ಧಂಗು ಬಡೆದ ‘ದಂಗಲ್’ ಖ್ಯಾತಿಯ ರೋಹಿತ್ ಸರದಾನ!

0
90

ಹುಟ್ಟಿದ ವ್ಯಕ್ತಿ ಏನಾದರೂ ಸಾಧಿಸಬೇಕು, ಸಾಧಿಸುವ ಛಲ ಇರುವವರಿಗೆ ಛಲದಂಕಮಲ್ಲ ಎಂದೇ ಹೇಳಬಹುದು. ಅಂತಹ ಒಬ್ಬ ಪತ್ರಕರ್ತನ ಸಾವಿನ ಸುದ್ದಿ ಕೇಳಿ ಎಲ್ಲಾ ಮೀಡಿಯಾ ಹೌಸ್ ದಂಗಾಗಿ ಹೋದದ್ದಂತು ಸುಳ್ಳಲ್ಲ. ಕೊರೊನಾದಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದ ಆತ, ಹಠಾತ್ ಹೃದಯ ಬಡಿತ ನಿಲ್ಲಿಸಿದ. ಒಬ್ಬ ನಿಷ್ಠಾವಂತ ಪತ್ರಕರ್ತನಾಗಿ, ನಿಷ್ಪಕ್ಷಪಾತವಾಗಿ, ಶೋಷಣೆ, ಅನ್ಯಾಯದ ವಿರುದ್ಧ, ಧೈರ್ಯದಿಂದ, ಸ್ಪಷ್ಟವಾಗಿ, ನಿರೂಪಣೆ ಮಾಡುವವನ ಹೆಸರೇ ‘ದಂಗಲ್’ ಖ್ಯಾತಿಯ ರೋಹಿತ್ ಸರದಾನಾ.

2013ರಲ್ಲಿ ಹಿಂದಿಯ ಜೀ ನ್ಯೂಸನಲ್ಲಿ ಬರುತ್ತಿದ್ದ “ಠಾಲ್ ಟೋಕ್ ಕೆ” ಕಾರ್ಯಕ್ರಮದ ಆಫ್ ಸ್ಕ್ರೀನ್ ಕೆಲಸದಿಂದ ಆನ್ ಸ್ಕ್ರೀನ್‌ಗೆ ಬಂದ ರೋಹಿತ್, ಪ್ರತಿದಿನ ಒಂದು ವಿಶೇಷ ಸುದ್ದಿಯನ್ನು ಬೆನ್ನತ್ತಿ ಅದನ್ನು ವಿಮರ್ಶಿಸಿ, ನಿರೂಪಣೆ ಮಾಡುವ ವಿಧಾನ ಎಲ್ಲರ ಮನಗೆದ್ದಿತು. ಅದರಲ್ಲೂ ಸರ್ಕಾರ ಹಾಗೂ ಪ್ರತಿಪಕ್ಷದವರಿಗೂ ಎಸೆಯುತ್ತಿದ್ದ ಪ್ರಶ್ನೆಗಳು ನಿಖರವಾಗಿರುತ್ತಿದ್ದವು. “ಠಾಲ್ ಟೋಕ್ ಕೆ” ಡಿಬೇಟ್ ಕಾರ್ಯಕ್ರಮವು ರೋಹಿತ್ ಸರದಾನಾರ ಒಂದು ‘ಸಿಗ್ನೇಚರ್ ಶೋ’ ರೀತಿಯಲ್ಲಿ ಖ್ಯಾತಿಗಳಿಸಿತು.

