ನಮ್ಮ ಸುರಕ್ಷತೆಗಾಗಿ ‘ಆರೋಗ್ಯ ಸೇತು’

0
142
Tap to know MORE!

ದಿನೇ ದಿನೇ ಒಂದಲ್ಲ ಒಂದು ವಿನೂತನ ತಂತ್ರಜ್ಞಾನಗಳ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ತಂತ್ರಜ್ಞಾನಗಳ ಶೀಘ್ರ ಬೆಳವಣಿಗೆಗಳಿಂದಾಗಿ ಜಗತ್ತು ಅಭಿವೃದ್ಧಿಯ ಕಡೆಗೆ ಸಾಗುತ್ತಿದೆ. ಇದರ ನಡುವೆ ಕೊರೊನಾ ಎಂಬ ಮಹಾಮಾರಿಯೂ ಇಡೀ ಜಗತ್ತನ್ನೇ ಆವರಿಸಿದೆ. ಈ ಸಂದರ್ಭದಲ್ಲಿ ನಾವೆಷ್ಟು ಸೇಫ್ ನಾವಿರುವ ಜಾಗ ಎಷ್ಟು ಸುರಕ್ಷಿತ ಎಂಬುದನ್ನು ಕಂಡುಹಿಡಿಯಲು ಅಸಾಧ್ಯ. ಆದ್ದರಿಂದ ಪ್ರತಿಯೊಬ್ಬರ ಸುರಕ್ಷತೆಯು ಅಗತ್ಯ. ಈ ನಿಟ್ಟಿನಲ್ಲಿ ಕೊವಿಡ್-೧೯ ಹರಡುವುದನ್ನು ತಡೆಗಟ್ಟುವ ಸಲುವಾಗಿ ಮತ್ತು ಈ ವೈರಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಭಾಗವಾಗಿರುವ ರಾಷ್ಟ್ರೀಯ ಮಾಹಿತಿ ಕೇಂದ್ರವು ‘ಆರೊಗ್ಯ ಸೇತು’ ಎಂಬ ಹೊಸ ಆ್ಯಪ್‌ನ್ನು ಸಿದ್ಧಪಡಿಸಿದೆ. ಇದು ಬ್ಲುಟೂತ್ ಆಧಾರಿತ ಕೊವಿಡ್-೧೯ ಟ್ರ್ಯಾಕರ್ ಆಗಿದೆ. ಈ ತುರ್ತು ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಉಪಕ್ರಮಗಳನ್ನು ವೃದ್ಧಿಸಲು ಮತ್ತು ಅಪ್ಲಿಕೇಶನ್ ಬಳಕೆದಾರರಿಗೆ ಮಾಹಿತಿ ತಲುಪಿಸುವುದು ಈ ಅಪ್ಲಿಕೇಶನ್‌ನ ಮುಖ್ಯ ಉದ್ದೇಶವಾಗಿದೆ.

 

