ಅಂದು ಮಂಗಳವಾರ.ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಾರದ ಹಣವನ್ನು ಬ್ಯಾಂಕಿಗೆ ಕಟ್ಟುವ ದಿನ.ನಾನಾಗ ಮೂರನೇ ತರಗತಿಯಲ್ಲಿದ್ದೆ.ಜ್ವರ ಬಂದು,ಮೈ – ಕೈ ಹುಷಾರಿಲ್ಲದೆ,ನಾಲ್ಕೈದು ದಿನಗಳಾಗಿತ್ತು.ಯೋಜನೆಯ ಹಣವನ್ನು ಬ್ಯಾಂಕಿಗೆ ಕಟ್ಟುವ ಆ ವಾರದ ಸರದಿ ನನ್ನಮ್ಮನದಾಗಿತ್ತು.ಹಣವನ್ನು ಬ್ಯಾಂಕಿಗೆ ಕಟ್ಟಲು ಹಾಗೆಯೇ ನನಗೆ ಮದ್ದು ತರಲೆಂದೂ ಬೆಳಗ್ಗಿನ ಗಾರ್ಮೆಂಟ್ ಬಸ್ ಹತ್ತಿಕೊಂಡು ಬಂಟ್ವಾಳಕ್ಕೆ ತೆರಳಿದೆವು.ಡಾ|ವೀಣಮ್ಮನವರ ಬಳಿ ಪರೀಕ್ಷೆ ಮಾಡಿಸಿ ಮದ್ದು ತಗೊಂಡು ಅಲ್ಲಿಂದ ಬಿ.ಸಿ.ರೋಡಿಗೆ ರಿಕ್ಷಾದಲ್ಲಿ ಹೋದೆವು.
ಹಣವನ್ನು ಬ್ಯಾಂಕಿನಲ್ಲಿ ಕಟ್ಟಿ ಬೇಗನೇ ಮನೆಗೆ ತೆರಳಬಹುದೆಂದು ರಿಕ್ಷಾದಿಂದ ಇಳಿದು ಬ್ಯಾಂಕಿಗೆ ಹೋದೆವು.ನನ್ನಮ್ಮ ಹಣವನ್ನಿಟ್ಟಿದ್ದ ಪರ್ಸನ್ನು ತೆಗೆಯಲು ಕೈಯಲ್ಲಿದ್ದ ಚೀಲದಲ್ಲಿ ನೋಡಿದಾಗ ಪರ್ಸ್ ಇಲ್ಲ.ಅದೆಷ್ಟು ಸಲ ನೋಡಿದರೂ ಪರ್ಸ್ ಸಿಗಲಿಲ್ಲ.ಅಮ್ಮ ಅಳತೊಡಗಿದರು.ಕಾರಣ ಅದರಲ್ಲಿದ್ದ ಹಣ ಯೋಜನೆಯ ಸದಸ್ಯರೆಲ್ಲರ ಹಣ.ಅದು ಇಲ್ಲಂತಾದರೆ ಏನು ಮಾಡುವುದು?ಅಷ್ಟೊಂದು ಹಣವನ್ನು ಹೇಗೆ ಹೊಂದಿಸುವುದು?ಸದಸ್ಯರೆಲ್ಲರ ಬಳಿ ಏನೆಂದು ಉತ್ತರ ನೀಡುವುದು? ಎಂಬುದೇ ಚಿಂತೆಯಾಯಿತು.ಪಕ್ಕದಲ್ಲಿದ್ದ ಜನ ಬೇರೆಬೇರೆ ಕಡೆಗಳಿಂದ ಬ್ಯಾಂಕಿಗೆ ಯೋಜನೆಯ ಹಣವನ್ನು ಕಟ್ಟಲೆಂದು ಬಂದಿದ್ದವರು ಅಮ್ಮನ ಬಳಿ,ಎಲ್ಲಿಂದ ಬಂದಿದ್ದು?ಪರ್ಸನ್ನು ಚೀಲದಲ್ಲೇ ಇಟ್ಟಿದ್ದೀರ? ಇಲ್ಲ ಕೈಯಲ್ಲೇನಾದರೂ ಇಟ್ಟುಕೊಂಡಿದ್ದಿರ? ನೆನಪು ಮಾಡಿಕೊಳ್ಳಿ ಎಂದು ಹೇಳ್ತಾ ಇದ್ರು.