ನಾನು ಮತ್ತು ಗುಲ್ಮೋಹರ್ ನಗುವಿನ ಅವಳೂ

6
326
Tap to know MORE!

ಪೇಪರ್ ನಲ್ಲಿ, ಟಿವಿಲಿ ಬೆಂಗಳೂರನ್ನ ಗಾರ್ಡನ್ ಸಿಟಿ ಅಂತ ಓದಿದಾಗ, ಹೇಳಿದ್ದನ್ನು ಕೇಳಿದಾಗ ನನಗೆ ಸಿಕ್ಕಾಪಟ್ಟೆ ಕೋಪ ಬರ್ತಿತ್ತು. ಕಾರಣ ಸಿಂಪಲ್, ನಮ್ಮ ಬೆಂಗಳೂರು ಈಗ ಆ ಗಮ್ಮತ್ತನ್ನು ಉಳಿಸಿಕೊಂಡಿಲ್ಲ. ಐಟಿ ಹಬ್ ಆದ್ಮೇಲಂತೂ ಬೆಂಗಳೂರು ಒಂಥರಾ ಬೋರ್ ಆಗೋಕೆ ಶುರುವಾಗಿತ್ತು. ಹುಟ್ಟಿದಾಗಿನಿಂದ ಬೆಂಗಳೂರಲ್ಲೇ ಬೆಳೆದಿರೋದ್ರಿಂದನೋ ಏನೋ; ಪ್ರತಿ ದಿನ ಬೆಂಗಳೂರು ಮೇಲಿನ ಸೆಳೆತ ಕಡಿಮೆಯಾಗುತ್ತಿತ್ತು. ಮನಸ್ಸು ನಿಶ್ಯಬ್ಧ ಕಾಡಿನ ಮರ್ಮರಗಳನ್ನು ಬಯಸುತ್ತಿತ್ತು. ಪಿಯುಸಿ ಮುಗಿಸಿದವಳೇ ತುಂಬಾ ಹಠ ಮಾಡಿ ಮೂಡಬಿದಿರೆಯ ಆಳ್ವಾಸ್ ಕಾಲೇಜಿಗೆ ಸೇರಿಕೊಂಡಿದ್ದೆ. ಇಲ್ಲಿಂದ ಶುರುವಾಯಿತು ದಟ್ಟ ಹಸಿರಿನ ನಡುವೆ ಬೆಚ್ಚನೆಯ ಹೊಸ ಬದುಕು.

ಅಂದಹಾಗೆ ನಾನು ನಂದಿನಿ. ನನ್ನಷ್ಟಕ್ಕೆ ನಾನು ತುಂಬಾ ಒಳ್ಳೆ ಹುಡುಗಿ ಅಂತ ಸರ್ಟಿಫಿಕೇಟ್ ಕೊಟ್ಕೊಂಡಿದೀನಿ. ತುಂಬಾ ಚಿಕ್ಕವಳಿದ್ದಾಗಿನಿಂದ ನಂಗೆ ಪ್ರಶಾಂತ ಸ್ಥಳಗಳೆಂದರೆ ಒಂಥರಾ ವಿಸ್ಮಯ. ಓದೋದ್ರಲ್ಲೇನೋ ಚುರುಕಾಗೆ ಇದೀನಿ. ಆದ್ರೆ ಮನಸು ಮಾತ್ರ ಇರೋದನ್ನೆಲ್ಲ ಬಿಟ್ಟು ಮತ್ತೇನೋ ಬಯಸುತ್ತಿತ್ತು. ಹೀಗಾಗೇ ಬೆಂಗಳೂರಂಥ ಬೆಂಗಳೂರು ನನಗೆ ಬೋರೆದ್ದು ಹೋಗಿದ್ದು. ಮೂಡಬಿದಿರೆಯಂಥ ಚಿಕ್ಕ ಊರು ನನಗೆ ಸಾವಿರ ಸಪ್ನಗಳ ಸುಂದರ ಸಾಗರದಂತೆ ಕಾಣಿಸುತ್ತಿತ್ತು. ಇಲ್ಲಿಯ ನೀರವ ಮೌನ, ಖಾಲಿ ಖಾಲಿ ರಸ್ತೆಗಳು, ಸುಂದರ ಪರಿಸರ ನನ್ನ ಪಾಲಿಗೆ ತುಂಬಾ ಆಪ್ತ ಅನ್ನಿಸುತ್ತಿತ್ತು.

