ನರಕಾಸುರನ ಸಂಹಾರದ ಪ್ರತೀಕ ‘ನರಕ ಚತುರ್ದಶಿ’

0
149
Tap to know MORE!

ದೀಪಾವಳಿ ಹಬ್ಬದ ಸಡಗರ, ಸಂಭ್ರಮ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಇದೆ. ಈ ದೀಪಾವಳಿ ಹಬ್ಬಕ್ಕೂ ಹಾಗೂ ಪುರಾಣದ ಕಥೆಗೂ ಅವಿನಾಭಾವ ಸಂಬಂಧವಿದೆ. ಅದುವೇ ನರಕಾ(ಭೌಮ)ಸುರನ ಸಂಹಾರ ಹಾಗೂ ನರಕ ಚತುರ್ದಶಿಯ ಹಿನ್ನೆಲೆ. ಶಾರ್ಙ್ಗ ಧನುಸ್ಸನ್ನು ಧರಿಸಿರುವ ಶ್ರೀ ಕೃಷ್ಣನ ಹಲವು ಸಾಹಸ ಕಥೆಗಳಲ್ಲಿ ಇದೂ ಒಂದು.

ಭೌಮಸುರನು ಇಂದ್ರನ ಛತ್ರ, ಅದಿತಿಯ ಕುಂಡಲ ಹಾಗೂ ಮೇರು ಪರ್ವತವದಲ್ಲಿ ದೇವತೆಗಳ ಸ್ಥಾನವಾಗಿದ್ದ ಮಣಿಪರ್ವವನ್ನು ಅಪಹರಿಸಿಕೊಂಡು ಹೋಗಿದ್ದನು. ಸಮಸ್ತರಿಗೂ ಈ ನರಕಾಸುರನ ಉಪಟಳವನ್ನು ತಾಳಲಾರದೆ ದ್ವಾರಕೆಗೆ ಬಂದು ಶ್ರೀಕೃಷ್ಣನೊಡನೆ ಭೌಮನು ಮಾಡಿರುವ ಕೃತ್ಯಗಳೆಲ್ಲವನ್ನು ವಿವರಿಸಿದರು.

ಆಗ ಶ್ರೀ ಕೃಷ್ಣನು ಸತ್ಯಭಾಮೆಯೊಡನೆ ಗರುಡನನ್ನೇರಿ ಭೌಮಸುರನ ರಾಜಧಾನಿಯಾದ ಪ್ರಾಗ್ಜ್ಯೋತಿಷನಗರಕ್ಕೆ ಹೋದನು.ಅಲ್ಲಿ ಆ ಪಟ್ಟಣದ ನಾಲ್ಕು ಕಡೆ ಪರ್ವತಗಳಿಂದ ಕೂಡಿದ್ದು ಅದೇ ಕೋಟೆಗಳಾಗಿದ್ದವು. ಪಟ್ಟಣವು ಶಸ್ತ್ರದುರ್ಗದಿಂದಲೂ, ಜಲದುರ್ಗದಿಂದಲೂ, ಅಗ್ನಿದುರ್ಗದಿಂದಲೂ ಮತ್ತು ವಾಯುದುರ್ಗದಿಂದಲೂ ಸಮಾವೃತವಾಗಿದ್ದಿತು.ವಾಯುದುರ್ಗವು ಕಳೆದ ನಂತರ ಭಯಂಕರವಾದ “ಮುರ”ನೆಂಬ ರಾಕ್ಷಸನ‌ ೧೦,೦೦೦ ಕಬ್ಬಿಣದ ಸರಪಣಿಗಳಿಂದ ಆ ಮಹಾನಗರ ಸುತ್ತುವರಿಯಲ್ಪಟ್ಟು, ಅತ್ಯಂತ ಸುಭದ್ರವಾಗಿದ್ದಿತು. ಶ್ರೀ ಕೃಷ್ಣನು ಕೌಮೋದಕಿ ಗದೆಯಿಂದ ಪರ್ವತ ಪ್ರಕಾರಗಳನ್ನು ಬೇಧಿಸಿದನು. ಬಾಣಗಳಿಂದ ಶಸ್ತ್ರದುರ್ಗವನ್ನು ಧ್ವಂಸ ಮಾಡಿದನು. ಬಳಿಕ ಐದು ಮುಖಗಳನ್ನು ಹೊಂದಿದ “ಮುರ”ನನ್ನು ಬಾಣಗಳಿಂದ ಪ್ರಹರಿಸಿದನು.