ಹಾಗೆಯೇ ಅಲ್ಲಿದ್ದ ಒಂದಿಬ್ಬರು ಯಾವ ಕಡೆಯಿಂದ ಬಂದಿದ್ದು? ಕೇಳಿದಾಗ ನಾವು ಬಂಟ್ವಾಳದ ಆಸ್ಪತ್ರೆಯೊಂದರಲ್ಲಿ ಮದ್ದು ತಗೊಂಡು ಅಲ್ಲಿಂದ ಆಟೋದಲ್ಲಿ ಬಂದದ್ದು ಎಂದು ಹೇಳಿದರು.ಹಾಗೆಯೇ ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ಹೆಂಗಸೊಬ್ಬರು ಅಳಬೇಡಿ ಅಕ್ಕಾ,ನಿಮ್ಮ ಪರ್ಸ್,ಹಣ ಎಲ್ಲಿಗೂ ಹೋಗದು ಧೈರ್ಯವಾಗಿರಿ.ನೀವು ಅಳುತ್ತಿರುವುದನ್ನು ನೋಡಿ ನಾನು ಮನಸಿನಲ್ಲಿಯೇ ಪಣೋಲಿಬೈಲು ಕಲ್ಲುರ್ಟಿ ಅಮ್ಮನಿಗೆ ಒಂದು ಚೆಂಡು ಮಲ್ಲಿಗೆ ಹೂವಿನ ಹರಕೆ ಹೇಳಿದೆ. ಆ ತಾಯಿ ಎಂದಿಗೂ ಕೈ ಬಿಡಲ್ಲ. ನಿಮ್ಮ ಪರ್ಸ್ ಸಿಕ್ಕರೆ ಈ ಹರಕೆಯನ್ನು ತೀರಿಸಿಬಿಡಿ”ಎಂದರು.ಸಂಕಟ ಬಂದಾಗ ವೆಂಕಟ ರಮಣ ಅನ್ನುವ ಹಾಗೆ ದೇವರೇ ಗತಿಯೆಂದು ಆಯಿತೆಂದರು.
ಅಲ್ಲಿಯೇ ಇದ್ದ ಒಂದಿಬ್ಬರು ಹೆಂಗಸರು ಹಾಗೆಯೇ ಗಂಡಸೊಬ್ಬರು ನನ್ನನ್ನು ಮತ್ತು ಅಮ್ಮನನ್ನು ಬ್ಯಾಂಕಿನ ಹೊರಗಡೆ ಕರೆದು ಆಟೋ ಚಾಲಕ ನೋಡಲು ಹೇಗಿದ್ದರು? ಎಲ್ಲಿಂದ ಬಂದಿದ್ದು ಹೀಗೆ ಕೆಲವೊಂದು ವಿಷಯಗಳನ್ನು ನಮ್ಮಲ್ಲಿ ಕೇಳಿಕೊಂಡು ಅಲ್ಲೇ ಹೊರಗಡೆ ಓಡಾಡುತ್ತಿದ್ದ ಕೆಲವು ಆಟೋಗಳ ಬಳಿ ತೆರಳಿ ಚಾಲಕರ ಹತ್ತಿರ ವಿಷಯ ತಿಳಿಸಿ ನಮ್ಮ ಬಳಿ ಬಂದು ಅಲ್ಲೇ ತುಸು ದೂರದಲ್ಲಿರುವ ಬಂಗಾರದ ಅಂಗಡಿಯ ಬಳಿ ಇರಲು ಹೇಳಿ ಹಾಗೆಯೇ ಬೇರೆಯವರ ಬಳಿಯೂ ವಿಷಯ ತಿಳಿಸುತ್ತಿದ್ದರು. ನಾವು ನಿಂತಿದ್ದ ಬಂಗಾರದ ಅಂಗಡಿಯ ಕಡೆಗೆ ಒಬ್ಬರು ಇಳಿವಯಸ್ಸಿನ ಅಜ್ಜ ಜೋರಾಗಿ ಆಟೋ ಓಡಿಸಿಕೊಂಡು ನಮ್ಮೆಡೆಗೆ ನಮ್ಮನ್ನೇ ಕೂಗುತ್ತಾ ಬರುತ್ತಿರುವುದು ಕಾಣಿಸಿತು.ನನಗೆ ಪಕ್ಕನೇ ಗುರುತು ಸಿಕ್ಕಿತು.