ಇದನ್ನೂ ಓದಿ: ದೌರ್ಭಾಗ್ಯ – ರೇಖಾ ಸುದೇಶ್ ರಾವ್

ಜೀವನದಲ್ಲಿ ತುಂಬಾ ಹೆಸರು ಮಾಡುವ ತವಕ ಆತನಲ್ಲಿತ್ತು. ಜನರಿಗೆ ಸರಿಯಾದ ರೀತಿಯಲ್ಲಿ ಅವರದ್ದೇ ಮಾತುಗಳ ಮೂಲಕ ತಿಳಿ ಹೇಳಬಯಸುವ ಕಾರ್ಯಕ್ಷಮತೆ ಅವರ ನಿರೂಪಣೆಯಲ್ಲಿ ಕಾಣಸಿಗುತ್ತದೆ. ಸಮಾಜದ ಪ್ರತಿಯೊಂದು ರಂಗದ ಗಣ್ಯ ವ್ಯಕ್ತಿಗಳ ಜೊತೆ ಮಾಡುವ ಸಂದರ್ಶನವು ತುಂಬಾ ಮೌಲ್ಯಯುತವಾದ ಪ್ರಶ್ನೆಗಳಿಂದ ಕೂಡಿರುತ್ತಿದ್ದವು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಜೀ ನ್ಯೂಸ್‌ದಿಂದ ಆಜ್‌ ತಕ್ ನ್ಯೂಸ್ ಚಾನಲ್‌ ಗೆ ಸೇರ್ಪಡೆಯಾದ ನಂತರ ಸಂಜೆ 5 ಗಂಟೆಗೆ ಪ್ರಸಾರವಾಗುತ್ತಿದ್ದ “ದಂಗಲ್” ಡೀಬೆಟ್ ಶೋದಿಂದ ರೋಹಿತ್ ಮತ್ತಷ್ಟು ಜನಪ್ರಿಯತೆಯನ್ನು ಗಿಟ್ಟಿಸಿದರು. ತನ್ನ ನೇರ, ಖಾರದ ಮಾತು, ಪ್ರಶ್ನೆಗಳಿಂದ ಹಲವಾರು ರಾಜಕಾರಣಿಗಳ ಚಳಿ ಬಿಡಿಸಿದ ಪ್ರಸಂಗವು ನಡೆದಿದೆ. ಪ್ರಶ್ನೆಗಳು ನೇರ, ನಿಷ್ಠುರದಿಂದ ಕೂಡಿರುತ್ತಿದ್ದು, ಸಮಾಜದ ಕನ್ನಡಿಯಂತೆ ಪ್ರತಿಬಿಂಬಿಸುತ್ತಿತ್ತು.

ಆಜ್‌ತಕ್ ಚಾನಲ್ ಮತ್ತೊಂದು ಕಾರ್ಯಕ್ರಮ “ದಸ್ತಕ್”. ರಾತ್ರಿ 10 ಗಂಟೆಗೆ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮದಲ್ಲಿ ದೇಶದ ಸಮಸ್ಯೆಗಳನ್ನು ಎಳೆ-ಎಳೆಯಾಗಿ ತೆರೆದಿಡುತ್ತಿದ್ದರು. ಒಬ್ಬ ಸಾಮಾನ್ಯ ವೀಕ್ಷಕನಿಗೂ ಅರ್ಥವಾಗುವ ಶೈಲಿಯಲ್ಲಿ ವಿವರಿಸುತ್ತಿದ್ದರು. ಎಂದಿಗೂ ಧೈರ್ಯಗುಂದದ ವ್ಯಕ್ತಿಯಾಗಿದ್ದ ರೋಹಿತ್, ಕೆಲವೊಮ್ಮೆ ಸಾಮಾಜಿಕ ಮಾಧ್ಯಮಗಳಲ್ಲಿ ಅವರಿಗೆ ಸಿಗುತ್ತಿದ್ದ ನಕಾರಾತ್ಮಕ ಕಾಮೆಂಟ್ಸಗಳನ್ನು ಧನಾತ್ಮಕವಾಗಿ ಎದುರಿಸುತ್ತಿದ್ದರು. ಎಲ್ಲಾ ವಿಷಯಗಳ ಆಳ-ಅಗಲಕ್ಕಿಳಿದು ಮಾತನಾಡುವ ಶೈಲಿ, ಅಷ್ಟೊಂದು ಸಲಿಸಾಗಿ ಸೋಲನ್ನ ಒಪ್ಪದ ವ್ಯಕ್ತಿ, ಎಲ್ಲಾ ವಿಷಯಗಳಿಗೆ ಉತ್ತರ ನೀಡುವ ವ್ಯಕ್ತಿತ್ವ, ನಿಶ್ಶಬ್ಧವಾಗದ ಚರ್ಚೆ , ರೋಹಿತ್‌ಗೆ ಮಾಧ್ಯಮ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ನೀಡಿತು.

