ನೀವು ವಿಕಿಪೀಡಿಯನ್ ಆಗಬೇಕೆ?

0
194
Tap to know MORE!

ಸಮಯ ಎನ್ನುವುದು ಪ್ರತಿಯೊಬ್ಬ ಮನುಷ್ಯನ ಜೀವನದ ಬಹುಮುಖ್ಯ ಅಂಗ. ಇದು ನಮ್ಮ ಹೇಳಿಕೆಯಿಂದಾಗಲಿ ನಿಮ್ಮ ಹೇಳಿಕೆಯಿಂದ ಆಗಲಿ ಬದಲಾಗಲು ಎಂದೂ ಕೇಳುವುದಿಲ್ಲ. ನಿಮಗೆ ಸಿಕ್ಕಿರುವ ವಿರಾಮದಲ್ಲಿ ಕೆಲಸ ಮಾಡುವ ಕೈಗಳಿಗೆ ಬೇಡಿಗಳನ್ನು ಕಟ್ಟಿದಂತಾಗಿರಬಹುದು. ಹಾಗೇ ಮನೆಯಲ್ಲಿಯೇ ಕುಳಿತು ವಾಟ್ಸ್ ಆಪ್ ,ಫೇಸ್‌ಬುಕ್‌, ಪಬ್ಜಿ ಎಂದು ಕಾಲಾಹರಣ ಮಾಡಿ ಬೇಸರಗೊಂಡಿರುವಿರಾ? ಹಾಗಾದರೆ ನಿಮ್ಮ ಬೇಸರವನ್ನು ಕಳೆಯಲು ಮತ್ತು ಸಮಯವನ್ನು ಮೌಲ್ಯಯುತವಾಗಿ ಉಪಯೋಗಿಸಲು ಒಂದು ಅವಕಾಶವಿದೆ. ನಿಮ್ಮ ಅಮೂಲ್ಯವಾದ ಕ್ಷಣವನ್ನು ಹಾಗೂ ಜ್ಞಾನವನ್ನು ನೀವು ವಿಕಿಪೀಡಿಯಕ್ಕೆ ಕೊಡುಗೆಯಾಗಿ ನೀಡಬಹುದು. ಹೌದು! ಇದು ವಿಕಿಪೀಡಿಯದಲ್ಲಿ ಸಾಧ್ಯ.

ವಿಕಿಪೀಡಿಯ ಎಂದರೇನು?
ವಿಕಿಪೀಡಿಯ ಅಂತರ್ಜಾಲದ ಒಂದು ಸ್ವತಂತ್ರ ವಿಶ್ವಕೋಶವಾಗಿದ್ದು , ವಿಶ್ವದ ಲಕ್ಷಾಂತರ ಮಂದಿ ಸ್ವಯಂಸೇವಕರ ಸಮುದಾಯವೊಂದು ಒಟ್ಟಿಗೆ ಸೇರಿ ಸಹಕಾರ ಮನೋಭಾವದಿಂದ ಸಂಪಾದಿಸಿದ್ದಾಗಿದೆ. ಇದು ೨೦೦೧ ರಲ್ಲಿ ಪ್ರಾರಂಭವಾಗಿದ್ದು ಜಗತ್ತಿನ ೨೮೬ ಭಾಷೆಗಳಲ್ಲಿವೆ. ವಿಶೇಷವಾಗಿ ಇದರಲ್ಲಿ ೨೦ ಕ್ಕೂ ಹೆಚ್ಚು ಭಾರತೀಯ ಭಾಷೆಗಳೂ ಸೇರಿವೆ. ಇನ್ನೂ ಸುಮಾರು ೩೦೦ ಭಾಷೆಯ ವಿಕಿಪೀಡಿಯಗಳು ತಯಾರಿಯ ಹಂತದಲ್ಲಿವೆ.

