ಕನ್ನಡದ ನಾಗಮಂಡಲ ಹಾಗೂ ಸೂರ್ಯವಂಶ ಸಿನಿಮಾ ನಟಿ ವಿಜಯಲಕ್ಷ್ಮಿ ಅವರು ಲೈವ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
“ನಾನು ಕನ್ನಡದ ನಟಿ ಎಂಬ ಒಂದೇ ಒಂದು ಕಾರಣಕ್ಕೆ ನಾನು ಕರ್ನಾಟಕದಲ್ಲಿ ಹುಟ್ಟಿದ್ದೇನೆ ಎಂಬ ಕಾರಣಕ್ಕೆ ಸೀಮನ್ ಎಂಬ ನಟ ಮತ್ತು ರಾಜಕಾರಣಿ ಹಾಗೂ ಹರಿನಾಡರ್ ಎಂಬುವವರು ನನ್ನನ್ನು ಬದುಕಲು ಬಿಡುತ್ತಿಲ್ಲ. ನಾನು ಈಗಾಗಲೇ ಮೂರು ಮಾತ್ರೆಗಳನ್ನು ತೆಗೆದುಕೊಂಡಿದ್ದೇನೆ. ನನ್ನ ಬಿಪಿ ಲೋ ಆಗುತ್ತಿದೆ. ನನ್ನ ಸಾವಿಗೆ ಕಾರಣವಾದ ಸೀಮನ್ ಮತ್ತು ಹರಿನಾಡರ್ ಇಬ್ಬರನ್ನೂ ಯಾವುದೇ ಕಾರಣಕ್ಕೂ ಬಿಡಬೇಡಿ” ಎಂದು ಖ್ಯಾತ ನಟಿ ವಿಜಯಲಕ್ಷ್ಮೀ ವಿಡಿಯೋ ಮಾಡಿ ಟ್ವಿಟ್ಟರ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ತಮಿಳು ಹಾಗೂ ಕನ್ನಡದಲ್ಲಿ ವಿಡಿಯೋದಲ್ಲಿ ಮಾತನಾಡಿರುವ ವಿಜಯಲಕ್ಷ್ಮಿ, ನಾನು ಕರ್ನಾಟಕದಲ್ಲಿ ಹುಟ್ಟಿದ್ದೀನಿ ಎಂಬ ಕಾರಣಕ್ಕೆ ಸೀಮನ್ ಮತ್ತು ಹರಿಂದ್ರನ್ ನನಗೆ ಸಾಕಷ್ಟು ಕಾಟ ಕೊಟ್ಟಿದ್ದಾರೆ. ಮಹಿಳೆಯಾಗಿ ನಾನು ಎಷ್ಟು ತಡೆದುಕೊಳ್ಳಬೇಕು ಅಷ್ಟು ತಡೆದುಕೊಂಡಿದ್ದೇನೆ. ಇನ್ನುಮುಂದೆ ತಡೆದುಕೊಳ್ಳಲಾಗದು ಎಂದು ವಿಜಯಲಕ್ಷ್ಮಿ ವಿಡಿಯೋದಲ್ಲಿ ಹೇಳಿದ್ದಾರೆ.
“ನಾನು ಪಿಲ್ಲೈ ಸಮುದಾಯದವಳು, ಎಲ್ಟಿಟಿಇ ಯ ಪ್ರಭಾಕರನ್ ಸಹ ಅದೇ ಸಮುದಾಯದವರು, ಅವರಿಂದಲೇ ಸಿಮನ್ ಇಂದು ಬದುಕುತ್ತಿರುವುದು. ಆದರೆ ಆತ ನನ್ನ ಜಾತಿಯನ್ನು ಅವಮಾನಿಸುತ್ತಿದ್ದಾನೆ. ನಾನು ವೇಶ್ಯಾವಾಟಿಕೆ ಮಾಡುತ್ತಿದ್ದೇನೆ” ಎಂದು ಸುಳ್ಳು ಆರೋಪ ಮಾಡಿದ್ದಾನೆ ಎಂದು ವಿಜಯಲಕ್ಷ್ಮಿ ಆರೋಪಿಸಿದ್ದಾರೆ. ಗಂಭೀರಗೊಂಡ ನಟಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಕೆ ಕಾಣುತ್ತಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.