ಏನಿದು ಆರೋಗ್ಯ ಸೇತು?
ಆರೋಗ್ಯ ಸೇತು ಒಂದು ಬಳಕೆದಾರಸ್ನೇಹಿ ಆ್ಯಪ್. ಈ ಅಪ್ಲಿಕೇಶನ್ ಬಳಕೆದಾರನ ಸುತ್ತಮುತ್ತಲು ಇರುವ ಕೊವಿಡ್-೧೯ ಹಾಟ್‌ಸ್ಪಾಟ್‌ನ್ನು ಪತ್ತೆ ಹಚ್ಚಲು ಸಹಾಯಮಾಡುತ್ತದೆ. ಜತೆಗೆ ಜಿಯೋಟ್ಯಾಗಿಂಗ್ ಆಧಾರದ ಮೇಲೆ ಬಳಕೆದಾರರಿಗೆ ಸಮೀಪದಲ್ಲಿರುವ ಸೋಂಕಿತ ಪ್ರಕರಣದ ಬಗ್ಗೆ ಎಚ್ಚರವಹಿಸಲು ಸೂಚಿಸುತ್ತದೆ ಮತ್ತು ಪ್ರಕರಣಗಳಿರುವ ಪ್ರದೇಶಗಳಲ್ಲಿ ಜನರನ್ನು ಸುರಕ್ಷಿತವಾಗಿರಲು ಮತ್ತು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಇದು ಸಹಾಯ ಮಾಡುತ್ತದೆ. ಆ ಆ್ಯಪ್‌ನ ಮೂಲಕ ಸಮುದಾಯದ ಹಂತದಲ್ಲಿ ವೈರಸ್ ಪ್ರಸರಣವನ್ನು ಸ್ವಲ್ಪಮಟ್ಟಿಗೆ ತಡೆಗಟ್ಟಲು ಸಾಧ್ಯವಾಗುತ್ತದೆ. ಒಟ್ಟಾರೆಯಾಗಿ ಬಳಕೆದಾರ ತಮ್ಮ ಅಪಾಯವನ್ನು ಸ್ವಯಂ ಗುರುತಿಸಲು ಸಹಾಯಮಾಡುವುದಲ್ಲದೇ, ತಮ್ಮ ಆರೋಗ್ಯ ಮೇಲ್ವಿಚಾರಣೆಯನ್ನು ಮಾಡಬಹುದಾಗಿದೆ. ಕೊವಿಡ್-೧೯ ಹರಡುವಿಕೆಯ ಕುರಿತಾದ ಎಲ್ಲಾ ರೀತಿಯ ಮಾಹಿತಿಯನ್ನು ನೀಡುವುದರ ಜೊತೆಗೆ ಜಾಗೃತಾ ಕ್ರಮಗಳನ್ನು ಸೂಚಿಸಲು ಈ ಆಪ್ಲಿಕೇಶನ್ ಸಹಕಾರಿಯಾಗಿದೆ. ಈ ಅಪ್ಲಿಕೇಶನ್‌ನ್ನು ಆಡ್ರೊಯ್ಡ್ ಮತ್ತು ಆ್ಯಪಲ್ ಫೋನ್‌ಗಳಗಳಲ್ಲಿ ಲಭ್ಯವಿರುತ್ತದೆ.
ಇದಲ್ಲದೆ ಕೊವಿಡ್-೧೯ನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ನಾಗರಿಕರಾಗಿ ನಾವು ಯಾವ ರೀತಿಯ ಉತ್ತಮ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಮತ್ತು ಮಾರ್ಗಸೂಚಿಗಳನ್ನು ಸೂಚಿಸುತ್ತದೆ. ಇದು ೧೧ ವಿವಿಧ ಭಾಷೆಗಳಲ್ಲಿ ಲಭ್ಯವಿರುತ್ತದೆ.