ಅವರೇ ಆ ಆಟೋ ಡ್ರೈವರ್ ಅಜ್ಜ ಎಂದು ಅಮ್ಮನಲ್ಲಿ ಹೇಳುತ್ತಿರುವಾಗ,ಅವರು ರಿಕ್ಷಾದಿಂದ ಇಳಿದು ಬಂದು ಪರ್ಸನ್ನು ಅಮ್ಮನ ಕೈಗಿಟ್ಟು “ಅಮ್ಮಾ ನಾನು ನಿಮ್ಮನ್ನು ಇಳಿಸಿ ವಾಪಾಸ್ಸು ಸ್ಟಾಂಡಿಗೆ ಹೋಗಿ ಆಟೋದಿಂದ ಕೆಳಗಿಳಿದು ನೋಡುವಾಗ ಹಿಂದಿನ ಸೀಟಿನಲ್ಲಿ ಈ ಪರ್ಸ್ ಬಿದ್ದಿರುವುದು ಕಾಣಿಸಿತು.ನಿಮ್ಮದೇ ಪರ್ಸ್ ಆಗಿರಬಹುದೆಂದು ಅದನ್ನೆತ್ತಿಕೊಂಡು ಬ್ಯಾಂಕಿನ ಬಳಿಗೆ ಬಂದೆ.ಅಲ್ಲಿ ಒಬ್ಬರು ನೀವು ಇಲ್ಲಿದ್ದೀರಿ ಎಂದು ಹೇಳಿದರು.ಹಾಗೆ ಇಲ್ಲಿಗೆ ಬಂದೆ.ತಗೊಳಮ್ಮಾ ನಿನ್ನ ಪರ್ಸ್ ಅದರಲ್ಲಿದ್ದ ಎಲ್ಲಾ ವಸ್ತುಗಳು ಇದೆಯಾ ನೋಡು.ಅಳಬೇಡಮ್ಮಾ,ಆ ಅಲ್ಲಾಹುವೆ ನನ್ನನ್ನು ಇಲ್ಲಿ ಕಳುಹಿಸಿದರು ಕಾಣಬೇಕು.” ಎಂದು ಹೇಳಿ ಒಂದು ನಗುವನ್ನೂ ನಿರೀಕ್ಷಿಸದೆ ಆಟೋ ಹತ್ತಿ ಹೊರಟರು.
ಆ ಆಟೋ ಡ್ರೈವರ್ ಅಜ್ಜ ಮುಸ್ಲಿಮ್ ಸಮುದಾಯಕ್ಕೆ ಸೇರಿದವರು. ಅವರೆಲ್ಲಿಯವರೋ,ನಾವೆಲ್ಲಿಯವರೋ,ಆದರೆ ಆ ಇಳಿವಯಸ್ಸಿನಲ್ಲೂ ತನ್ನದಲ್ಲದ ವಸ್ತುವನ್ನು 2 ಕಿಲೋಮೀಟರ್ ಆಟೋ ಓಡಿಸಿಕೊಂಡು ಹಿಂತಿರುಗಿ ಬಂದು ನಮ್ಮನ್ನು ಹುಡುಕಿ ಪರ್ಸನ್ನು ಹಿಂತಿರುಗಿಸಿದ ಆ ಪುಣ್ಯಾತ್ಮರು ನಿಜಕ್ಕೂ ಗ್ರೇಟ್.ಅದು ಕೂಡ ಕೈಗೊಂದು ಮೊಬೈಲ್ಗಳು ಇಲ್ಲದೇ ಇದ್ದ ಆ ಕಾಲದಲ್ಲಿ.
ಆ ಘಟನೆಯನ್ನು ನೆನೆದಾಗಲೆಲ್ಲ ಪರ್ಸ್ ಪುನಃ ನಮ್ಮ ಕೈ ಸೇರುವಲ್ಲಿ ನನ್ನ ಮನದಲ್ಲಿ ಮೂಡುವ ಬಲವಾದ ಮೂರು ಪ್ರಶ್ನೆಗಳಿವು,
ಆ ಪರ್ಸ್ನಲ್ಲಿದ್ದ ಹಣ ಯೋಜನೆಯ ಸದಸ್ಯರೆಲ್ಲರ ಹಣವೆಂದೋ?,
ಕಲ್ಲುರ್ಟಿ ಅಮ್ಮನಿಗೆ ಆ ಹೆಂಗಸು ಹೇಳಿಕೊಂಡ ಹರಕೆಯಿಂದಲೋ?,ಅಥವಾ ಆ ಆಟೋದ ಅಜ್ಜನ ಪ್ರಾಮಾಣಿಕತೆಯೇ? ಯಾವುದು ಮುಖ್ಯವಾಗಿ
ಕಾರಣವಾಯಿತೆಂದು ಮತ್ತೂ ನೆನಪಾಗುತ್ತದೆ.ಆ ಅಜ್ಜನ ಪ್ರಾಮಾಣಿಕತೆಯೊಂದೇ ಅಲ್ಲಿ ಮುಖ್ಯವಾಗಿ ಕಾರಣವಾಗಿತ್ತು ಎಂಬುದು ನೈಜತೆ.