‘ದಕ್ಷಿಣದ ಸುಭಾಷ್ ಚಂದ್ರ ಬೋಸ್’ ಅಲ್ಲೂರಿ ಸೀತಾರಾಮರಾಜು

0
268
Tap to know MORE!

ಈ ಹೆಸರನ್ನು ಹೆಚ್ಚಿನವರು ಕೇಳಿರಲಿಕ್ಕಿಲ್ಲ. ಆಂಧ್ರಪ್ರದೇಶದ ಗೋದಾವರಿ ನದಿಯ ಪಶ್ಚಿಮಕ್ಕಿರುವ ಮೋಗಲ್ಲು ಗ್ರಾಮದಲ್ಲಿ 1897 ನೇ ಇಸವಿಯ ಜುಲೈ 4 ರಂದು ನಾರಾಯಣಮ್ಮ ಮತ್ತು ವೆಂಕಟರಾಮರಾಜು ದಂಪತಿಯ ಮಗನಾಗಿ ಜನಿಸಿದ ರಾಮರಾಜು ಮುಂದೆ ವಿಖ್ಯಾತರಾದದ್ದು ಮಾತ್ರ ಅಲ್ಲೂರಿ ಸೀತಾರಾಮರಾಜು ಎಂದೇ.

ತಂದೆ ವೆಂಕಟರಾಮರಾಜು ವೃತ್ತಿಯಲ್ಲಿ ಫೋಟೋಗ್ರಾಫರ್‌, ಮಹಾನ್ ದೇಶಭಕ್ತ. ದೇಶದ ಮಹಾನ್ ನಾಯಕರ ಸುಂದರ ವರ್ಣಚಿತ್ರಗಳನ್ನು ರಚಿಸಿ ಮನೆಯಲ್ಲಿ ತೂಗು ಹಾಕಿದ್ದರು. ಶ್ರೀರಾಮ, ಶ್ರೀಕೃಷ್ಣ, ಹನುಮಂತ, ಪ್ರಹ್ಲಾದ, ದ್ರುವ, ರಾಣಾ ಪ್ರತಾಪ, ರಾಣಿ ರುದ್ರಮ್ಮ ಮುಂತಾದವರ ಚಿತ್ರಗಳು ಗೋಡೆಗಳನ್ನು ಅಲಂಕರಿಸಿದ್ದವು. ಕುಳಿತರೆ, ಎದ್ದರೆ, ಮಲಗಿದರೆ ಈ ಚಿತ್ರಗಳೇ ಸದಾ ಕಣ್ಣಿಗೆ ಕಾಣುತ್ತಿದ್ದವು. ರಾಮರಾಜು ಬೆಳೆದಿದ್ದು ಇಂತಹ ವಾತಾವರಣದಲ್ಲಿ !

ರಾಮರಾಜು ಮೋಗಲ್ಲುವಿನಲ್ಲಿ ಆರಂಭದ ಕೆಲವು ವರ್ಷಗಳನ್ನು ಕಳೆದರು. ಬಳಿಕ ಅವರ ಕುಟುಂಬ ರಾಜಮಂಡ್ರಿಗೆ ಹೋಯಿತು. ಇದೇ ಸಮಯದಲ್ಲಿ ತಂದೆ ವೆಂಕಟರಾಮರಾಜು ತೀರಿಕೊಂಡರು. ಅಂದಿನಿಂದ ರಾಮರಾಜು ಬೆಳೆದಿದ್ದು ನರಸಾಪುರದ ಅವರ ಚಿಕ್ಕಪ್ಪನ ಮನೆಯಲ್ಲಿ. “ಟೈಲರ್ ಸ್ಕೂಲ್” ಎಂಬ ಶಾಲೆಯಲ್ಲಿ ಓದು ಮುಂದುವರೆಯಿತು. ಆದರೆ ಆತನ ಸ್ವತಂತ್ರ ಪ್ರವೃತ್ತಿಗೂ ಚಿಕ್ಕಪ್ಪನ ಸ್ವಭಾವಕ್ಕೂ ಸರಿಹೊಂದುತ್ತಲೇ ಇರಲಿಲ್ಲ. ಕೊನೆಗೊಂದು ದಿನ ಈರ್ವರ ಮಾತಿನ ಚಕಮಕಿ ಅತಿರೇಕಕ್ಕೆ ತಿರುಗಿ ರಾಮರಾಜು ಮನೆಯನ್ನೇ ತೊರೆದುಬಿಟ್ಟರು. ಕಾಕಿನಾಡ ಎಂಬ ಊರಿಗೆ ಹೋಗಿ ಒಂದು ಶಾಲೆ ಸೇರಿಕೊಂಡರು. ಊಟ ವಸತಿಗೆ ಒಂದು ಛತ್ರ ಆಸರೆಯಾಯಿತು.

