ನವದೆಹಲಿ : ಕಿರಾಣಿ ಅಂಗಡಿ ಕಾರ್ಮಿಕರು, ತರಕಾರಿ ಮತ್ತು ಇತರ ಮಾರಾಟಗಾರರನ್ನು ಕೊರೋನವೈರಸ್ ಪರೀಕ್ಷೆಯಗೆ ಒಳಪಡಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕೇಳಿದೆ. ಒಂದು ವೇಳೆ ಅವರಲ್ಲಿ ಸೋಂಕು ಪತ್ತೆಯಾದರೆ, ಅವರಿಂದಾಗಿ ಇನ್ನೂ ಹೆಚ್ಚಿನ ಸಂಖ್ಯೆಯ ಜನರಿಗೆ ಸೋಂಕು ಹರಡಬಹುದು ಎಂದು ಹೇಳಿದ್ದಾರೆ.
ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದ ಪತ್ರದಲ್ಲಿ, ಆಂಬ್ಯುಲೆನ್ಸ್ ವ್ಯವಸ್ಥೆಯ ಮಹತ್ವ ಮತ್ತು ಅವುಗಳಲ್ಲಿ ಆಮ್ಲಜನಕ ಸೌಲಭ್ಯವನ್ನು ಕಾರ್ಯಗತಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದರು.
ಕೋವಿಡ್-19 ಸಾಂಕ್ರಾಮಿಕವು ಈಗ ದೇಶದ ಹೊಸ ಪ್ರದೇಶಗಳಿಗೆ ಹರಡುತ್ತಿರುವುದರಿಂದ ಮತ್ತು ಪ್ರಮುಖವಾಗಿ ಗ್ರಾಮಗಳಲ್ಲಿ ಚದುರಿದ ಪರಿಣಾಮ, ಸೋಂಕಿತರ ಸಂಖ್ಯೆಯು ದೊಡ್ಡ ಮಟ್ಟದಲ್ಲಿ ಅಥವಾ ಏಕಾಏಕಿ ಏರಿಕೆ ಆಗುವ ಸಾಧ್ಯತೆಯಿದೆ. ಹೊಸ ಸ್ಥಳಗಳಲ್ಲಿ ರೋಗಗಳನ್ನು ನಿಯಂತ್ರಿಸುವುದು ನಮ್ಮ ಪ್ರಾಥಮಿಕ ಗುರಿಯಾಗಬೇಕು ಎಂದು ಭೂಷಣ್ ಹೇಳಿದರು.