ಕ್ಲೈಮ್ಯಾಕ್ಸ್ ಬದಲಾವಣೆಯೊಂದಿಗೆ ಥಿಯೇಟರ್‌ನಲ್ಲಿ ಪ್ರದರ್ಶನ ಕಾಣಲಿದೆ “ದಿಯಾ” ಸಿನೆಮಾ..!

0
186
Tap to know MORE!

ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಸರ್ಕಾರದಿಂದ ಅನುಮತಿ ಸಿಗುತ್ತಿದ್ದಂತೆಯೇ ಸ್ಯಾಂಡಲ್‌ವುಡ್‌ನ ಹಲವು ಸೂಪರ್‌ ಹಿಟ್‌ ಸಿನಿಮಾಗಳು ಮರು ಬಿಡುಗಡೆ ಆಗುತ್ತಿವೆ. ಆ ಸಾಲಿನಲ್ಲಿ ‘ದಿಯಾ’ ಕೂಡ ಇದೆ. ಈಗಾಗಲೇ ಈ ಚಿತ್ರವನ್ನು ನೋಡಿರುವವರು ಮತ್ತೆ ಥಿಯೇಟರ್‌ಗೆ ಬಂದು ಸಿನಿಮಾ ನೋಡಲು ಈಗೊಂದು ಹೊಸ ಕಾರಣ ಸಿಕ್ಕಿದೆ. ಅದೇನೆಂದರೆ, ‘ದಿಯಾ’ ಕ್ಲೈಮ್ಯಾಕ್ಸ್‌ ಬದಲಾಗಿದೆ!

ತ್ರಿಕೋನ ಪ್ರೇಮಕಥೆಯುಳ್ಳ ಈ ಸಿನಿಮಾದಲ್ಲಿ ನಟಿ ಖುಷಿ ರವಿ ಮುಖ್ಯ ಪಾತ್ರ ಮಾಡಿದ್ದರು. ಅವರನ್ನು ಪ್ರೀತಿಸುವ ಇಬ್ಬರು ಪ್ರೇಮಿಗಳ ಪಾತ್ರವನ್ನು ಪೃಥ್ವಿ ಅಂಬರ್‌ ಮತ್ತು ದೀಕ್ಷಿತ್ ಶೆಟ್ಟಿ ನಿಭಾಯಿಸಿದ್ದರು. ಅಂತಿಮವಾಗಿ ಇಬ್ಬರಲ್ಲಿ ಒಬ್ಬ ಪ್ರೇಮಿ ಸಾಯುವ ಮೂಲಕ ಕಥೆ ಅಂತ್ಯವಾಗಿತ್ತು. ಈ ಬಗ್ಗೆ ಕೆಲ ಪ್ರೇಕ್ಷಕರು ಬೇಸರ ಮಾಡಿಕೊಂಡಿದ್ದರು ಕೂಡ. ಈಗ ಆ ಕಥೆಯೇ ಬದಲಾಗಿದೆ ಎಂಬ ವಿಷಯ ಕೇಳಿಬಂದಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಅ.16ರಂದು ‘ದಿಯಾ’ ರೀ-ರಿಲೀಸ್‌ ಆಗಬೇಕಿತ್ತು. ಆದರೆ ಕ್ಲೈಮ್ಯಾಕ್ಸ್‌ ಬದಲಾವಣೆ ಮಾಡಿದ ಕಾರಣಕ್ಕಾಗಿ ಚಿತ್ರವನ್ನು ಮತ್ತೆ ಸೆನ್ಸಾರ್‌ ಮಾಡಿಸುವ ಅಗತ್ಯ ಎದುರಾಗಿದೆ. ಆ ಎಲ್ಲ ಕೆಲಸಗಳನ್ನು ಮುಗಿಸಿ, ನಂತರ ಕ್ಯೂಬ್‌ಗೆ ಅಪ್‌ಲೋಡ್‌ ಮಾಡಿ ತೆರೆಕಾಣಿಸುವುದಕ್ಕೆ ಕೊಂಚ ಸಮಯ ಹಿಡಿಯುತ್ತಿದೆ. ಹಾಗಾಗಿ ಅ.16ರ ಬದಲಿಗೆ ಅ.23ರಂದು ‘ದಿಯಾ’ ಹೊಸ ಅವತಾರದಲ್ಲಿ ಮರುಬಿಡುಗಡೆ ಆಗಲಿದೆ.

ಕ್ಲೈಮ್ಯಾಕ್ಸ್‌ ಬದಲಾವಣೆ ಜೊತೆಗೆ ಮತ್ತೊಂದು ಸರ್ಪ್ರೈಸ್‌ ಕೂಡ ಕಾದಿದೆ. ಈ ಸಿನಿಮಾ ಬಿಡುಗಡೆ ನಂತರ ಸೂಪರ್‌ ಹಿಟ್‌ ಆದ ‘soul of dia’ ಹಾಡನ್ನು ಹೊಸದಾಗಿ ಸೇರಿಸಲಾಗಿದೆ. ಈ ಮೊದಲು ಚಿತ್ರ ತೆರೆಕಂಡಾಗ ಅದರಲ್ಲಿ ಈ ಹಾಡು ಇರಲಿಲ್ಲ. ಸಂಜಿತ್‌ ಹೆಗಡೆ ಮತ್ತು ಚಿನ್ಮಯಿ ಶ್ರೀಪಾದ್‌ ಅವರ ಕಂಠದಲ್ಲಿ ಮೂಡಿಬಂದಿರುವ ಈ ಗೀತೆಯಿಂದಾಗಿ ‘ದಿಯಾ’ ಮರುಬಿಡುಗಡೆಗೆ ಹೊಸ ಮೈಲೇಜ್‌ ಸಿಗಲಿದೆ. ಈ ಎಲ್ಲ ಕಾರಣಗಳಿಗಾಗಿ ಚಿತ್ರಮಂದಿರಗಳಲ್ಲಿ ಮತ್ತೊಮ್ಮೆ ಈ ಸಿನಿಮಾವನ್ನು ನೋಡಲು ಕಾದಿದ್ದಾರೆ ಚಿತ್ರಪ್ರೇಮಿಗಳು.

LEAVE A REPLY

Please enter your comment!
Please enter your name here