅವರ ಕುಟುಂಬದವರ ಭಯ ನಿಜವಾಗಿತ್ತು. ಏಕೆಂದರೆ ಅವರ ಪ್ರಾಣ ಧ್ವಜ ಹಿಡಿದ ಸ್ಥಿತಿಯಲ್ಲಿ ಹೋಗಿತ್ತು. ಕುಮಾರನ್ ಸಾವಿನಲ್ಲೂ ಧ್ವಜದ ಘನತೆ ಕಾಪಾಡಿದ್ದರು.

ಕುಮಾರನ್ ನೆನಪಿನಲ್ಲಿ ಅಂಚೆ ಚೀಟಿ

ತಿರುಪುರ್ ಕುಮಾರನ್ ಅವರು ಪ್ರಾಣ ಕಳೆದುಕೊಂಡಾಗ ಕೇವಲ 27 ವರ್ಷ. ಅವರು ದೇಶದ ಸ್ವತಂತ್ರ್ಯದಲ್ಲಿ ಪ್ರಮುಖ ಪಾತ್ರ ವಹಿಸದಿದ್ದರು. ಅವರಿಗೆ ರಾಷ್ಟ್ರದ ಮೇಲಿದ್ದ ಹೆಮ್ಮೆ, ದೇಶಭಕ್ತಿ ಮತ್ತು ನಿಸ್ವಾರ್ಥ ಬದ್ದತೆ ಅವರನ್ನು ಜನ ನೆನಪಿಸುವಂತೆ ಮಾಡಿದೆ. ಕುಮಾರನ್ ಅವರನ್ನು ತಮಿಳುನಾಡಿನಲ್ಲಿ ‘ಕೋಡಿ ಕಥಾ ಕುಮಾರನ್’ ಧ್ವಜ ಉಳಿಸಿದ ಕುಮಾರನ್ ಎಂಬ ಹೆಸರಿನಿಂದ ಸ್ಮರಿಸಲಾಗುತ್ತದೆ.

ಸುರೇಶ್ ರಾಜ್
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು

LEAVE A REPLY

Please enter your comment!
Please enter your name here