ಕಾಲೇಜೆನೋ ಶುರುವಾಯ್ತು. ಇಂತಹ ದಟ್ಟ ಕಾಡಿನ ಮಧ್ಯೆ ಇಷ್ಟೊಳ್ಳೆ ವಿದ್ಯಾ ಸಂಸ್ಥೆ ಕಟ್ಟಿದ್ದು ನಿಜಕ್ಕೂ ಅಚ್ಚರಿ. ಪ್ರತಿ ದಿನ ಕಾಲೇಜು, ಹಾಸ್ಟೆಲು ಇಷ್ಟೇ ನನ್ನ ಪ್ರಪಂಚ. ಮೊದಮೊದಲಿಗೆ ಮೂಡಬಿದಿರೆಯ ಶೈಲಿಯ ಕನ್ನಡ ಒಂಥರಾ ಮಜವಾಗಿ ಕೇಳಿಸುತ್ತಿತ್ತಾದರೂ ನಿಧಾನವಾಗಿ ಅಭ್ಯಾಸವಾಗಿ ಹೋಯಿತು. ಆದ್ರೆ ಫ್ರೆಂಡ್ಸ್ ವಿಷಯದಲ್ಲಿ ನಾನು ಮೊದಲಿನಿಂದಲೂ ತುಂಬಾ ಚೂಸಿ. ಹೀಗಾಗಿ ಯಾರನ್ನು ಅಷ್ಟೊಂದಾಗಿ ಹಚ್ಚಿಕೊಂಡಿರಲಿಲ್ಲ. ಒಂದೊಂದ್ಸಲ ತುಂಬಾ ಲೋನ್ಲಿ ಫೀಲ್ ಮಾಡ್ತಿದ್ದೆ. ಈ ವಿಷಯದಲ್ಲಿ ಸ್ವಲ್ಪ ಬೇಜಾರಾಗಿದ್ದು ನಿಜ. ಆದ್ರೆ ಒಬ್ಬಳು ಗೆಳತಿ ನನ್ನೆಲ್ಲ ಏಕಾಂಗಿತನವನ್ನು ದೂರವಾಗಿಸಿದಳು. ಆಕೆ ಸಿಕ್ಕಿದ್ದೇ ಒಂದು ಮಜವಾದ ಸನ್ನಿವೇಶದಲ್ಲಿ. ಅಂದಹಾಗೆ ಅವಳ ಹೆಸರು ಸ್ಟೈಲಿ.

