ನವದೆಹಲಿ : ದೇಶಾದ್ಯಂತ ಮೊಹರಂ ಹಬ್ಬದ ಪ್ರಯುಕ್ತ ಮೆರವಣಿಗೆ ನಡೆಸಲು ಅನುಮತಿ ನೀಡಲು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. “ನಾವು ಇದನ್ನು ಅನುಮತಿಸಿದರೆ, ಬಳಿಕ ಅವ್ಯವಸ್ಥೆ ಉಂಟಾಗುತ್ತದೆ ಮತ್ತು ಕೋವಿಡ್ ಹರಡಲು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಲಾಗುವುದು. ನಮಗೆ ಅದು ಬೇಡ” ಎಂದು ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಹೇಳಿದೆ.
“ನೀವು (ಅರ್ಜಿದಾರರು) ಇಡೀ ದೇಶಕ್ಕೆ ಅನ್ವಯಿಸುವಂತೆ ಸಾಮಾನ್ಯ ಆದೇಶ ಹೊರಡಿಸಲು ಕೇಳುತ್ತಿದ್ದೀರಿ. ಆದರೆ ಬಳಿಕ ಏನಾದರೂ ಅನಾಹುತ ಸಂಭವಿಸಿದರೆ ನಾವು ಹೊಣೆಗಾರರಾಗುತ್ತೇವೆ” ಎಂದು ಈ ಕುರಿತು ಆದೇಶ ಹೊರಡಿಸಲು ಆಗುವ ಕಷ್ಟವನ್ನು ಪೀಠವು ವಿವರಿಸಿದೆ.
ಮಾರ್ಗಸೂಚಿಗಳು ಪಾಲಿಸದವರಿಂದಾಗಿ ಕೊರೋನಾ ಇನ್ನೂ ಜೀವಂತವಾಗಿದೆ : ಐಸಿಎಂಆರ್
ಈ ಸಂದರ್ಭ, ಪುರಿ ಜಗನ್ನಾಥಪುರಿ ರಥಯಾತ್ರೆ ಕುರಿತು ನ್ಯಾಯಾಲಯದ ಆದೇಶದ ಉದಾಹರಣೆಯನ್ನು ಅರ್ಜಿದಾರರು ಉಲ್ಲೇಖಿಸಿದರು. ಮುಖ್ಯ ನ್ಯಾಯಮೂರ್ತಿ ಬೊಬ್ಡೆ, “ನೀವು ಜಗನ್ನಾಥ ಪುರಿ ಉದಾಹರಣೆ ನೀಡುತ್ತಿದ್ದೀರಿ. ಆ ವಿಷಯದಲ್ಲಿ ಒಂದೇ ಸ್ಥಳ ಮತ್ತು ಒಂದೇ ಮಾರ್ಗದ ಅನುಮತಿ ಕೋರಿದ್ದರು. ಆಗ ನಾವು ಅಪಾಯವನ್ನು ನಿರ್ವಹಿಸಬಹುದು. ಹಾಗಾಗಿ, ಪುರಿಗೆ ಮಾತ್ರ ಆದೇಶವನ್ನು ರವಾನಿಸಿದ್ದೆವು” ಎಂದು ಸ್ಪಷ್ಟಪಡಿಸಿದರು.
“ಒಂದು ನ್ಯಾಯಾಲಯವಾಗಿ ನಾವು ಎಲ್ಲ ಜನರ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡಲು ಸಾಧ್ಯವಿಲ್ಲ. ನೀವು ಒಂದು ನಿರ್ದಿಷ್ಟ ಸ್ಥಳದಲ್ಲಿ ಆಚರಣೆ ಮತ್ತು ಮೆರವಣಿಗೆಗೆ ಅನುಮತಿ ಕೇಳಿದ್ದರೆ, ನಾವು ನಿರ್ಣಯಿಸಬಹುದಿತ್ತು” ಎಂದು ಹೇಳಿದೆ.
ಇದಕ್ಕೆ ಪರ್ಯಾಯವಾಗಿ, “ಶಿಯಾ ಸಮುದಾಯದ ಹೆಚ್ಚಿನ ಜನರು ಲಖನೌದಲ್ಲಿ ವಾಸಿಸುತ್ತಿರುವುದರಿಂದ ಅಲ್ಲಿಗೆ ಮಾತ್ರ ಅನುಮತಿ ನೀಡಬಹುದೇ” ಎಂದು ಅರ್ಜಿದಾರರು ಕೇಳಿದರು. ಈ ವಿಷಯದ ಕುರಿತು ಅಲಹಾಬಾದ್ ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ಉಚ್ಚ ನ್ಯಾಯಾಲಯವು ಅರ್ಜಿದಾರರನ್ನು ಕೇಳಿದರು.