ನೈಟ್ ಕರ್ಫ್ಯೂ : ದ.ಕ ಜಿಲ್ಲೆಯಲ್ಲಿ ಯಕ್ಷಗಾನ, ದೈವಾರಾಧನೆಗಳಿಗೆ ಇಲ್ಲ ಅವಕಾಶ!

0
182
Tap to know MORE!

ಮಂಗಳೂರು ಡಿ 23 : ರಾಜ್ಯದಲ್ಲಿ ಮುಂದಿನ 9 ದಿನಗಳ ಕಾಲ ವಿಧಿಸಲಾಗಿರುವ ರಾತ್ರಿ ಕರ್ಪ್ಯೂನಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ದಿನಗಳಲ್ಲಿ ಆಯೋಜಿಸಲಾಗಿರುವ ಯಕ್ಷಗಾನ, ದೈವರಾಧನೆ ರಾತ್ರಿ ವೇಳೆ ನಡೆಸಲು ಆವಕಾಶವಿಲ್ಲ. ಬೆಳಗ್ಗಿನ ವೇಳೆಯಲ್ಲಿ ಜಿಲ್ಲೆಯ ದೇವಸ್ಥಾನಗಳಲ್ಲಿ ನಡೆಯುವ ಧನು ಪೂಜೆಯಲ್ಲಿ ಭಕ್ತಾಧಿಗಳಿಗೆ ಭಾಗವಹಿಸಲು ಅವಕಾಶ ನೀಡದಿರಲು ಇಲ್ಲಿನ ಜಿಲ್ಲಾಡಳಿತ ನಿರ್ಧರಿಸಿದೆ.

ರಾತ್ರಿ ಕರ್ಪ್ಯೂನ ಹಿನ್ನಲೆಯಲ್ಲಿ ಈ ಕಾರ್ಯಕ್ರಮಗಳ ಅನಿಶ್ಸಿತತೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಗೊದಲಗಳು ಮೂಡಿದ ಹಿನ್ನಲೆಯಲ್ಲಿ ದ.ಕ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರನ್ನು ನಿಖರ ನ್ಯೂಸ್ ಸಂಪರ್ಕಿಸಿದಾಗ ಅವರ ಆಪ್ತ ಸಹಾಯಕ ಈ ವಿಚಾರ ತಿಳಿಸಿದರು .ಕೇವಲ ತುರ್ತು ಸೇವೆಗಳಾದ ಅರೋಗ್ಯ ,ಪತ್ರಿಕೆ ಹಾಲು ಇತ್ಯಾದಿ ಹೊರತು ಪಡಿಸಿ ಬೇರೆ ಯಾವುದೇ ರೀತಿಯ ಸೇವೆಗಳಿಗೆ ನಿರ್ಬಂಧವಿರುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಕೊರೋನಾ : ರೂಪಾಂತರಗೊಂಡ ಸೋಂಕಿನ ತಡೆಗೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ ಕೇಂದ್ರ ಸರ್ಕಾರ!

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿಯವರು ಕೂಡ ಕರ್ಪ್ಯೂ ಸಂದರ್ಭ ಯಾವುದೇ ಕಾರ್ಯಕ್ರಮಗಳಿಗೂ ಅವಕಾಶ ನೀಡುವುದಿಲ್ಲ ಎಂದು ನಿಖರ ನ್ಯೂಸ್ ಗೆ ಸ್ಪಷ್ಟಪಡಿಸಿದ್ದಾರೆ.

ಸಾಂಕ್ರಾಮಿಕ ರೋಗ ಕರೋನವೈರಸ್ ರೂಪಾಂತರಗೊಂಡಿರುವ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಸರಕಾರ ಮುಂದಿನ ಒಂಬತ್ತು ದಿನಗಳ ಕಾಲ ರಾತ್ರಿ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿದೆ. ಡಿ 23 ರಿಂದ ಡಿ 31 ರವರೆಗೆ ಈ ರಾತ್ರಿ ಕರ್ಪ್ಯೂ ಜಾರಿಯಲ್ಲಿರಲಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನೈಟ್​ ಕರ್ಫ್ಯೂ ಇರಲಿದೆ ಎಂದು ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ತನ್ನ ಆದೇಶದಲ್ಲಿ ತಿಳಿಸಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ರಾಜ್ಯದ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ನೈಟ್ ಕರ್ಫ್ಯೂ ಕಟ್ಟು ನಿಟ್ಟಾಗಿ ಜಾರಿ ಮಾಡುವಂತೆ ಆದೇಶ ನೀಡಿದ್ದಾರೆ.ಜೊತೆಗೆ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಿ ಎಂದಿದ್ದು, ಹೊಸ ವರ್ಷದ ಸಾರ್ವಜನಿಕ ಆಚರಣೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ತಿಳಿಸಿದ್ದಾರೆ