ಚುನಾವಣೆಯ ಸಂದರ್ಭಗಳಲ್ಲಂತೂ, ಕೇವಲ ನಿರೂಪಕನಾಗಿರದೇ, ಮತದಾನ ಕ್ಷೇತ್ರದಲ್ಲಿ ಅಲ್ಲಿಯ ಅಭ್ಯರ್ಥಿ ಹಾಗೂ ಮತದಾರರೊಂದಿಗೆ ಮಾತನಾಡಿ, ಫೀಲ್ಡ್ ಗಿಳಿದು ಅಲ್ಲಿಯ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚೆಯ ಮೂಲಕ ಮತದಾರರ ದ್ವನಿಯಾಗುತ್ತಿದ್ದರು. ಅಂತಹ ಕಾರ್ಯಕ್ರಮಗಳೀಳು ಮತದಾರರ ಮೇಲೆ ಗಾಢ ಪ್ರಭಾವ ಬೀರುತ್ತಿದ್ದವು. ದೇಶದಲ್ಲಿ ಯಾವುದಾದರೂ ಪ್ರಮುಖ ಘಟನೆಗಳು ನಡೆಯುವ ಸಮಯದಲ್ಲಿ ಗ್ರೌಂಡ್ ಜೀರೋದಲ್ಲಿದ್ದು ವರದಿಗಾರಿಕೆ ಮಾಡಿದ್ದ ಉದಾಹರಣೆಯೂ ಇದೆ.

ರೋಹಿತ್ ರವರ ಹಠಾತ್ ನಿಧನವು ಆಜ್‌ತಕ್ ಮಾತ್ರವಲ್ಲದೆ, ಬಹುತೇಕ ಎಲ್ಲಾ ರಾಷ್ಟ್ರೀಯ ಮಾಧ್ಯಮಗಳಲ್ಲಿ ಮುಖ್ಯ ಶೋ ಆಗಿ ಪ್ರಸಾರಗೊಂಡವು. ಬೇರೆ-ಬೇರೆ ಚಾನಲ್ ಗಳ ನಿರೂಪಕರಿಗೂ ತುಂಬಾ ಆತ್ಮೀಯ ವ್ಯಕ್ತಿಯಾಗಿದ್ದರು. ಎಲ್ಲಾ ನಿರೂಪಕರು ಇವರ ಸಾವಿನ ಸುದ್ದಿಯನ್ನು ಆನ್ ಸ್ಕ್ರೀನ್‌ನಲ್ಲಿ ದುಃಖಭರಿತವಾಗಿ ನುಡಿದದ್ದು ಅವರ ಆತ್ಮೀಯತೆಗೆ ಸಾಕ್ಷಿ. ಪ್ರತಿಯೊಂದು ಕಾರ್ಯಕ್ರಮದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಸಿಗುವ ಲೈಕ್, ಡಿಸ್‌ಲೈಕ್, ಕಾಮೇಂಟ್ಸಗಳಿಗೆ ಉತ್ತರ ನೀಡಿ, ಸಿಕ್ಕ ಫೀಡ್ ಬ್ಯಾಕ್ ಗಳಿಂದ ತಮ್ಮ ನ್ಯೂನತೆ ಗಳನ್ನು ಮುಂದಿನ ಶೋಗಳಲ್ಲಿ ಸರಿಪಡಿಸುತ್ತಿದ್ದರು. ನಿರೂಪಣೆ ಮಾಡುವಾಗ ಆತನಿಗೆ ಶಬ್ದಗಳು ಕಡಿಮೆಯಾಗುತ್ತಿರಲಿಲ್ಲ. ಆದರೆ ಉಸಿರಾಟ ಕಡಿಮೆಯಾಯಿತು!

ಸಿದ್ಧಾರ್ಥ ಎಸ್.

LEAVE A REPLY

Please enter your comment!
Please enter your name here