ವಿಕಿಪೀಡಿಯಕ್ಕೆ ಯಾರು ಸಂಪಾದಿಸಬಹುದು ?
ವಿಕಿಪೀಡಿಯದ ವಿಶೇಷತೆ ಏನೆಂದರೆ ಇಲ್ಲಿ ಸಂಪಾದಿಸುವವರು ನಿಮ್ಮ ಹಾಗೂ ನಮ್ಮಂತಹವರು .
ಹೌದು! ಇಲ್ಲಿ ಭಾಷೆಯ ಜ್ಞಾನ ಉಳ್ಳವರು ಹಾಗೂ ಇಂಟರ್ನೆಟ್ ಸಂಪರ್ಕವಿರುವವರು , ಅವರು 10 ರ ಹರೆಯವರಾಗಿರಬಹುದು 60 ರ ಹರೆಯವರಾಗಿರಬಹುದು ಹೀಗೆ ಯಾರು ಬೇಕಾದರೂ ವಿಶ್ವದ ಯಾವುದೇ ಮೂಲೆಯಿಂದ ಯಾವುದೇ ಭಾಷೆಯ ವಿಕಿಪೀಡಿಯದಲ್ಲಿ ನೀವಿಚ್ಛಿಸುವ ವಿಷಯದ ಬಗ್ಗೆ ಸಂಪಾದಿಸಬಹುದು. ಆದರೆ ಇಲ್ಲಿ ಸಂಪಾದಿಸುವಾಗ ನಿಮ್ಮ ಭಾವನೆಯಾಗಲಿ , ಅಭಿಪ್ರಾಯವಾಗಲಿ , ಕಥೆ-ಕವನಗಳನ್ನಾಗಲಿ ಬರೆಯುವಂತಿಲ್ಲ.

ವಿಕಿಪೀಡಿಯಕ್ಕೆ ಸಂಪಾದಿಸುವುದು ಏತಕ್ಕೆ?ಇದರಿಂದ ಪ್ರಯೋಜನವಾದರೂ ಏನು?
ನೀವು ತಮ್ಮ ಭಾಷಾ ಒಲವನ್ನು ಹಾಗೂ ಜ್ಞಾನವನ್ನು ಇನ್ನಿತರ ರಿಗೆ ಹೇಗೆ ಹಂಚಿಕೊಳ್ಳಬೇಕು ಮತ್ತು ಎಲ್ಲಿ ಅಳವಡಿಸಬೇಕೆಂದು ತಿಳಿಯದೆ ಚಿಂತೆಯಲ್ಲಿದ್ದೀರಾ?ಅದಕ್ಕಾಗಿಯೇ ಭಾಷೆ ಮತ್ತು ಸಂಸ್ಕೃತಿಯನ್ನು ಆಚರಿಸಲು ಮತ್ತು ರಕ್ಷಿಸಲು ವಿಕಿಪೀಡಿಯ ಬಹು ಉಪಕಾರಿ . ಇದರಿಂದ ಒಬ್ಬ ವ್ಯಕ್ತಿಯಲ್ಲಿ ಸಹಕಾರ ಮನೋಭಾವ, ಜ್ಞಾನ, ಸಂಶೋಧನಾ ಕೌಶಲ್ಯ, ಬರವಣಿಗೆಯ ಶೈಲಿ, ವಿಮರ್ಶಾತ್ಮಕ ಆಲೋಚನೆ ಎಲ್ಲವನ್ನೂ ತೀಕ್ಷ್ಣಗೊಳಿಸಬಹುದು.
ವಿಕಿಪೀಡಿಯಾದಲ್ಲಿ ಸಂಪಾದಿಸಲು ಮೊದಲ ಹಂತ: ಖಾತೆ ತೆರೆಯುವುದು