ಅವತ್ತೊಂದಿನ ಬೆಳಗಿನಿಂದ ಮನಸ್ಸಿಗೆ ಯಾಕೋ ಒಂಥರಾ ಕಸಿವಿಸಿ. ಅದೊಂತರ ಎಲ್ಲ ಸರಿಯಾಗಿದ್ದಾಗಲೂ ಕಾಡುವ ಕೊರಗಿನಂತೆ ನನ್ನ ಆವರಿಸಿತ್ತು. ಮಧ್ಯಾಹ್ನದ ಕ್ಲಾಸ್ ಬಂಕ್ ಮಾಡಿ ಹಾಸ್ಟೆಲ್ ಗೆ ಹೋಗಿ ಬಿದ್ದುಕೊಂಡಿದ್ದೆ. ತುಂಬಾ ಹೊತ್ತು ನಿದ್ದೆ ಮಾಡುವ ಪ್ರಯತ್ನ ಮಾಡಿದರೂ ನಿದ್ದೆ ಮಾತ್ರ ಬರಲಿಲ್ಲ. ಕೆಲವೊಂದು ನೋಟ್ಬುಕ್ ಕೊಂಡುಕೊಳ್ಳಬೇಕಿರುವುದು ನೆನಪಾಗಿ ನಮ್ಮ ಕಾಲೇಜು ಹತ್ತಿರ ಇರೋ ಸ್ಟೇಷನರಿ ಶಾಪ್ ಗೆ ಹೋಗಿದ್ದೆ. ಸುಮ್ಮನೆ ನನ್ನ ಪಾಡಿಗೆ ನಾನು ಬುಕ್ಸ್ ಹುಡುಕುವುದರಲ್ಲಿ ಮಗ್ನಳಾಗಿದ್ರೆ ಯಾರೋ ಒಬ್ಬಳು ನನ್ನನ್ನೇ ನೋಡ್ತಿರೋದು ಅನುಭವಕ್ಕೆ ಬಂತು. ಅರೆ ಇವಳ್ಯಾಕೆ ನನ್ನ ನೋಡಿ ನಗುತ್ತಿದ್ದಾಳೆ ಅನ್ನಿಸುತ್ತಿತ್ತಾದ್ರು ಅವಳಲ್ಲೇನೋ ಒಂದು ರೀತಿ ಸೆಳೆತ ಇತ್ತು. ನಂಗ್ಯಾಕೆ ಇವಳ ಉಸಾಬರಿ ಅಂತ ಪರ್ಚೆಸಿಂಗ್ ಮುಗ್ಸಿ ಅಂಗಡಿಯಿಂದ ಹೊರಬಿದ್ದೆ. ದಾರಿಯಲ್ಲೆಲ್ಲ ಅವಳ ನೆನಪೇ ಕಾಡುತ್ತಿತ್ತು. ಅರೆ ಎಷ್ಟು ಮುದ್ದಾಗಿದ್ದಾಳೆ ಅನ್ನಿಸುತಿತ್ತು. ಅವಳ ಮುಖವನ್ನು ಮರೆಯಲು ಏನೇನೋ ಯೋಚನೆ ತಂದುಕೊಳ್ಳಲು ಪ್ರಯತ್ನಿಸುತ್ತಿದ್ದೆ. ಆ ಕ್ಷಣಕ್ಕೆ ನನಗೆ ಯಾರದೇ ಗೆಳೆತನ ಬೇಡವಾಗಿತ್ತು. ಆದರೆ ಹಾಸ್ಟೆಲಿಗೆ ಹೋಗುವ ದಾರಿಯುದ್ದಕ್ಕೂ ಬಿದ್ದಿದ್ದ ಗುಲ್ ಮೋಹರ್ ಹೂವುಗಳನ್ನು ನೋಡುತ್ತಿದ್ದಂತೆ ಮತ್ತೆ ಅವಳದೇ ನೆನಪು. ಇದೆಂತಹ ಸೆಳೆತ ಅಂದುಕೊಳ್ಳುತ್ತಲೇ ಹಾಸ್ಟೆಲು ಸೇರಿಕೊಂಡೆ. ಸುಮ್ಮನೆ ಓದಲು ಪುಸ್ತಕ ತೆರೆದುಕೊಂಡು ಕುಳಿತಾಗಲೂ ಕೂಡ ಅವಳು ಕಾಡುವುದನ್ನು ಬಿಡಲಿಲ್ಲ. ಅವಳು ಸಿಂಗಾರಗೊಂಡಿದ್ದ ಹಳದಿ ಬಣ್ಣ ನನ್ನಲ್ಲಿ ಗಾಢವಾಗಿ ಬೆರೆತುಕೊಂಡಿತ್ತು. ಹಾಸ್ಟೆಲಿನ ಬಾಲ್ಕನಿಯಲ್ಲಿ ನನ್ನ ರೂಮ್ ಮೇಟ್ ಒಣಗಲು ಹಾಕಿದ್ದ ಹಳದಿ ವೇಲ್ ನೋಡಿದರೂ ಅವಳೇ ನೆನಪಾದಳು. ರಾತ್ರಿ ಊಟಕ್ಕೆಂದು ಕೊಟ್ಟ ಕ್ಯಾಬೇಜು ಪಲ್ಯದ ಹಳದಿಯಲ್ಲೂ ಅವಳ ನಗುವೇ ಕಾಣಿಸುತ್ತಿತ್ತು.