ಮರುಕ್ಷಣವೇ ಅಜಿತನಾದ ಶ್ರೀಕೃಷ್ಣನು ಚಕ್ರಾಯುಧದಿಂದ ಮುರನ ಶಿರಸ್ಸನ್ನು ಬೇರ್ಪಡಿಸಿದನು. ಈ ಕಾರಣಕ್ಕಾಗಿ ಶ್ರೀಕೃಷ್ಣನನ್ನು “ಮುರಹರ”ನೆಂದು ಸ್ತುತಿಸುತ್ತಾರೆ. ಪಿತೃವಧೆಯಿಂದ ಅತಿ ದುಃಖಿತರಾಗಿದ್ದ ಮುರ ರಾಕ್ಷಸನ ಏಳು ಮಂದಿ ಮಕ್ಕಳು ಅತ್ಯಂತ ಕ್ರುದ್ಧರಾಗಿ ಯುದ್ಧವನ್ನು ಮಾಡಲು ಪ್ರಯತ್ನಶೀಲರಾದರು. ತಾಮ್ರ, ಅಂತರಿಕ್ಷ, ಶ್ರವಣ, ವಿಭಾವಸು ,ವಸು, ನಭಸ್ವಂತ ಮತ್ತು ಅರುಣ ಎಂಬ ಏಳು ಮಂದಿ ಶ್ರೀಕೃಷ್ಣನ ಮೇಲೆ ಪ್ರಚಂಡವಾದ ಆಯುಧವನ್ನು ಅವಿಚ್ಛಿನ್ನವಾಗಿ ಸುರಿದರು. ಶ್ರೀಕೃಷ್ಣನ ಶಕ್ತಿ ಅನಂತ ಹಾಗೂ ಅಮೋಘವಾದುದು. ಒಂದೇ ಬಾರಿಗೆ ಎಲ್ಲರನ್ನು ಯಮರಾಜನ ಮನೆಗೆ ಕಳುಹಿಸಿಬಿಟ್ಟನು.

ಸೂರ್ಯನ ಮೇಲ್ಭಾಗದಲ್ಲಿ ಮಿಂಚಿನಿಂದ ಕೂಡಿದ ವರ್ಷಕಾಲದ ಶ್ಯಾಮಲವರ್ಣದ ಮೇಘದಂತೆ ಪತ್ನಿಯೊಡನೆ ಗರುಡರೂಢನಾಗಿದ್ದ ಶ್ರೀಕೃಷ್ಣನು ನರಕನನ್ನು ನೋಡಿದನು.

ಶ್ರೀ ಕೃಷ್ಣನು ಕಾಣುತ್ತಲೇ ಕ್ರುದ್ಧನಾಗಿ “ಶತಘ್ನೀ” ಎಂಬ ಆಯುಧವನ್ನು ಪ್ರಯೋಗಿಸಿದನು. ಹೀಗೆ ಇಬ್ಬರ ನಡುವೆ ಘೋರ ಯುದ್ಧವಾಯಿತು. ನರಕಾಸುರ ಶೂಲಾಯುಧವನ್ನು ಕೈಗೆತ್ತಿಗೊಂಡು ಶ್ರೀ ಹರಿಯನ್ನು ಸಂಹರಿಸಿಬೇಕೆನ್ನುಷ್ಟರಲ್ಲಿ ಚೂಪಾದ ಅಂಚುಳ್ಳ ಚಕ್ರಾಯುಧದಿಂದ ರಥದಲ್ಲಿ ಕುಳಿತ್ತಿದ್ದ ಭೌಮಸುರನ ತಲೆ ಕೆಡಹಿದನು. ದೇವತೆಗಳು ಪುಷ್ಪವೃಷ್ಟಿಯನ್ನು ಸುರಿಸುತ್ತಾ ಭಗವಂತನನ್ನು ಸ್ತುತಿಸಿದರು.

ಭೂತಾಯಿಯ ಮಗನಾದ ನರಕಾಸುರನ ಸಂಹಾರವಾದ ಬಳಿಕ ಭೂದೇವಿಯು ಅಪಹರಿಸಿದ್ದ ಮಣಿ, ಕುಂಡಲ, ಛತ್ರವನ್ನು ವೈಜಯಂತಿ ಮಾಲೆಯೊಡನೆ ಶ್ರೀ ಕೃಷ್ಣನಿಗೆ ಅರ್ಪಿಸಿದಳು.ಈ ಮೊದಲು ಹದಿನಾರು ಸಾವಿರ ರಾಜಕುಮಾರಿಯರು ನರಕಾಸುರನಿಂದ ಅಪಹರಿಸಲ್ಪಟ್ಟಿದ್ದರು.ಅವರೂ ಆ ಬಂಧನದಿಂದ ಮುಕ್ತಿ ಪಡೆದರು ಹಾಗೆಯೇ ‌ಭೂಲೋಕದಲ್ಲಿದ್ದ ಜನರು ರಕ್ಕಸನ ಉಪಟಳದಿಂದ ವಿಮುಕ್ತಿ ಹೊಂದಿದರು. ಆ ದಿನ ಚತುರ್ದಶಿ ಆದ್ದರಿಂದ ವಿಜಯೋತ್ಸವವನ್ನು ದೀಪವನ್ನು ಹಚ್ಚಿ “ನರಕ ಚತುರ್ದಶಿ”ಯೆಂದು ಆಚರಿಸಲಾಯಿತು.

-ಜಪ
(ಕೃಪೆ- ಶ್ರೀಮದ್ಭಾಗವತ)

LEAVE A REPLY

Please enter your comment!
Please enter your name here