ವಿಕಿಪೀಡಿಯಕ್ಕೆ ಲೇಖನ ಸೇರಿಸಲು ಇಚ್ಛಿಸುವಿರಾ?
ಹಾಗಾದರೆ ನೀವು ಮೊದಲು ವಿಕಿಪೀಡಿಯ ಸಂಪಾದಕರಾಗಿ ನೋಂದಾಯಿತರಾಗಿರಬೇಕು. ಮೊದಲಿಗೆ ಕನ್ನಡ ವಿಕಿಪೀಡಿಯವನ್ನು ತೆರೆಯಲು ಬ್ರೌಸರ್ನಲ್ಲಿ kn.wikipedia.org ಎಂದು ಟೈಪ್ ಮಾಡಬೇಕು.ಆಗ ವಿಕಿಪೀಡಿಯದ ಮುಖ್ಯ ಪುಟ ತೆರೆದುಕೊಳ್ಳುತ್ತದೆ. ನಂತರ ಮೇಲ್ಗಡೆ ಬಲಭಾಗದಲ್ಲಿ ಹೊಸ ಖಾತೆ ತೆರೆಯಿರಿ ಎಂಬ ಅಕ್ಷರಗಳ ಮೇಲೆ ಕ್ಲಿಕ್ ಮಾಡಬೇಕು. ಈಗ ಒಂದು ಪುಟ ತೆರೆದುಕೊಳ್ಳುತ್ತದೆ. ಬಳಕೆದಾರಹೆಸರು ಎಂಬಲ್ಲಿ ವಿಕಿಪೀಡಿಯದಲ್ಲಿ ನಿಮ್ಮ ಹೆಸರು ಹೇಗಿರಬೇಕು ಎಂಬುವುದನ್ನು ನಮೂದಿಸಿ .
ನಿಮ್ಮ ಹೆಸರು ತುಂಬಾ ಸಾಮಾನ್ಯ ಹೆಸರಾದರೆ ಅದನ್ನು ಈಗಾಗಲೇ ಯಾರಾದರೂ ತೆಗೆದುಕೊಂಡಿರುವ ಸಾಧ್ಯತೆ ಇರುತ್ತದೆ. ಆದುದರಿಂದ ನಿಮ್ಮ ಪೂರ್ಣ ಹೆಸರನ್ನು ಬಳಸುವುದು ಒಳ್ಳೆಯದು. ಪ್ರವೇಶಪದ ಎಂಬಲ್ಲಿ ನಿಮಗೆ ಯಾವ ಪಾಸ್ವರ್ಡ್ ಬೇಕೋ ಅದನ್ನು ಟೈಪ್ ಮಾಡಬೇಕು.ಪ್ರವೇಶಪದ ದೃಢೀಕರಿಸಿ ಎಂಬಲ್ಲಿ ಪುನಃ ಪ್ರವೇಶಪದವನ್ನು ಟೈಪ್ ಮಾಡಬೇಕು . ಮಿಂಚಂಚೆ ವಿಳಾಸ ಎಂಬಲ್ಲಿ ನಿಮ್ಮ ಇಮೇಲ್ ವಿಳಾಸವನ್ನು ನೀಡಬೇಕು .ಸುರಕ್ಷೆ ನಿಗ್ರಹಿಸು ಎಂಬಲ್ಲಿ ಅಲ್ಲೇ ಮೇಲೆ ಅಡ್ಡಾದಿಡ್ಡಿಯಾಗಿ ಕಾಣುವ ಅಕ್ಷರಗಳನ್ನು ಟೈಪ್ ಮಾಡಬೇಕು.ಕೊನೆಗೆ ಖಾತೆಯನ್ನು ಸೃಷ್ಟಿಸಿ ಎಂದು ಬರೆದ ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಬಳಕೆದಾರ ಖಾತೆ ಹೊಂದುವುದರ ಮೂಲಕ ನೀವು ವಿಕಿಪೀಡಿಯದಲ್ಲಿ ನಿಮ್ಮದೇ ಸ್ವಂತ ಪ್ರೊಫೈಲ್ ಅಂದರೆ ವ್ಯಕ್ತಿಚಿತ್ರ ಹೊಂದಬಹುದು .ಇತರ ಬಳಕೆದಾರರಿಂದ ಸಂದೇಶ ಸ್ವೀಕರಿಸಬಹುದು ಸೂಚನೆಗಳನ್ನು ಪಡೆಯಬಹುದು ಮತ್ತು ಇವೆಲ್ಲಕ್ಕಿಂತ ಹೆಚ್ಚಾಗಿ ಎಲ್ಲರಿಗೂ ಸಂಪಾದನೆಗಳನ್ನು ನೀವೇ ಮಾಡಿದ್ದು ಎಂದು ಗೊತ್ತಾಗುತ್ತದೆ.
ಲಾಗ್ ಇನ್ ಆದನಂತರ ಪುಟದ ಮೇಲ್ಭಾಗದಲ್ಲಿ ನಿಮ್ಮ ಬಳಕೆದಾರ ಹೆಸರಿನ ಜೊತೆಗೆ ಹಲವು ಮಾಹಿತಿಗಳನ್ನು ನೀವು ಕಾಣಬಹುದು ಅದರಲ್ಲಿ ಅದರಲ್ಲಿ ನನ್ನ ಪ್ರಯೋಗಪುಟ ಆಯ್ಕೆಯು ಕನ್ನಡ ವಿಕಿಪೀಡಿಯದಲ್ಲಿ ಲಭ್ಯವಿರುವ ನಿಮ್ಮದೇ ಆದ ಪ್ರಯೋಗ ಶಾಲೆಯನ್ನು ತೆರೆಯಲು ಸಹಾಯ ಮಾಡುತ್ತದೆ .ಇದರಲ್ಲಿ ನೀವು ಹಲವು ಟೈಪಿಂಗ್ ವಿಧಾನಗಳನ್ನು, ಆದೇಶಗಳನ್ನು ಮತ್ತು ಬಳಸುವ ವಿಧಾನ ಗಳನ್ನು ಕಲಿಯಬಹುದು .