ಅವಳದೇ ಗುಂಗಿನಲ್ಲಿ ನಿದ್ದೆ ಹೋದವಳಿಗೆ ರಾತ್ರಿ ಕನಸಲ್ಲೂ ಅವಳದೇ ದರ್ಶನ ಆಗಿ, ಇವಳೇನು ಇಷ್ಟೊಂದು ಕಾಡುತ್ತಿದ್ದಾಳೆ ಅನ್ನಿಸಿತು. ಬೆಳಗ್ಗೆ ಬೇಗನೆ ಎದ್ದು ಕಾಲೇಜಿಗೆ ಸೇರಿದವಳಿಗೆ ನಮ್ಮ ಸೀನಿಯರ್ ಹುಡುಗಿಯ ಜೊತೆ ಅವಳು ಇದ್ದಿದ್ದು ಗಮನಕ್ಕೆ ಬಂತು. ಅರೆ ಅವಳೇ ಇವಳು. ಸೀನಿಯರ್ ಜೊತೆ ಇವಳಿಗೆಂತ ಕೆಲಸ. ನಂಗ್ಯಾಕೋ ಸಣ್ಣಗೆ ಕೋಪ. ಯಾವ ಕ್ಲಾಸು ಕೂಡ ನೆಟ್ಟಗೆ ಕೂರಲಾಗಲಿಲ್ಲ. ಮಧ್ಯಾಹ್ನಕ್ಕೆ ಊಟಕ್ಕೆಂದು ಹೊರಟವಳಿಗೆ ಮತ್ತೆ ಮೂರ್ನಾಲ್ಕು ಜನ ಹುಡುಗಿಯರ ಜೊತೆ ಅವಳಿದ್ದಿದ್ದು ನೋಡಿ ಸಿಟ್ಟು ಬಂತು. ಅವಳ ಬಗ್ಗೆ ನಾನ್ಯಾಕೆ ತಲೆ ಕೆಡಿಸಿಕೊಳ್ಳಬೇಕು, ಅವಳು ಯಾವ ಹುಡುಗಿಯ ಜೊತೆ ಇದ್ದರೆ ನಂಗೇನು ಅಂದುಕೊಂಡು ಹಾಸ್ಟೆಲಿಗೆ ಹೋಗಿ ಮಲಗಿಕೊಂಡೆ. ಎಷ್ಟು ಹೊತ್ತಾದರೂ ಅವಳ ಗುಂಗು ಕಡಿಮೆಯಾಗಲಿಲ್ಲ. ಹೀಗೆ ಪ್ರತಿದಿನ ಒಬ್ಬೊಬ್ಬ ಹುಡುಗಿಯರೊಂದಿಗೆ ಅವಳನ್ನು ನೋಡಿದಾಗಲೂ ನನಗೆ ಕೋಪ ಬರುತ್ತಿತ್ತು. ಆದ್ರೆ ಅವಳೆಡೆಗಿನ ಸೆಳೆತ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿತ್ತು. ಅವತ್ತೊಂದಿನ ಬೇಗನೆ ಕಾಲೇಜಿಂದ ಹಾಸ್ಟೆಲ್ ಗೆ ಬಂದು ನೋಟ್ಸ್ ಬರೆಯುತ್ತ ಕುಳಿತಿದ್ದೆ. ಕ್ಲಾಸು ಮುಗಿಸಿ ನನ್ನ ರೂಮ್ ಮೇಟ್ ರೂಮ್ ಗೆ ಬಂದಾಗ ನನಗೆ ಅಚ್ಚರಿಯೊಂದು ಎದುರಾಗಿತ್ತು. ಅವಳೊಂದಿಗೆ ಇವಳೂ ಬಂದಿದ್ದಾಳೆ. ನನಗಂತೂ ಹೊಟ್ಟೆಕಿಚ್ಚು ತಡೆಯಲಾಗಲಿಲ್ಲ. ಸುಮ್ಮನೆ ಅವಳನ್ನೇ ದಿಟ್ಟಿಸುತ್ತಾ ಕುಳಿತುಕೊಂಡೆ. ಅವಳು ಮಾತ್ರ ಎಂದಿನಂತೆ ರಮ್ಯವಾದ ನಗುವೊಂದಿಗೆ ನನ್ನ ಕಾಡುತ್ತಿದ್ದಳು. ಇನ್ನು ತಡೆಯಲಾಗುವುದಿಲ್ಲ ಅಂತನ್ನಿಸಿ ನನ್ನ ರೂಮ್ ಮೇಟ್ ಗೆ ಕೇಳಿಯೇ ಬಿಟ್ಟೆ, ‘ಇವಳನ್ನೆಲ್ಲಿಂದ ಕರ್ಕೊಂಡು ಬಂದೆ.?’ ಯಾರು ಅಂತ ನೋಡಿದ ಅವಳು, ‘ಓಹ್ ಇವಳಾ ನಮ್ಮ ಕಾಲೇಜಿನ ಮುಂದಿರುವ ಸ್ಟೇಷನರಿ ಶಾಪ್ ನಲ್ಲಿ ಇದ್ಲು ಇಷ್ಟ ಆಯಿತು ಕರ್ಕೊಂಡ್ ಬಂದೆ. ಎಷ್ಟೊಂದು ಕ್ಯೂಟ್ ಅಲ್ವಾ’ ಈ ಮಾತು ಕೇಳಿ ನಂಗೆ ಮತ್ತಷ್ಟು ಹೊಟ್ಟೆಕಿಚ್ಚು ಶುರುವಾಯಿತು. ‘ಕ್ಯೂಟ್ ಅಂತೇ ಕ್ಯೂಟ್’ ಅಂತ ಗೊಣಗಿಕೊಂಡು ಸುಮ್ಮನಾದೆ. ಅಲ್ಲ ಎಷ್ಟೊಂದು ಜನ ಹುಡುಗಿಯರ ಜೊತೆ ಇವಳು ಇರ್ತಾಳೆ ನನ್ನನ್ಯಾಕೆ ಇಷ್ಟೊಂದು ಕಾಡ್ತಿದಾಳೆ ಅಂದುಕೊಳ್ಳುತ್ತ ಓದಿನಲ್ಲಿ ಮಗ್ನಳಾದೆ. ಯಾಕೋ ಓದೋಕೂ ಮನಸಾಗಲಿಲ್ಲ. ಎದ್ದವಳೇ ಬೇಗ ಬೇಗ ರೆಡಿಯಾಗಿ ಅದೇ ಸ್ಟೇಷನರಿ ಅಂಗಡಿಗೆ ಹೋದ್ರೆ ಅಲ್ಲಿ ಮತ್ತೆ ಅವಳಿದ್ದಳು. ಒಳ ಹೋಗಿ ಅವಳೆದುರು ನಿಂತುಕೊಂಡೆ. ಹೌದು ಎಷ್ಟೊಂದು ಕ್ಯೂಟ್ ಇವಳು ಅನ್ನಿಸಿತು.ನಾನು ಅವಳೊಂದಿಗೆ ಮಾತಾಡಲು ಶುರು ಮಾಡಿದೆ. ನಾನು ಒಬ್ಬಳೇ ಇರಬೇಕು ಅಂತ ಎಷ್ಟೇ ಪ್ರಯತ್ನಿಸಿದ್ರೂ ಬಿಟ್ಟುಬಿಡದೆ ನನ್ನ ಕಾಡುತ್ತಿದ್ದೀಯ. “ಯಾಕೆ ನನ್ನ ಇಷ್ಟೊಂದು ಸತಾಯಿಸುತ್ತಿದ್ದೀಯ?” ಅವಳು ಸುಮ್ಮನೆ ತನ್ನ ಮೋಹಕ ನಗುವೊಂದಿಗೆ ನನ್ನ ಮಾತುಗಳನ್ನು ಕೇಳುತ್ತಿದ್ದಳು. “ಅವರಿವರ ಜೊತೆ ಇದ್ದು ಯಾಕೆ ನನ್ನ ಚುಡಾಯಿಸುತ್ತಿದ್ದೀಯ. ನಗಬೇಡ, ಕಣ್ಮುಚ್ಚಿಕೋ ನನ್ನ ನೋಡಬೇಡ.” ಅವಳದು ಮತ್ತೆ ಅದೇ ನಗು.ಮುದ್ದು ಮುದ್ದು ಕಣ್ಣು. ಕೆಂಪು ಕಣ್ಣು. ಎಷ್ಟು ಜಗಳ ಮಾಡಲು ಪ್ರಯತ್ನಿಸಿದರೂ ಅವಳದು ಅದೇ ಪ್ರತಿಕ್ರಿಯೆ. ಕೊನೆಗೆ ನಾನೇ ಸೋತು ಹೋದೆ. ಆಯಿತು ಬಿಡು ನನ್ನೊಂದಿಗೆ ಇದ್ದು ಸಾಯಿ. ಆದ್ರೆ ಒಂದಷ್ಟು ಕಂಡಿಷನ್ಸ್ ಇವೆ. ನನ್ನ ಬಿಟ್ಟು ಎಲ್ಲೂ ಹೋಗುವಂತಿಲ್ಲ. ನಾನು ಮಾತಾಡಿದ್ದನ್ನೆಲಾ ಕೇಳಿಸಿಕೊಳ್ಳಬೇಕು. ನಾ ಬೈದರೆ ಸುಮ್ಮನೆ ಇದೇ ನಗೆಯೊಂದಿಗೆ ಬೈಸಿಕೊಳ್ಳಬೇಕು. ನಾ ಅತ್ತಾಗ ರಮಿಸಬೇಕು. ಬೇಸರದಲ್ಲಿದ್ದಾಗ ನಗಿಸಬೇಕು. ಇಷ್ಟೆಲ್ಲ ಕೇಳಿದರೂ ಅವಳದು ಅದೇ ರಮ್ಯ ನಗು. ಆಯಿತು ನಿನ್ನ ಕರ್ಮ ಬಾ ಅಂತ ಕರೆದುಕೊಂಡು ಬಂದೆ.

