ತೃಣವೇ ಪರ್ವತವಲ್ಲವೇ…?

1
251
Tap to know MORE!

ಸಹಾಯವೆಂಬುದು ಅಗತ್ಯವಿದ್ದಾಗ ಒದಗಿದರೆ ಅದು ಎಲ್ಲದಕ್ಕಿಂತ ದೊಡ್ಡದು. ಕಷ್ಟಕಾಲದಲ್ಲಿ ದೊರೆಯುವ ಸಹಾಯವು ಅದು ಅತ್ಯಂತ ಶ್ರೇಷ್ಠವಾದುದು. ಆ ಸಹಾಯವು ದೊಡ್ಡದಾಗಿರಲಿ ಅಥವಾ ಚಿಕ್ಕ ಪ್ರಮಾಣದಾಗಿರಲಿ ಅದು ಸಹಾಯವೇ ಆಗಿರುತ್ತದೆ. ಆಪತ್ಕಾಲದಲ್ಲಿ ಆದ ಸಹಾಯಕ್ಕೆ ಪ್ರಮಾಣ ಮುಖ್ಯವಲ್ಲ. ಅಂದರೆ ಕಷ್ಟಕಾಲದಲ್ಲಿ ಮಾಡಿದಂತಹ ಸಹಾಯವು ಒಂದು ಹುಲ್ಲು ಕಡ್ಡಿಯಷ್ಟಾದರೂ ಕೂಡ ಅದು ಪರ್ವತದಷ್ಟು ದೊಡ್ಡದೇ ಆಗಿರುತ್ತದೆ.
‌‌
ಯಾರಿಗಾದರೂ ‌‌‌ತಿನ್ನಲು ಸರಿಯಾಗಿ ಆಹಾರವಿಲ್ಲದೆಯೋ,ವಾಸಿಸಲು ಮನೆಯಿಲ್ಲದೆ,ಬದುಕಲು ಬೇಕಾದ ಅಗತ್ಯಾಂಶಗಳು ಇಲ್ಲದೆ ಹೋದಾಗ ಅವರ ಬಳಲುವಿಕೆಯನ್ನು ನೋಡಿ ತಿರಸ್ಕಾರದ ನಗು ಬೀರುತ್ತಾರೆಯೇ ಹೊರತು ಅವರ ಬಳಿ ಯಾರೂ ಕೂಡ ಸಹಾಯ ಮಾಡಲು ಬರುವುದಿಲ್ಲ. ಬಂದರೂ ಕೂಡ ಬೆರಳೆಣಿಕೆಯ ಜನರಷ್ಟೇ. ಆದರೆ ಆ ಕಷ್ಟದ ಕಾಲದಲ್ಲಿಯೂ ಬಂದು ನೆರವಾದ ಆ ಜನಗಳನ್ನು,ಮೇಲೆತ್ತಿದ ಆ ಮನಗಳನ್ನು ಇಲ್ಲವೇ ಸಂಘ ಸಂಸ್ಥೆಗಳನ್ನು ಮರೆಯಬಾರದು.ಏಕೆಂದರೆ ಯಾರೂ ಇಲ್ಲದ ಆ ಸಮಯದಲ್ಲಿ ನೆರವಾದವರೇ ಪರಮ ಬಂಧುಗಳು.

ಇನ್ನೊಬ್ಬರ ಸ್ಥಿತಿಯನ್ನು ಕಂಡು ಅಸಹ್ಯ ಪಡುವವರು ಒಂದು ಸಲ ಯೋಚಿಸಬೇಕು. ಏನೆಂದರೆ,ಸಿರಿವಂತಿಕೆಯೇ ಆಗಲಿ,ಬಡತನವೇ ಆಗಲಿ ಯಾವುದೂ ಕೂಡ ಸ್ಥಿರವಲ್ಲ. ಯಾರ ಪರಿಸ್ಥಿತಿಯೂ ಯಾವಾಗ ಬೇಕಾದರೂ ಬದಲಾಗಬಹುದು. ನೀವೇ ತಿರಸ್ಕರಿಸಿದ ವ್ಯಕ್ತಿಗಳು ನಾಳೆ ನಿಮ್ಮನ್ನು ಅದೇ ರೀತಿಯಲ್ಲಿ ನೋಡುವ ದಿನಗಳು ಬರಬಹುದು,ಕತ್ತಲು ಕಳೆದು ಬೆಳಕಾಗುವಂತೆ ಯಾರ ಮಟ್ಟವೂ ಯಾವ ಸಂಧರ್ಭದಲ್ಲಿದಲ್ಲಿಯೂ ಬದಲಾಗಬಹುದು,ತಿರುವನ್ನು ಪಡೆಯಬಹುದು.

ಕಾಲವೆಂಬುದು ಯಾರನ್ನೂ ಬಿಡುವುದಿಲ್ಲ.ನಾವೆಲ್ಲಾ ಕಾಲನ‌ ಕೈಗೊಂಬೆಗಳಷ್ಟೆ.ಐಷಾರಾಮಿ ಜೀವನ ನಡೆಸುತ್ತಿದ್ದವರೂ ಬದುಕಲು‌ ನೆಲೆ ಇಲ್ಲದೆ ದೇಶಾಂತರ ಪಲಾಯನ ಮಾಡಿದ್ದನ್ನು ಕಾಣಬಹುದು.ಹೊಟ್ಟೆ ಪಾಡಿಗಾಗಿ ಭಿಕ್ಷೆ ಎತ್ತಿ ಜೀವನ ನಡೆಸುತ್ತಿದ್ದವರೂ ಎತ್ತರದ ಮಟ್ಟಕ್ಕೆ ತಲುಪಿರುರುವದನ್ನು ಕಾಣಬಹುದು.
ಇದ್ದಷ್ಟು ದಿನ ಇತರರ ಸುಖದುಃಖದಲ್ಲಿ ಭಾಗಿಗಳಾಗಿ,ಇನ್ನೊಬ್ಬರ ಬಾಳಿಗೆ ಬೆಳಕಾಗೋಣ.ಪರರ ಸುಖದಲ್ಲಿ ಭಾಗಿಯಾಗದಿದ್ದರೂ ಪರವಾಗಿಲ್ಲ,ಕಷ್ಟದಲ್ಲಿ ನೆರವಾಗುವ ಜೀವನ‌ ನಮ್ಮದಾಗಲಿ.

ರಾಜಶ್ರೀ ಜೆ ಪೂಜಾರಿ

1 COMMENT

LEAVE A REPLY

Please enter your comment!
Please enter your name here