ಸರಕಾರದ ಈ ಅಚಾನಕ್ ನಿರ್ಧಾರ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಜನ ಜೀವನದ ದೊಡ್ಡ ಪರಿಣಾಮ ಬೀರಿದೆ. ಅವಳಿ ಜಿಲ್ಲೆಗಳಲ್ಲಿ ಸದ್ಯ ಭೂತಕೋಲ , ಯಕ್ಷಗಾನ ಧನು ಪೂಜೆ ಇತ್ಯಾದಿ ಹಿಂದೂ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿದೆ. ಅವಳಿ ಜಿಲ್ಲೆಯ ಎಲ್ಲ ಯಕ್ಷಗಾನ ಮೇಳಗಳು ತಮ್ಮ ತಿರುಗಾಟ ಈಗ ತಾನೇ ಆರಂಭಿಸಿದೆ. ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಲಾಕ್ ಡೌನ್ ಘೋಷಣೆಯಾದ ಹಿನ್ನಲೆಯಲ್ಲಿ ಹಲವು ಸೇವಾಕರ್ತರು ಬುಕ್ ಮಾಡಿದ ಯಕ್ಷಗಾನ ಪ್ರದರ್ಶನಗಳು ರದ್ದು ಗೊಂಡಿದ್ದವು. ಇದೀಗ ಮತ್ತೆ ಆ ಸೇವಾಕರ್ತರು ಅಂದು ರದ್ದುಗೊಂಡ ಆ ಆಟಗಳನ್ನೂ ಇದೀಗ ಆಡಿಸುತ್ತಿದ್ದು ಮತ್ತೆ ನೈಟ್ ಕರ್ಪ್ಯೂ ನ ಹಿನ್ನಲೆಯಲ್ಲಿ ತಡೆ ಉಂಟಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಾಡಿದ ವ್ಯವಸ್ಥೆಗಳಿಗೆ ಎರಡೆರಡು ಬಾರಿ ದಕ್ಕೆ ಉಂಟಾಗಿರುವುದು ನಷ್ಟಕ್ಕೆ ಕಾರಣವಾಗಿದೆ.

ಅಲ್ಲದೇ ಸದ್ಯ ತುಳುನಾಡಿನಲ್ಲಿ ದೈವರಾಧನೆಯ ಸೀಸನ್ ಆರಂಭಗೊಂಡಿದ್ದು ಮುಂದಿನ ಹತ್ತು ದಿನಗಳ ಕಾಲ ಬಹುತೇಕ ಕಡೆಗಳಲ್ಲಿ ಭೂತಕೋಲ, ಅಗೆಲು ಇತ್ಯಾದಿ ಕಾರ್ಯಕ್ರಮಗಳು ನಿಗದಿಯಾಗಿದೆ. ಈ ಎಲ್ಲ ಕಾರ್ಯಕ್ರಮಗಳು ಬಹುತೇಕ ರಾತ್ರಿ ವೇಳೆ ಜರುಗುವುದು ಸಂಪ್ರದಾಯ. ರಾತ್ರಿ ಕರ್ಪ್ಯೂ ಇದಕ್ಕೂ ಅಡ್ಡಿ ಉಂಟು ಮಾಡಿದೆ.ಅಲ್ಲದೇ ಈಗಾಗಲೇ ಸಿದ್ದತೆ ಮಾಡಿಕೊಂಡಿರುವ ವ್ಯವಸ್ಥಾಪಕರಿಗೆ ಅರ್ಥಿಕ ನಷ್ಟಕ್ಕೂ ಕಾರಣವಾಗಿದೆ .

ಧನು ಮಾಸದ ಹಿನ್ನಲೆಯಲ್ಲಿ ಜಿಲ್ಲೆಯ ಬಹುತೇಕ ಎಲ್ಲ ದೇವಸ್ಥಾನಗಳಲ್ಲಿ ಧನು ಪೂಜೆ ನೆರವೇರುತ್ತಿದೆ . ಇದು ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ನೆರವೇರುತ್ತಿದ್ದು ಬೆಳಿಗ್ಗೆ 5 .30ಕ್ಕೆ ಸಂಪನ್ನಗೊಳ್ಳುತ್ತದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಳ್ಳುತ್ತಿದ್ದು ಇದೀಗ ರಾಜ್ಯ ಸರಕಾರದ ಈ ರಾತ್ರಿ ಕರ್ಪ್ಯೂ ಇದಕ್ಕೂ ಅಡ್ಡಿ ಉಂಟು ಮಾಡಿದೆ.

ಕೋಟ ಶ್ರೀನಿವಾಸ ಪೂಜಾರಿಯವರ ಆಪ್ತ ಸಹಾಯಕರು ರಾತ್ರಿ ಕರ್ಪ್ಯೂ ವೇಳೆಯಲ್ಲಿ ಖಾಸಗಿ ಹಾಗೂ ಕೆಎಸ್ಅರ್ ಟಿಸಿ ಸೇವೆಗಳಿಗೂ ನಿರ್ಬಂಧವಿದೆ ಎಂದು ತಿಳಿಸಿದ್ದೂ ಆದರೇ ರಾಜ್ಯ ಸಾರಿಗೆ ಸಚಿವ ಹಾಗೂ ಉಪ ಮುಖ್ಯ ಮಂತ್ರಿ ಸವದಿಯವರು ಕೆಎಸ್ ಅರ್ ಟಿಸಿ ಅಭಾದಿತವಾಗಿರುತ್ತದೆ ಎಂದು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here