ಒಂದು ದಿನ ರಾಮರಾಜು ಕಾಕಿನಾಡ ಸಮುದ್ರ ತೀರದಲ್ಲಿ ವಿಹರಿಸುತ್ತಿದ್ದರು .ಅಲ್ಲಿಯೇ ವಾಸಿಸುತ್ತಿದ್ದ ಕೆಲ ಆಂಗ್ಲರ ಮಕ್ಕಳು ಕಪಿಚೇಷ್ಟೆ ಮಾಡಲಾರಂಭಿಸಿದರು. ಅವರ ಅಹಂಕಾರ ಅತಿಯಾದಾಗ ರಾಮರಾಜುವಿನ ನೆತ್ತರು ಕುದಿಯಲಾರಂಭಿಸಿತು! ಅಪ್ಪ ಹೇಳುತ್ತಿದ್ದ ದೇಶ ಪ್ರೇಮದ ಕಥೆ ನೆನಪಾಯಿತು. ಕೂಡಲೇ ರಾಮರಾಜು ಓಡಿಹೋಗುತ್ತಿದ್ದ ಹುಡುಗನನ್ನು ಅಟ್ಟಿಸಿಕೊಂಡು ಹೋಗಿ ಆತನ ಕುತ್ತಿಗೆ ಪಟ್ಟಿ ಹಿಡಿದು ಚೆನ್ನಾಗಿ ಬಾರಿಸಿದರು. ಆದರೆ ಆ ಆಂಗ್ಲ ಹುಡುಗನ ತಂದೆ ರಾಮರಾಜುವಿನ ಶಾಲೆಗೆ ದೂರು ಕೊಟ್ಟುಬಿಟ್ಟ. ದೇಶೀಯನೊಬ್ಬ ಆಂಗ್ಲ ಹುಡುಗನನ್ನು ಅವಮಾನಿಸುವುದೆಂದರೇನು? ರಾಮರಾಜುವನ್ನು ಶಾಲೆಯಿಂದ ಹೊರದಬ್ಬಲು ಬೇರೆ ಕಾರಣ ಬೇಕಿರಲಿಲ್ಲ!

ಅಲ್ಲಿಂದ ಹೊರಟ ರಾಮರಾಜು ತುನಿ ಎಂಬ ಹಳ್ಳಿಗೆ ಬಂದು ಅಲ್ಲಿ ಒಂದು ಸಂಸ್ಕ್ರತ ಪಾಠಶಾಲೆಗೆ ಸೇರಿದರು. ತುನಿಯ ಆಸುಪಾಸಿನ ಬೆಟ್ಟಗುಡ್ಡ, ಕಾಡು ಮೇಡುಗಳಲ್ಲಿ ವಾಸಿಸುತ್ತಿದ್ದ ವನವಾಸಿಗಳ ದಾರುಣ ಜೀವನದ ಪರಿಚಯವಾಯಿತು. ಬಳಿಕ ವಿಶಾಖ ಪಟ್ಟಣದಲ್ಲಿ ಕ್ರಾಂತಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದ ರಾಮರಾಜು ತನ್ನ ಹದಿನೇಳನೆ ವರ್ಷಕ್ಕೆ ವಿದ್ಯಾಭ್ಯಾಸ ನಿಲ್ಲಿಸಿಬಿಟ್ಟರು. ಮುಂದೇನು ಎಂಬ ಗೊಂದಲದಲ್ಲಿ ಇಡೀ ಭಾರತದ ದರ್ಶನ ಪಡೆಯಲು ನಿಶ್ಚಯಿಸಿ ಪ್ರಯಾಣ ಆರಂಭಿಸಿದರು. ಆಗ ಬಂಗಾಳ, ಪಂಜಾಬಿನಲ್ಲಿ ಕ್ರಾಂತಿಕಾರಿ ಚಟುವಟಿಕೆ ತೀವ್ರವಾಗಿತ್ತು. ರಾಮರಾಜುವಿಗೂ ಪಂಜಾಬಿನ ಅನೇಕ ಕ್ರಾಂತಿಕಾರಿ ನಾಯಕರ ಗೆಳೆತನವಾಯಿತು. ಆಂಧ್ರದಲ್ಲಿ ಸಶಸ್ತ್ರ ಹೋರಾಟದಿಂದ ಆಂಗ್ಲರನ್ನು ಎದುರಿಸಲು ಅದೇ ಸ್ಪೂರ್ತಿಯಾಯಿತು. ದೇಶ ಪರ್ಯಟನೆ ಮುಗಿಸಿ ಬರುವಷ್ಟರಲ್ಲಿ ಅವರಲ್ಲಿ ಬಹಳ ಬದಲಾವಣೆಯಾಗಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕೆಂಬ ಇಚ್ಛೆ ಪ್ರಬಲವಾಗಿತ್ತು. ತಾನು ಸನ್ಯಾಸಾಶ್ರಮ ಸ್ವೀಕರಿಸಿ ಜೀವನವನ್ನು ದೇಶಸೇವೆ, ಜನಸೇವೆಗಳಲ್ಲಿ ತೊಡಗಿಸುವ ಪ್ರತಿಜ್ಞೆ ಮಾಡಿದರು.

