ಪಶ್ಚಿಮ ಬಂಗಾಳದಲ್ಲಿ ‘ನಬನ್ನಾ ಚಲೋ’ ಪ್ರತಿಭಟನಾ ಮೆರವಣಿಗೆ – ಅಪಾಯದಿಂದ ಪಾರಾದ ತೇಜಸ್ವಿ ಸೂರ್ಯ

0
152
Tap to know MORE!

ಕೋಲ್ಕತಾ, ಅ 8: ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಬಿಜೆಪಿ ಯುವ ಮೋರ್ಚಾದ ನೂತನ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬಿಜೆಪಿಯ ಯುವ ಘಟಕವು ನಡೆಸುತ್ತಿದ್ದ ‘ನಬನ್ನಾ ಚಲೋ’ ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ತೀವ್ರ ಸಂಘರ್ಷ ನಡೆದಿದೆ. ನಬನ್ನಾಕ್ಕೆ ಮೆರವಣಿಗೆ ಸಾಗುತ್ತಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಪಶ್ಚಿಮ ಬಂಗಾಳದ ಪೊಲೀಸರ ನಡುವೆ ಘರ್ಷಣೆ ನಡೆದಿದೆ.

ಮೆರವಣಿಗೆ ತಡೆಯಲು ಮುಂದಾದ ಪಶ್ಚಿಮ ಬಂಗಾಳ ಪೊಲೀಸರು ಹೌರಾದ ಸಂಟ್ರಗಚಿಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ನಡೆಸಿ, ಅಶ್ರುವಾಯು ಹಾಗೂ ಜಲಫಿರಂಗಿ ಪ್ರಯೋಗ ಮಾಡಿದರು. ಬುಧವಾರ ಬೆಳಿಗ್ಗೆಯೇ ಕೋಲ್ಕತಾದ ಬಿಜೆಪಿ ರಾಜ್ಯ ಪ್ರಧಾನ ಕಚೇರಿ ಬಳಿ ಪೊಲೀಸ್ ಸಿಬ್ಬಂದಿ ಜಮಾವಣೆಯಾಗಿದ್ದರು.

ಇದಕ್ಕೆ ಪ್ರತಿಯಾಗಿ ನಬನ್ನಾ ಚಲೋ ಮೆರವಣಿಗೆಗೆ ಭಾರಿ ಸಂಖ್ಯೆಯಲ್ಲಿ ಸೇರಿಕೊಂಡ ಬಿಜೆಪಿ ಕಾರ್ಯಕರ್ತರು ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಭಾರತೀಯ ಜನತಾ ಯುವ ಮೋರ್ಚಾವು ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲು ಈ ಮೆರವಣಿಗೆ ಆಯೋಜಿಸಿತ್ತು.

ಸ್ವಚ್ಛತಾ ಕಾರ್ಯಗಳ ಉದ್ದೇಶದಿಂದ ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳನ್ನು ಎರಡು ದಿನ ಮುಚ್ಚುತ್ತಿರುವುದಾಗಿ ಬುಧವಾರ ಸಂಜೆ ಮಮತಾ ಬ್ಯಾನರ್ಜಿ ಸರ್ಕಾರ ಪ್ರಕಟಿಸಿತ್ತು.

LEAVE A REPLY

Please enter your comment!
Please enter your name here