ಆ ಕ್ಷಣದಿಂದ ಅವಳು ನನ್ನ ಜೊತೆಯೇ ಇದ್ದಾಳೆ, ನನ್ನ ಎಲ್ಲ ನಗುವಿನಲ್ಲೂ, ಬೇಸರದಲ್ಲೂ, ನೋವಿನಲ್ಲೂ, ಅಚ್ಚರಿಗಳಲ್ಲೂ, ಸಾಧನೆಗಳಲ್ಲೂ ಎಲ್ಲ ಕಡೆ ಅವಳೇ . ಅವಳ ಜೊತೆ ಮಾತಾಡದೆ ನನ್ನ ದಿನವೇ ಶುರುವಾಗುವುದಿಲ್ಲ.ಅವಳ ಜೊತೆ ಜಗಳವಾಡದಿದ್ದರೆ ನನ್ನ ದಿನ ಮುಗಿಯುವುದೂ ಇಲ್ಲ. ನನ್ನ ಎಲ್ಲ ತರಲೆಗಳಿಗೂ ಅವಳದು ಅದೇ ಮುದ್ದು ಮುದ್ದು ನಗೆ. ಅವಳ ಆ ನಗು ನನ್ನ ಪ್ರತಿ ಕ್ಷಣವೂ ಆಹ್ಲಾದಿಸುತ್ತ ಬದುಕುವುದನ್ನು ಕಲಿಸಿದೆ. ನೋವಲ್ಲೂ ನಗುವುದನ್ನು ಕಲಿಸಿದೆ. ಸೋಲಲ್ಲೂ ಗೆಲ್ಲುವುದನ್ನು ಕಲಿಸಿದೆ. ಅವಳೇ ನನ್ನ ಗೆಳತಿ, ಅವಳೇ ನನ್ನ ಅಮ್ಮ, ಅವಳೇ ನನ್ನ ಬಾಯ್ ಫ್ರೆಂಡ್ ಕೂಡ.