ದೇಶ ಪರ್ಯಟನೆಯಿಂದ ವಾಪಸ್ಸು ಬಂದ ರಾಮರಾಜು ವನವಾಸಿಗಳಾದ ಕೋಯರು, ಚೆಂಚು ಜನಾಂಗದವರನೆಲ್ಲ ಒಟ್ಟು ಸೇರಿಸಿ ಅವರಲ್ಲಿದ್ದ ಅಮಾನುಷ ಪದ್ದತಿಗಳನ್ನು ಮೃದು ಮಾತುಗಳಿಂದಲೇ ಹೋಗಲಾಡಿಸಿದರು. ಅವರಲ್ಲಿ ದೇಶಭಕ್ತಿಯನ್ನು ತುಂಬಿ ಬ್ರಿಟಿಷ್ ಸರ್ಕಾರದ ವಿರುದ್ಧ ದಂಗೆಯೆದ್ದರು. ಬ್ರಿಟಿಷರ ತುಪಾಕಿ ಮದ್ದು ಗುಂಡುಗಳ ಮುಂದೆ ಆದಿವಾಸಿಗಳ ಬಿಲ್ಲು, ಬಾಣ, ಬಾಲೆ ಮತ್ತು ಕತ್ತಿಗಳು ಕೆಲಸಕ್ಕೆ ಬಾರವು ಎಂದರಿತ ರಾಮರಾಜು ತನ್ನ ಗ್ರಾಮದ ಪೊಲೀಸ್ ಠಾಣೆಗಳಿಗೆ ದಾಳಿ ಮಾಡಿ ಅಲ್ಲಿದ್ದ ಬಂದೂಕುಗಳನ್ನು ದೋಚಿ ಬ್ರಿಟಿಷ್ ಸರ್ಕಾರದ ವಿರುದ್ಧ ಹೊರಾಡಲು ಸಜ್ಜಾದರು. ಅಲ್ಲಲ್ಲಿ ಬ್ರಿಟಿಷರ ಸೇನಾನೆಲೆಗಳ ಮೇಲೆ ದಾಳಿ ಮಾಡಿ ಅವರಲ್ಲಿದ್ದ ಶಸ್ತ್ರಾಸ್ತ್ರಗಳನ್ನು ದೋಚಿದರು.

