ವೇಗವಾಗಿ ಹರಡುತ್ತಿರುವ ಕೊರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳ ಪೈಕಿ ದೆಹಲಿಯೂ ಒಂದು. ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ -19 ಪ್ರಕರಣಗಳು ಭಾರಿ ಉಲ್ಬಣವನ್ನು ಕಾಣುತ್ತಿದೆ. ಈ ನಿಟ್ಟಿನಲ್ಲಿ ದೆಹಲಿ ಸರ್ಕಾರವು ಸಾಂಕ್ರಾಮಿಕ ರೋಗದ ವಿರುದ್ಧ ಮತ್ತಷ್ಟು ಪೂರ್ವ ತಯಾರಿಯಿಂದ ಹೋರಾಡಲು ಹೊರಟಿದೆ.
ರೋಗದ ಮತ್ತಷ್ಟು ಹರಡುವಿಕೆಯನ್ನು ಯಶಸ್ವಿಯಾಗಿ ತಡೆದು, ಅದನ್ನು ಎದುರಿಸಲು, ಆಪ್ ಸರ್ಕಾರವು ದಕ್ಷಿಣ ದೆಹಲಿಯ ರಾಧಾ ಸೋಮಿ ಆಧ್ಯಾತ್ಮಿಕ ಕೇಂದ್ರವನ್ನು ವಿಶ್ವದ ಅತಿದೊಡ್ಡ ಕೋವಿಡ್ -19 ಆರೈಕೆ ಸೌಲಭ್ಯವನ್ನಾಗಿ ಪರಿವರ್ತಿಸುವ ಮೂಲಕ ಹಾಸಿಗೆಗಳ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಾರಂಭಿಸಿದೆ.
ವರದಿಗಳ ಪ್ರಕಾರ, ಈ ಆರೈಕೆ ಸೌಲಭ್ಯವು 22 ಕ್ಕೂ ಹೆಚ್ಚು ಫುಟ್ಬಾಲ್ ಮೈದಾನಗಳಷ್ಟು (12,50,000 ಚದರ ಅಡಿಗಳಿಗಿಂತ ಹೆಚ್ಚು) ದೊಡ್ಡದಾಗಿರಲಿದೆ ಮತ್ತು 200 ಕ್ಕೂ ಹೆಚ್ಚು ಸಭಾಂಗಣಗಳು ಮತ್ತು 10,000 ಹಾಸಿಗೆಗಳನ್ನು ಹೊಂದಿರುತ್ತದೆ. ಸೌಲಭ್ಯದ ಒಂದು ಬದಿಯಲ್ಲಿ ವೈದ್ಯರಿಗೆ ವಸತಿ ವ್ಯವಸ್ಥೆ ಕೂಡ ಇರುತ್ತದೆ.
ಈ ಸೌಲಭ್ಯದ ಮತ್ತೊಂದು ವಿಶೇಷ ಲಕ್ಷಣವೆಂದರೆ ಅದರಲ್ಲಿ ಬಳಸಲಾಗುವ ಸುಕ್ಕುಗಟ್ಟಿದ ರಟ್ಟಿನ ಹಾಸಿಗೆಗಳು, ಮರುಬಳಕೆ ಮಾಡಲು ಯೋಗ್ಯವಾಗಿರುತ್ತದೆ.
ಧವನ್ ಬಾಕ್ಸ್ ಶೀಟ್ ಕಂಟೇನರ್ಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರಾಗಿರುವ ವಿಕ್ರಮ್ ಧವನ್, “ನಾವು ಸರಬರಾಜು ಮಾಡಲಿರುವ ರಟ್ಟಿನ ಹಾಸಿಗೆಗಳನ್ನು ಸ್ವಚ್ಛಗೊಳಿಸುವ ಅಗತ್ಯವಿಲ್ಲ. ಏಕೆಂದರೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕಾರ್ಡ್ಬೋರ್ಡ್ನಲ್ಲಿ 24 ಗಂಟೆಗಳಿಗಿಂತ ಹೆಚ್ಚು ಕಾಲ ವೈರಸ್ ಉಳಿಯುವುದಿಲ್ಲ. ಲೋಹ, ಪ್ಲಾಸ್ಟಿಕ್ ಮತ್ತು ಮರದ ಮೇಲೆ ಇರುವಾಗ, ಇದು ಹೆಚ್ಚೆಂದರೆ ಐದು ದಿನಗಳವರೆಗೆ ಉಳಿಯುತ್ತದೆ. ಈ ಹಾಸಿಗೆಗಳು ನಿಜವಾಗಿಯೂ ಹಗುರವಾಗಿರುತ್ತವೆ, ಜೋಡಿಸಲು ಮತ್ತು ಕೆಡವಲು ಸುಲಭ ” ಎಂದು ತಿಳಿಸಿದರು.
ತಲಾ 500 ಹಾಸಿಗೆಗಳನ್ನು ಹೊಂದಿರುವ 20 ಮಿನಿ ಆಸ್ಪತ್ರೆಗಳಂತೆ ಈ ಸೌಲಭ್ಯವು ಕಾರ್ಯನಿರ್ವಹಿಸಲಿದೆ ಎಂದು ದಕ್ಷಿಣ ದೆಹಲಿ ಜಿಲ್ಲಾಧಿಕಾರಿ ಬಿ.ಎಂ.ಮಿಶ್ರಾ ತಿಳಿಸಿದ್ದಾರೆ. ಒಂದು ಸಭಾಂಗಣದಲ್ಲಿ 50 ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದು ಎಂದರು.
“ರೋಗಿಗಳ ಚಿಕಿತ್ಸೆಗಾಗಿ ಜೂನ್ 30 ರೊಳಗೆ ಸಂಕೀರ್ಣವು ಸಂಪೂರ್ಣವಾಗಿ ಸಿದ್ಧವಾಗಲಿದೆ. ಇದನ್ನು ಡೇರೆಗಳಿಂದ ನಿರ್ಮಿಸಲಾಗುತ್ತಿದೆ. ಪ್ರತಿ ಸಭಾಂಗಣದಲ್ಲಿ ಕೂಲರ್ಗಳನ್ನು ಸಹ ಅಳವಡಿಸಲಾಗುವುದು” ಎಂದು ಸತ್ಸಂಗ್ ವ್ಯಾಸ್ಗೆ ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ದೆಹಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿ.ಎಂ.ಮಿಶ್ರಾ ಮಾತನಾಡಿ, ಛತ್ರಪುರ ಸೌಲಭ್ಯದಲ್ಲಿ ಆಂಬ್ಯುಲೆನ್ಸ್ಗಳು ಮತ್ತು ಪರೀಕ್ಷೆಗೆ ತನ್ನದೇ ಆದ ರೋಗಶಾಸ್ತ್ರ ಪ್ರಯೋಗಾಲಯವಿದ್ದು, 400 ವೈದ್ಯರು ಎರಡು ಪಾಳಿಯಲ್ಲಿ ಕೆಲಸ ಮಾಡಲಿದ್ದು, ಅರೆವೈದ್ಯರ ಸಂಖ್ಯೆಯಿಂದಲೂ ದ್ವಿಗುಣ ಬೆಂಬಲವಿದೆ ಎಂದರು.
ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ -19 ಪ್ರಕರಣಗಳ ಹಠಾತ್ ಪ್ರಚೋದನೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ದೆಹಲಿಯಲ್ಲಿ ಒಟ್ಟು 44,688 ಪ್ರಕರಣಗಳಿದ್ದು, 1,837 ಜನರು ಈ ಕಾಯಿಲೆಗೆ ಬಲಿಯಾಗಿದ್ದಾರೆ.