ಅಂದಹಾಗೆ ಇವಳೇ ಸ್ಟೈಲಿ. ಸದಾ ನನ್ನ ಕಾಲೇಜ್ ಬ್ಯಾಗ್ ಮೇಲಿರುವ ಹಳದಿ ಬಣ್ಣದ , ಮುದ್ದು ನಗುವಿನ ಬ್ಯಾಡ್ಜ್. ಲಾಕ್ಡೌನ್ ಅಂತ ಹೇಳಿ ನೀರಿನಲ್ಲಿ ಆಟವಾಡೋಕೆ ಬಿಟ್ಟಿದ್ದೀನಿ…. 🙂

ನಂದಿನಿ ಗೋಪಾಲ್

6 COMMENTS

  1. Keep it up Inna mundey chenag bariri kaitirtini

    ಇಂತಿ ನಿಮ್ಮ ಅಭಿಮಾನಿ ಆದರ್ಶ್ ಎಸ್

  2. Whaa sistaa 😊 olle writer nivu 💯 chindhi a kuthuhalana konevargu. Ittidralla great nijvaglu writer e Shakti irbeku . Nanyaro hudgi antha tikondiddey❣ super 🔥 jaii🙌🏽 ಕೌತುಕ ಬರಹಗಾರ್ತಿ ನಂದಿನಿ ಗೆ jaii✊🏽

LEAVE A REPLY

Please enter your comment!
Please enter your name here