ಏನಿದರ ವೈಶಿಷ್ಟ್ಯತೆ:
೧. ಬ್ಲೂಟೂತ್ ಆಧಾರಿತ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತದೆ. ಮತ್ತು ಬಳಕೆದಾರರ ಸ್ಥಳವನ್ನು ಆಧರಿಸಿ ಅಪಾಯವನ್ನು ನಿರ್ಧರಿಸಲು ಪ್ರಯತ್ನಿಸುತ್ತದೆ.
೨. ಬಳಕೆದಾರರಿಗೆ ಸ್ವಯಂ ಮೌಲ್ಯಮಾಪನ ಪರೀಕ್ಷೆ, ಸಾಮಾಜಿಕ ಅಂತರ ಕಾಪಾಡುವುದು, ಮಾಡಬೇಕಾದ ಮತ್ತು ಮಾಡಬಾರದಂತಹ ಹಲವಾರು ಕ್ರಮಗಳನ್ನು ಇದು ಶಿಫಾರಸ್ಸು ಮಾಡುತ್ತದೆ.
೩. ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮತ್ತು ಜಾಗತಿಕ ಸಾಂಕ್ರಾಮಿಕ ಕಾಲದಲ್ಲಿ ಸಾಮಾಜಿಕ ಅಂತರವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಕುರಿತಾಗಿ ತಿಳಿಸುತ್ತದೆ.
೪. ಒಂದು ವೇಳೆ ಬಳಕೆದಾರರು ಹೆಚ್ಚಿನ ಅಪಾಯದಲ್ಲಿದ್ದರೆ ಹತ್ತಿರದ ಪರೀಕ್ಷಾ ಕೆಂದ್ರಗಳಲ್ಲಿ ಪರೀಕ್ಷೆಗೆ ಹೋಗಲು ಈ ಅಪ್ಲಿಕೇಶನ್ ಸಲಹೆ ನೀಡುವುದರ ಜತೆಗೆ ಟೋಲ್ ಫ್ರೀ ನಂಬರನ್ನು ತಿಳಿಸುತ್ತದೆ/
೫. ಬಳಕೆದಾರ ಈ ಆ್ಯಪ್‌ನ ಮೂಲಕ ೧೪ ದಿನಗಳ ಪ್ರಯಾಣ ಇತಿಹಾಸವನ್ನು ತಿಳಿಯಬಹುದಾಗಿದೆ.
೬. ಕೊವಿಡ್-೧೯ ಕುರಿತ ಎಲ್ಲ ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸುವ “chat bot”ಅನ್ನು ಸಹ ಇದು ಹೊಂದಿದೆ.
೬ ಬಳಕೆದಾರರು ಭಾರತದ ಪ್ರತಿಯೊಂದು ರಾಜ್ಯಕ್ಕೂ ಸಹಾಯವಾಣಿ ಸಂಖ್ಯೆಗಳನ್ನು ಇದರಲ್ಲಿ ಕಾಣಬಹುದಾಗಿದೆ.

ಬಳಸುವುದು ಹೇಗೆ?
ಆರೋಗ್ಯ ಸೇತು ಆ್ಯಪ್‌ನ್ನು ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನ ಮೂಲಕ, ಐಒಎಸ್ ಬಳಕೆದಾರರು ಆ್ಯಪ್ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಮಗೆ ಬೇಕಾದ ಭಾಷೆಯನ್ನು ಆರಿಸಿಕೊಳ್ಳಬೇಕು ಮತ್ತು ಬ್ಲೂಟೂತ್ ಮತ್ತು ಲೊಕೇಶನ್‌ನ್ನು ಸ್ವಿಚ್ ಆನ್ ಮಾಡಿಕೊಳ್ಳಬೇಕು. ಈ ಆ್ಯಪ್‌ನಲ್ಲಿ ನಮ್ಮನ್ನು ನಾವು ನೋಂದಾಯಿಸಿಕೊಳ್ಳಲು `ರಿಜಿಸ್ಟರ್’ ಎಂಬ ಆಯ್ಕೆಯನ್ನು ಆರಿಸಬೇಕು. ಅದರಲ್ಲಿ ಕೇಳಲಾಗುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿದಾಗ ಒಟಿಪಿ ಕೇಳುತ್ತದೆ. ಒಟಿಪಿಯನ್ನು ಹಾಕಿದ ಬಳಿಕ ಈ ಅಪ್ಲಿಕೇಶನ್‌ನ್ನು ಪ್ರವೇಶಿಸಬಹುದು. ಮತ್ತು ಸ್ವಯಂ ಮೌಲ್ಯಮಾಪನ ಪರೀಕ್ಷೆ ತೆಗೆದುಕೊಳ್ಳಬಹುದು, ಮಾರ್ಗಸೂಚಿಗಳನ್ನು ಓದಬಹುದಾಗಿದೆ, ಅಪಾಯಕಾರಿ ಅಂಶವನ್ನು ನಿರ್ಧರಿಸಬಹುದಾಗಿದೆ. ಹೀಗೆ ಹಲವಾರು ವಿಚಾರಗಳನ್ನು ಇದರಲ್ಲಿ ತಿಳಿಯಬಹುದಾಗಿದೆ. ಇದು ನಮ್ಮ ಸುರಕ್ಷತೆಗಾಗಿ ಇರುವ ಜನಸ್ನೇಹಿ ಆ್ಯಪ್ ಎಂದು ಹೇಳಬಹುದು.

LEAVE A REPLY

Please enter your comment!
Please enter your name here