ಇದರಿಂದ ಕಂಗೆಟ್ಟ ಬ್ರಿಟಿಷರು ಅಸ್ಸಾಂ ರೈಫಲ್ಸ್ ಪಡೆಯನ್ನು ಕರೆಸಿಕೊಂಡರು. ಕೆಲವು ಆದಿವಾಸಿಗಳನ್ನು ಬಂಧಿಸಿ ಹಿಂಸಿಸಲಾರಂಭಿಸಿದರು. ಅವರ ಬಿಡುಗಡೆಗಾಗಿ ರಾಮರಾಜುವನ್ನು ರಾಜಿ ಒಪ್ಪಂದಕ್ಕೆಂದು ಕರೆದು ನಿರಾಯುಧರಾಗಿ ಬಂದಿದ್ದ ರಾಮರಾಜುವನ್ನು ಮರಕ್ಕೆ ಕಟ್ಟಿಹಾಕಿ ಅಮಾನುಷವಾಗಿ ಕೊಂದರು. “ವಂದೇ ಮಾತರಂ”… ರಾಮರಾಜು ಕೊನೆಯ ಸಲ ತನ್ನ ಮಾತೃಭೂಮಿಗೆ ವಂದಿಸಿ‍ದರು. ಕೃಷ್ಣಾದೇವಿ ಪೇಟೆಯ ಬಳಿಯೇ 1924ರ ಮೇ 7ರಂದು ರಾಮರಾಜುವಿನ ಅಂತ್ಯಸಂಸ್ಕಾರವಾಯಿತು. ಆದಿವಾಸಿ, ಗುಡ್ಡಗಾಡು ಜನರ ಹಕ್ಕಿಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಅವರ ನೆನಪಿಗೆ ಈಗಲೂ ಅಲ್ಲೊಂದು ಸಮಾಧಿಯಿದೆ.

‘ಮಾನ್ಯಂ ವೀರುಡುʼ (ಕೆಚ್ಚೆದೆಯ ಹೋರಾಟಗಾರ) ಎಂದು ಕರೆಸಿಕೊಳ್ಳುವ ಸೀತಾರಾಮರಾಜುರನ್ನು ದಕ್ಷಿಣದ ಸುಭಾಷ್ ಚಂದ್ರ ಬೋಸ್ ಎಂದೂ ಕರೆಯಲಾಗುತ್ತದೆ. “ಅಲ್ಲೂರಿ ಸೀತಾರಾಮರಾಜುವಿನ ಧೈರ್ಯ, ಸಾಹಸಗಳು ಎಲ್ಲಾ ಕಾಲಕ್ಕೂ ಆದರ್ಶ” ಎಂದರು ಮಹಾತ್ಮ ಗಾಂಧಿಜೀ. ರಾಮರಾಜುವಿನ ಬಲಿದಾನ, ಆತನ ಅಮಾಯಕ ವನವಾಸಿ ಸಹೋದರ-ಸಹೋದರಿಯರ ತ್ಯಾಗ, ಪರಾಕ್ರಮಗಳು ವ್ಯರ್ಥವಾಗಲಿಲ್ಲ. ಅವರೆಲ್ಲರ ಆ ಪ್ರಬಲ ಹೊಡೆತಗಳ ಪರಿಣಾಮವಾಗಿ ಕೊನೆಗೂ ಆಂಗ್ಲರು ಭಾರತದಿಂದ ತೊಲಗಲೇಬೇಕಾಯಿತು. ತಾಯಿ ಭಾರತಿ ಬಂಧಮುಕ್ತೆಯಾದಳು.

ಸ್ವಾತಂತ್ರ್ಯಾನಂತರ ಆಂಧ್ರ ಸರ್ಕಾರ, ಒಡಿಶಾ, ಮಧ್ಯಪ್ರದೇಶ (ಇಂದಿನ ಛತ್ತೀಸ್‌ಗಡ್), ಮಹಾರಾಷ್ಟ್ರ ರಾಜ್ಯಗಳ ಗಡಿಗೆ ಹೊಂದಿಕೊಂಡಂತೆ ಇರುವ ಅರಣ್ಯ ಪ್ರದೇಶಕ್ಕೆ ʼಅಲ್ಲೂರಿ ಸೀತಾರಾಮರಾಜು ಅರಣ್ಯ ವಲಯʼ ಎಂದು ಘೋಷಿಸಿ ಗೌರವಿಸಿದೆ. ವಿಶಾಖಪಟ್ಟಣ ನಗರದ ಕಡಲ ತಡಿಯ ರಸ್ತೆಗೆ (ಬೀಚ್ ರೋಡ್) ಸೀತಾರಾಮರಾಜು ಅವರ ಹೆಸರಿಟ್ಟು, ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಭಾರತ ಸರ್ಕಾರ 1997ರಲ್ಲಿ ಅವರ ಜನ್ಮಶತಾಬ್ಧಿಯ ಅಂಗವಾಗಿ ಅಂಚೆ ಚೀಟಿಯನ್ನು ಹೊರತಂದಿತ್ತು.

LEAVE A REPLY

Please enter your comment!
Please enter your name here