ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಎಲ್ಲರೂ ಕೈಜೋಡಿಸಬೇಕು: ಪ್ರೊ| ಯಡಪಡಿತ್ತಾಯ

0
504
Tap to know MORE!

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ತುಳು ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಸಹಯೋಗದಲ್ಲಿ  ನಡೆಯುತ್ತಿರುವ ಸರಣಿ ಉಪನ್ಯಾಸ ಕಾರ್ಯಕ್ರಮದ 50 ನೇ ಸಂಚಿಕೆ ʼಗೇನದ ಪರೆಲ್‌; ಬಂಗಾರ್ದ ಕುರಲ್‌ʼ, ಶನಿವಾರ ಆನ್‌ಲೈನ್‌ನಲ್ಲಿ ಸಂಪನ್ನಗೊಂಡಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ, ಸರಣಿ ಉಪನ್ಯಾಸದ ಯಶಸ್ಸಿಗೆ ಕೈಜೋಡಿಸಿದ ಎಲ್ಲರನ್ನೂ ಅಭಿನಂದಿಸಿ ತುಳುಭಾಷೆ 8ನೆಯ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕು ಮತ್ತು ಇದಕ್ಕಾಗಿ ಎಲ್ಲರೂ ಕೈಜೋಡಿಸಬೇಕೆಂಬ ಇಂಗಿತ ವ್ಯಕ್ತಪಡಿಸಿದರು. ಸಂಸದ ನಳಿನ್‌ ಕುಮಾರ್‌ ಕಟೀಲು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ತಮ್ಮ ಉಪನ್ಯಾಸದಲ್ಲಿ ಸುವರ್ಣ ನ್ಯೂಸ್‌ ʼಕರೆಂಟ್‌ ಅಫೇರ್ಸ್‌ʼ ಕಾರ್ಯಕ್ರಮದ ಸಂಪಾದಕ ಜಯಪ್ರಕಾಶ ಶೆಟ್ಟಿ ಉಪ್ಪಳ, ತಾವೊಬ್ಬ ತುಳುವ ಎನ್ನಲು ಹೆಮ್ಮೆ, ಎಂದರು. “ತುಳುನಾಡಿನಲ್ಲಿ ಹೆಣ್ಣು, ದೈವ, ದೇವರಿಗೆ ನೀಡುವ ಗೌರವವನ್ನು ಎಲ್ಲಿಯೂ ನೋಡಲು ಸಾಧ್ಯವಿಲ್ಲ ಮತ್ತು ಇಲ್ಲಿನ ಆಚರಣೆಗಳು ವಿಶೇಷ ಪ್ರಭಾವವನ್ನು ಹೊಂದಿವೆ,” ಎಂದ ಅವರು, ರಾಣಿ ಅಬ್ಬಕ್ಕನ ಸಾಹಸಗಾಥೆಯನ್ನು ನೆ‌ನಪಿಸಿಕೊಂಡರು, ಮಾಧ್ಯಮ ಕ್ಷೇತ್ರದಲ್ಲಿನ ತಮ್ಮ ಕೆಲವು ಅಪರೂಪದ ಅನುಭವಗಳನ್ನು ಹಂಚಿಕೊಂಡರು.

ಮಂಗಳೂರು: ಪದವಿನಂಗಡಿ ಜಂಕ್ಷನ್ ಬಳಿ ಎರಡು ಬೈಕ್ ನಡುವೆ ಅಪಘಾತ | ಓರ್ವ ಸವಾರ ಮೃತ್ಯು!

ಧರ್ಮಸ್ಥಳ ತುಳು ಪೀಠ ಹಾಗೂ  ಮಂಗಳೂರು ವಿಶ್ವವಿದ್ಯಾಲಯದ ಸಂಧ್ಯಾ ಕಾಲೇಜಿನ ತುಳು ಎಂ.ಎ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಮಾಧವ ಎಂ.ಕೆ, ಸರಣಿ ಉಪನ್ಯಾಸದ ರೂಪುರೇಷೆಯನ್ನು ವಿವರಿಸಿದರು. ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರ, ವೈಶಿಷ್ಟ್ಯಗಳನ್ನು ಮೇಧಾವಿ ವಾಗ್ಮಿಗಳ ಮೂಲಕ ಈ ಸರಣಿಯಲ್ಲಿ ಉಪನ್ಯಾಸದ ಮೂಲಕ ಹಂಚಿಕೊಂಡಿದ್ದೇವೆ ಎಂದರು. ಸಾಂಕ್ರಾಮಿಕದ ಸಮಯದಲ್ಲೂ ಒಂದು ವಾರವೂ ತಪ್ಪದೇ ನಡೆದ ಕಾರ್ಯಕ್ರಮದ ಯಶಸ್ಸಿಗೆ ಬಾಧ್ಯರಾದವರನ್ನು ಕೃತಜ್ಞತೆಯಿಂದ ನೆನಪಿಸಿಕೊಂಡರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಡಾ. ಡಿ ವೀರೇಂದ್ರ ಹೆಗ್ಗಡೆಯವರ ಶುಭಸಂದೇಶವನ್ನು ಪ್ರವೀಣ್‌ ಅಮ್ಮೆಂಬಳ ವಾಚಿಸಿದರು. ನಟ, ನಿರೂಪಕ ಕೀರ್ತಿ ಕುಮಾರ್‌ (ಕಿರಿಕ್‌ ಕೀರ್ತಿ) ತುಳುವಿನಲ್ಲೆ ಕಾರ್ಯಕ್ರಮಕ್ಕೆ ಶುಭಾಶಯ ಸಂದೇಶವನ್ನು ಕಳುಹಿಸಿದ್ದರು. ವಿಶ್ವವಿದ್ಯಾನಿಲಯ  ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ.ಸುಭಾಷಿಣಿ ಶ್ರೀವತ್ಸ ಸುವರ್ಣ ತಮ್ಮ ಸಂಭ್ರಮವನ್ನು ಹಂಚಿಕೊಂಡರು. ಸರಣಿ ಉಪನ್ಯಾಸದ ವೇಳೆ ತಾಂತ್ರಿಕ ನಿರ್ವಹಣೆ ಮಾಡಿದ್ದ ಎಸ್‌.ಡಿ.ಎಂ ಕಾಲೇಜಿನ ಕಂಪ್ಯೂಟರ್‌ ಉಪನ್ಯಾಸಕ ಸತೀಶ್ ಚಂದ್ರ, ತಾಂತ್ರಿಕ ಸಂಯೋಜಕರಾಗಿದ್ದ  ಶ್ರುತಿ ಅಮೀನ್ ಮತ್ತು ಕೀರ್ತನಾ.ಬಿ. ಇವರಿಗೆ ವಂದನೆ ಸಲ್ಲಿಸಲಾಯಿತು.

ವಿವಿಧ ಕ್ಷೇತ್ರದ ಖ್ಯಾತನಾಮರು, ಪ್ರಾಧ್ಯಾಪಕರು, ಸಂಶೋಧಕರು, ತುಳು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಜಯಲಕ್ಷ್ಮೀ ಕಟೀಲು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here