ವಿಕಿಪೀಡಿಯಾದಲ್ಲಿ ಲೇಖನಗಳನ್ನು ಯಾವ ರೀತಿ ಸಂಪಾದಿಸಬಹುದು?
ಇಲ್ಲಿ ನೀವು ಎರಡು ರೀತಿಯಲ್ಲಿ ಸಂಪಾದಿಸಬಹುದು. ಒಂದು ಈಗಾಗಲೇ ಇರುವ ಲೇಖನಗಳನ್ನು ಅಭಿವೃದ್ಧಿಪಡಿಸಬಹುದು. ಇಲ್ಲವೇ ಹೊಸ ಲೇಖನಗಳನ್ನು ತಯಾರಿಸಲು ಮೊದಲು ಸರ್ಚ್ ಬಾಕ್ಸ್ನಲ್ಲಿ ಇದಾಗಲೇ ಲೇಖನ ಇದೆಯೋ ಇಲ್ಲವೋ ಎಂದು ಪರಿಶೀಲಿಸಬೇಕು ತದನಂತರ ನೀವು ಹೊಸ ಲೇಖನವನ್ನು ಸಂಪಾದಿಸಬಹುದು. ಒಂದು ಪೂರ್ಣವಾದ ಲೇಖನವನ್ನು ತಯಾರಿಸಲು ಅದರಲ್ಲಿ ಶೀರ್ಷಿಕೆ ,ಉಪಶೀರ್ಷಿಕೆ ,ಸಂಪರ್ಕಕೊಂಡಿಗಳು, ಆಂತರಿಕ ಸಂಪರ್ಕಕೊಂಡಿಗಳು ,ಬಾಹ್ಯ ಸಂಪರ್ಕಕೊಂಡಿಗಳು ಮತ್ತು ಉಲ್ಲೇಖ ಅತಿಅಗತ್ಯ.

ಅನಂತ್ ಸುಬ್ರಾಯ್ ಪಿ ವಿ, ಬೆಂಗಳೂರು ಮತ್ತು ಯಕ್ಷಿತಾ ಮೂಡುಕೊಣಾಜೆ

LEAVE A REPLY

Please enter your comment!
Please enter your name here